ನಾರಾಯಣ ಗುರು ಸ್ವಾಭಿಮಾನದ ನಡಿಗೆ, ಸಮಾನತೆಯ ಮನೋ ಗುಡಿಗೆ

Prasthutha|


-ಪೇರೂರು ಜಾರು

- Advertisement -


ಒಕ್ಕೂಟ ಸರಕಾರವು ಕೇರಳ ಸರಕಾರದ ನಾರಾಯಣ ಗುರು ಅವರಿದ್ದ ಸ್ತಬ್ಧ ಚಿತ್ರವನ್ನು ನಿರಾಕರಿಸಲು ನೀಡಿದ ಕಾರಣ ಯಾವ ರೀತಿಯಿಂದಲೂ ಸಬಲವಾಗಿರಲಿಲ್ಲ. ಬಿಜೆಪಿ ಸರಕಾರವು ತಾನು ಅಧಿಕಾರದಲ್ಲಿರುವ ಮತ್ತು ಹಿಂದೆ ತಾನು ಕೂಟದಲ್ಲಿ ಅಧಿಕಾರದಲ್ಲಿ ಇದ್ದು ಈಗ ಕಾಂಗ್ರೆಸ್ ಸರಕಾರಗಳಿರುವ ಒಂದೆರಡು ರಾಜ್ಯಗಳ ಹೊರತು ಬೇರೆ ಬಿಜೆಪಿಗೆ ನೆಲೆಗಳಿಲ್ಲದ ಯಾವುದೇ ರಾಜ್ಯದ ಟ್ಯಾಬ್ಲೋ ಆಯ್ಕೆ ಮಾಡಿರಲಿಲ್ಲ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.


ಇದನ್ನು ಜಗತ್ತಿನ ಎಲ್ಲ ಕಡೆಯ ನಾರಾಯಣ ಗುರು ಅನುಯಾಯಿಗಳು ಖಂಡಿಸಿದ್ದಾರೆ. ನಾರಾಯಣ ಗುರುಗಳು ಬಂದಿದ್ದ ಇಂದಿನ ಕರ್ನಾಟಕದ ಏಕೈಕ ಪ್ರದೇಶ ಎಂದರೆ ಮಂಗಳೂರು. 1908ರಲ್ಲಿ ಜಾಗ ನೋಡಲು, 1909ರಲ್ಲಿ ಅಡಿಗಲ್ಲು ಹಾಕಲು, 1912ರಲ್ಲಿ ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯ ಉದ್ಘಾಟನೆಗೆಂದು ನಾರಾಯಣ ಗುರುಗಳು ಮಂಗಳೂರಿಗೆ ಬಂದಿದ್ದರು. ಹಾಗಾಗಿ ರಾಜ್ಯದಲ್ಲಿ ನಾರಾಯಣ ಗುರುಗಳ ನೇರ ಸಂಬಂಧ ಇದ್ದ ಏಕೈಕ ಸ್ಥಳ ಮಂಗಳೂರು.

- Advertisement -


ಗುರುಗಳ ಟ್ಯಾಬ್ಲೋ ನಿರಾಕರಣೆಗೊಂಡುದು ಸಹಜವಾಗಿಯೇ ಇಲ್ಲಿ ಬಹಳ ಚಲನೆಯನ್ನುಂಟು ಮಾಡಿತು. ಕಟ್ಟಾ ಬಿಜೆಪಿಗರ ಹೊರತು ಬೇರೆಲ್ಲ ರಾಜಕೀಯ ಪಕ್ಷಗಳವರು ಮತ್ತು ಸಂಘಟನೆಗಳವರು ನಾರಾಯಣ ಗುರು ಟ್ಯಾಬ್ಲೊ ನಿರಾಕರಣೆಗೀಡಾದುದನ್ನು ಖಂಡಿಸಿದರು. ಸಂಘ ಪರಿವಾರದವರ ಇಲ್ಲವೇ ಅವರ ಪರವಾದವರ ಅಥವಾ ಬಿಜೆಪಿಯಲ್ಲಿರುವ ಬಿರುವ ನಾಯಕರ ಸಾಕುಪೋಕು ಕಾರಣಗಳು ಉಂಡ ಮನೆಯ ದೀನ ಭಾವ ತೋರಿಸಿತೇ ಹೊರತು ನಿಜ ಮನೋಭಾವವನ್ನಲ್ಲ.


ಕಮ್ಯೂನಿಸ್ಟ್ ಪಕ್ಷ, ಜೆಡಿಎಸ್ ಮೊದಲಾದವರು ಸಹ ನಾರಾಯಣ ಗುರುಗಳ ಸ್ವಾಭಿಮಾನದ ನಡಿಗೆ ನಡೆಸಿದರು. ಇದಕ್ಕೆಲ್ಲ ನಾಂದಿಯಾದುದು ಯುವ ಕಾಂಗ್ರೆಸ್ ನವರು ಮಲ್ಲಿಕಟ್ಟೆಯ ತಮ್ಮ ಕಚೇರಿಯಿಂದ ಕುದ್ರೋಳಿ ದೇವಸ್ಥಾನಕ್ಕೆ ನಡೆಸಿದ ನಡಿಗೆ. ಅದಕ್ಕೆ ಕಳಶ ಪ್ರಾಯವಾಗಿ ಜನವರಿ 26ರಂದು ಸ್ವಾಭಿಮಾನದ ನಡಿಗೆ ಭಾರೀ ಜೋರಾಗಿ ನಡೆಯಿತು.
ಈ ಸ್ವಾಭಿಮಾನದ ನಡಿಗೆಯು ಕಂಕನಾಡಿಯ ಕೋಟಿ ಚೆನ್ನಯ ಗರೊಡಿಯಿಂದ ಆರಂಭವಾಗಿ ಕತ್ತಲಾಗುವಾಗ ಕುದ್ರೋಳಿ ದೇವಾಲಯದಲ್ಲಿ ಸಮಾಪ್ತಿ ಕಂಡಿತು. ಆರಂಭ ಮತ್ತು ಅಂತ್ಯದಲ್ಲಿ ಕಾಲ್ನಡಿಗೆಯಾಗಿದ್ದ ಇದು ಮಧ್ಯದಲ್ಲಿ ವಾಹನ ಜಾಥಾವಾಗಿ ಕಂಗೊಳಿಸಿತು. ಕಂಕನಾಡಿಯ ಗರೊಡಿಯಿಂದ ಪಂಪ್ ವೆಲ್, ನೀರುಮಾರ್ಗ, ಗುರುಪುರ, ಕೈಕಂಬ, ಸುಂಕದಕಟ್ಟೆ, ಬಜ್ಪೆ, ಕಾವೂರು, ಕೂಳೂರು, ಸುರತ್ಕಲ್, ಉರ್ವ ಸ್ಟೋರ್.

ಉರ್ವ ಸ್ಟೋರ್ ನಿಂದ ಸಂಜೆ ಬೃಹತ್ ಕಾಲ್ನಡಿಗೆ ಜಾಥಾ ನಗರದ ಮುಖ್ಯ ರಸ್ತೆಗಳಲ್ಲಿ ಹಾದು ಕುದ್ರೋಳಿ ದೇವಸ್ಥಾನದಲ್ಲಿ ಸಮಾರೋಪ ಕಂಡಿತು. ಸಮಾರೋಪದಲ್ಲಿ ಕಾಂಗ್ರೆಸ್ಸಿಗರು ಹೇಳುವಂತೆ ಹಿರಿಯ ಭೀಷ್ಮ ಹಾಗೂ ಕುದ್ರೋಳಿ ಕ್ಷೇತ್ರದ ಸುಧಾರಕ ಜನಾರ್ದನ ಪೂಜಾರಿಯವರ ಶುಭಾಶೀರ್ವಾದದೊಂದಿಗೆ ನಡಿಗೆ ಕೊನೆಗಂಡಿತು. ಬೆಳಿಗ್ಗೆ ಕಂಕನಾಡಿಯಿಂದ ಹೊರಡುವಾಗಲೂ ಪೂಜಾರಿಯವರ ಆಶೀರ್ವಾದವನ್ನು ಹಿರಿಯ ನಾಯಕರು ನೆನಪಿಸಿಕೊಂಡರು.


ವಿಶೇಷವೆಂದರೆ ಗಣರಾಜ್ಯ ದಿನದ ಸ್ವಾಭಿಮಾನದ ನಡಿಗೆಯನ್ನು ಬಹುತೇಕ ಕಾಂಗ್ರೆಸ್ ಪಕ್ಷದವರು ಸಂಘಟಿಸಿದ್ದರು. ಆದರೆ ಯಾರೊಬ್ಬರೂ ಪಕ್ಷದ ಬಾವುಟದೊಡನೆ ಕಾಣಿಸಿಕೊಳ್ಳದೆ ಹಳದಿ ಶಾಲು ಮತ್ತು ಹಳದಿ ಬಾವುಟದೊಂದಿಗೆ ಕಾಣಿಸಿಕೊಂಡರೆಂಬುದು ವಿಶೇಷ. ಬೇಡದ ಕಾರಣಗಳನ್ನು ಹೇಳಿ ಈ ಸ್ವಾಭಿಮಾನದ ನಡಿಗೆಯಿಂದ ದೂರ ಉಳಿದವರು ಗಳಿಸಿದ್ದು ಏನೂ ಇಲ್ಲ.
ನಾರಾಯಣ ಗುರುಗಳನ್ನು ಕೇಸರಿಗೊಳಿಸಿ ಅವರ ನಿಜಾರ್ಥವನ್ನು ಈಗಾಗಲೇ ಕೆಲವರು ಕುಗ್ಗಿಸಿದ್ದಾರೆ. ಕಂಕನಾಡಿ ಗರೊಡಿಯನ್ನು ಸಹ ಇತ್ತೀಚಿನ ವರುಷಗಳಲ್ಲಿ ಜಾತ್ರೆ ಸಮಯದಲ್ಲಿ ಕೇಸರಿಯಲ್ಲಿ ಮುಳುಗಿಸುವ ಕೆಲವರಿಗೆ ಗುರುಗಳ ದಾರಿಯಾಗಲಿ, ಗರೊಡಿಗಳ ಬಿಳಿ ಕೆಂಪು ಬಾವುಟಗಳ ಚರಿತ್ರೆಯ ಅರಿವು ಇರಲಿಕ್ಕಿಲ್ಲ.


ಸ್ವಾಭಿಮಾನದ ನಡಿಗೆಯ ದಿನ ಗರೊಡಿ ಮತ್ತು ನಡಿಗೆಯ, ಜಾಥಾದ ಪ್ರದೇಶಗಳೆಲ್ಲ ಹಳದಿಯಿಂದ ಕಂಗೊಳಿಸಿ ಸ್ವಾಭಿಮಾನದ ಹಸಿವನ್ನು ಹೆಚ್ಚಿಸಿತು. ನಾರಾಯಣ ಗುರುಗಳು ಬಿಳಿ ಬಟ್ಟೆಯಲ್ಲಿ ಕಂಗೊಳಿಸಿದವರು. ಕೊನೆಯ ದಿನಗಳಲ್ಲಿ ಶಿವಗಿರಿ ಜಾತ್ರೆಗೆ ಹಳದಿ ಶಾಲನ್ನು ಆಯ್ಕೆ ಮಾಡಿ ನೀಡಿದವರು ಗುರುಗಳು. ಅದು ಇಂದಿಗೂ ಗುರು ಕ್ಷೇತ್ರಗಳ ಹೆಗ್ಗುರುತಾಗಿದೆ. ಸ್ವಾಭಿಮಾನದ ನಡಿಗೆಯು ಆ ನಿಟ್ಟಿನಲ್ಲಿ ಒಂದು ಮೈಲಿಗಲ್ಲು ಆಯಿತು.
ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂಬ ಮಂತ್ರವು ಈ ಜಗತ್ತಿಗೆ ಸಮ್ಮತವಾದಂದು ಇಲ್ಲಿ ಯಾವ ಜಾತಿ ಮತಗಳ ವೈಷಮ್ಯವೂ ಉಳಿಯುವುದು ಸಾಧ್ಯವಿಲ್ಲ. ನಾರಾಯಣ ಗುರುಗಳು ಶಿಕ್ಷಣಕ್ಕೆ ನೀಡಿದ ಮಹತ್ವವು ಕೇರಳವನ್ನು ದೇಶದಲ್ಲಿ ಶಿಕ್ಷಣ ಕ್ರಾಂತಿಯ ರಾಜ್ಯವಾಗಿ ಮಾಡಿದೆ. ಅದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸತ್ಯವೆನಿಸಿದೆ. ಹಣಕ್ಕಿಂತ ಜ್ಞಾನ ಮುಖ್ಯ ಎಂದ ಗುರುಗಳ ಪರಿಕಲ್ಪನೆ ಸತ್ಯಸ್ಯ ಸತ್ಯ.


ಇಂದಿನ ಜನಾಂಗಕ್ಕೆ ಗೊತ್ತಿಲ್ಲದ ಸತ್ಯವೆಂದರೆ ಪುರೋಹಿತಶಾಹಿಗಳು ನಾರಾಯಣ ಗುರುಗಳ ಮೇಲೆ ಹಿಂದೂ ಧರ್ಮ ಹಾಳು ಮಾಡುತ್ತಿದ್ದಾನೆ ಎಂದು ಮೊಕದ್ದಮೆ ಹೂಡಿದ್ದರು. ತನ್ನ ಹೋರಾಟದ ಮೂಲಕವೇ ಅದಕ್ಕೆಲ್ಲ ಉತ್ತರಿಸಿದವರು ಗುರುಗಳು. ಮದರಾಸು ಹೈಕೋರ್ಟು ಆ ಕೇಸನ್ನು ವಜಾ ಮಾಡಿತ್ತು.


ತನ್ನ ಎಳೆಯ ಪ್ರಾಯದಲ್ಲಿ ಅಡ್ಡ ನಾಮ ಧರಿಸುತ್ತಿದ್ದ ಗುರುಗಳು ತಾನೇ ಗುರುವಾದ ಮೇಲೆ ಯಾವ ಧಾರ್ಮಿಕ ಚಿಹ್ನೆಯನ್ನೂ ಧರಿಸುತ್ತಿರಲಿಲ್ಲ. ಅಂಥ ಗುರುಗಳ ನಿರಾಕರಣೆಯು ಬಿಜೆಪಿಯ ಪುರೋಹಿತಶಾಹಿ ಮನೋಭಾವವನ್ನು ತೋರಿಸುತ್ತದೆ.
ಮಂಗಳೂರಿನಲ್ಲಿ ನಡೆದ ಸ್ವಾಭಿಮಾನದ ನಡಿಗೆ ಮತ್ತು ವಾಹನ ಜಾಥಾವು ಸರ್ವ ಜನಾಂಗದ ಶಾಂತಿಯ ತೋಟದ ಕಲ್ಪನೆಯೊಂದಿಗೆ ಎಲ್ಲ ಜಾತಿ ಜನಾಂಗಗಳವರ ಪಾಲ್ಗೊಳ್ಳುವಿಕೆಗೆ ಸಾಕ್ಷಿಯಾಯಿತು. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧ ಮೊದಲಾದವರು ಇದರಲ್ಲಿ ಭಾಗವಹಿಸಿದರು. ಆದರೆ ಉದ್ದಕ್ಕೂ ಎಲ್ಲೂ ಯಾವುದೇ ಧರ್ಮದ ಘೋಷಣೆಯಾಗಲಿ, ಯಾವುದೇ ಧ್ವಜ ಗುರುತುಗಳಾಗಲಿ ಕಾಣಿಸಲಿಲ್ಲ. ಉದ್ದಕ್ಕೂ ಅದು ಗುರು ತತ್ವಗಳ ಮತ್ತು ಗುರು ದಾರಿಯ ಮಹಾ ನದಿಯಾಗಿ ಹರಿಯಿತು.


ಇಂದಿನ ಸಮಾಜವು ಸ್ವಾಭಿಮಾನ ರಹಿತವಾಗುತ್ತ ಸಾಗಿದೆ. ಏಕ ದೇವ ಸಹಿತದ ನಾರಾಯಣ ಗುರುಗಳ, ದೇವರೇ ಇಲ್ಲವೆಂದ ಪೆರಿಯಾರರ ಸ್ವಾಭಿಮಾನ ಚಳವಳಿಗಳು ಇಂದು ತೆರೆ ಮರೆಗೆ ಸರಿದಿವೆ. ಮಂಗಳೂರಿನ ಸ್ವಾಭಿಮಾನದ ನಡಿಗೆಯು ಅಂಥದನ್ನು ಮರು ನೆಲೆಗೊಳಿಸುವುದಕ್ಕೆ ದಾರಿ ಮಾಡಿತು. ಅದು ನಿರಂತರತೆ ಕಂಡುಕೊಂಡರೆ ಅದು ಗುರುಗಳ ದಾರಿಯಲ್ಲಿ ಸಮಾಜ ಸುಧಾರಣೆ ಆಳ ಬೇರನ್ನು ಒದಗಿಸುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.

Join Whatsapp