ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಪಕ್ಷಾಂತರ ಕ್ರಿಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಭಾರೀ ಮಾತಿನ ಚಕಮಕಿ ನಡೆಯುತ್ತಿದೆ.
ನನ್ನ ಜೊತೆ 20 ಶಾಸಕರು ಸಂಪರ್ಕದಲ್ಲಿದ್ದು ಸೂಕ್ತ ಸಮಯದಲ್ಲಿ ಅವರ ಹೆಸರನ್ನು ಬಹಿರಂಗಪಡಿಸುತ್ತೇನೆ, ಮೊದಲು ನೀವು ಬಿಜೆಪಿಯಿಂದ ಹೊರ ಬರುವ ಶಾಸಕರ ಹೆಸರನ್ನು ಬಹಿರಂಗಪಡಿಸಿ ಎಂದು ಕಂದಾಯ ಸಚಿವ ಆರ್.ಅಶೋಕ್ ಕಾಂಗ್ರೆಸ್ ನಾಯಕರಿಗೆ ಬಹಿರಂಗ ಸವಾಲು ಹಾಕಿದ್ದರು.
ಇದಕ್ಕೆ ತಿರುಗೇಟು ಎಂಬಂತೆ ಶಾಸಕ ಬಸನಗೌಡ ಪಾಟೀಲರ “ಒಬ್ಬ ಸಚಿವರು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರ ಜೊತೆ ಸಂಪರ್ಕದಲ್ಲಿದ್ದಾರೆ. ಮತ್ತೋರ್ವ ಶಾಸಕ ಹೋಗಲು ಸಿದ್ಧರಿದ್ದಾರೆ” ಎಂಬ ಹೇಳಿಕೆಯನ್ನು ಉಲ್ಲೇಖಿಸುತ್ತಾ ಇದು ಏನನ್ನು ಸೂಚಿಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೇಳಿದ್ದಾರೆ.
ಬುಟ್ಟಿಯಲ್ಲಿ ಹಾವಿದೆ ಎಂದು ಪುಂಗಿ ಊದುವ ಬದಲು ಧೈರ್ಯವಿದ್ದರೆ ಶಾಸಕರ ಹೆಸರನ್ನು ಬಹಿರಂಗಪಡಿಸಿ ಎಂದು ಬಿಜೆಪಿ ನಾಯಕರು ಸವಾಲು ಹಾಕಿದ್ದಾರೆ.
ಅದಕ್ಕೆ ಅಷ್ಟೇ ತೀಕ್ಷ್ಣವಾಗಿ ಉತ್ತರಿಸಿರುವ ಕಾಂಗ್ರೆಸ್ ನಾಯಕರು, ನಮ್ಮ ಬುಟ್ಟಿಯಲ್ಲಿ ಹಾವಿದೆಯೋ ಲಕ್ಷ್ಮೀ ಪಟಾಕಿ ಇದೆಯೋ ಎಂಬುವುದು ಸದ್ಯದಲ್ಲೇ ಗೊತ್ತಾಗಲಿದೆ. ಅಷ್ಟರ ವರೆಗೆ ಕಾದು ನೋಡಿ ಎಂದು ಹೇಳಿದ್ದಾರೆ.