ಬೈರತಿ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ನ್ಯಾಯಾಲಯ ಆದೇಶ: ವಿಧಾನಸಭೆಯಲ್ಲಿ ಚರ್ಚೆಗೆ ಒತ್ತಾಯಿಸಿ ಕಾಂಗ್ರೆಸ್ ಧರಣಿ

Prasthutha|

ಬೆಳಗಾವಿ: ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ನ್ಯಾಯಾಲಯ ಆದೇಶಿಸಿರುವ ವಿಷಯ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿದ್ದು, ಸಚಿವರ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯಿಸಿದ ಪ್ರಸಂಗ ನಡೆಯಿತು.

- Advertisement -

ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ನ್ಯಾಯಾಲಯ ನೀಡಿರುವ ಆದೇಶದ ಕುರಿತು ಚರ್ಚೆಗೆ ಅವಕಾಶ ನೀಡಬೇಕೆಂದು ಕೋರಿ ಕಾಂಗ್ರೆಸ್ ಮಂಡಿಸಿದ್ದ ನಿಲುವಳಿ ಸೂಚನೆಯನ್ನು ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ತಿರಸ್ಕರಿಸಿದರು. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಕೆಲ ಕಾಲ ಪ್ರತಿಭಟನೆ ನಡೆಸಿದರು.
ಸಚಿವರ ರಾಜೀನಾಮೆ ವಿಚಾರದ ಚರ್ಚೆಗೆ ಅವಕಾಶ ಕೋರಿ ಕಾಂಗ್ರೆಸ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್, ನಾರಾಯಣ ಸ್ವಾಮಿ ಅವರು ನಿಲುವಳಿ ಮಂಡಿಸಿದರು. ನಿಯಮ 59 ರ ಅಡಿಯಲ್ಲಿ ಚರ್ಚೆಗೆ ಅವಕಾಶ ಕೋರಿದರು. ಆದರೆ ನಿಲುವಳಿಯನ್ನು ಬಸವರಾಜ ಹೊರಟ್ಟಿ ತಿರಸ್ಕರಿಸಿದರು.

59 ರ ಬದಲಾಗಿ 63 ಗೆ ಬದಲಾಯಿಸಲು ಬರೆದುಕೊಂಡುವಂತೆ ಹೊರಟ್ಟಿ ಸೂಚನೆ ನೀಡಿದರು. ಆದರೆ ಇದಕ್ಕೆ ಒಪ್ಪದೆ ಕಾಂಗ್ರೆಸ್ ಸದಸ್ಯರು, ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಕೊನೆಗೂ ಹೊರಟ್ಟಿ ಅವರು ಪ್ರಶ್ನೋತ್ತರ ಮುಗಿದ ಮೇಲೆ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಹೇಳಿಕೆ ನೀಡಿದರು. ಇದಕ್ಕೆ ಒಪ್ಪಿದ ಕಾಂಗ್ರೆಸ್ ಸದಸ್ಯರು ಧರಣಿಯನ್ನು ವಾಪಸ್ ಪಡೆದರು.
ಇದಕ್ಕೂ ಮೊದಲು ಕಾಂಗ್ರೆಸ್ ಸದಸ್ಯ ನಾರಾಯಣಸ್ವಾಮಿ ಮಾತನಾಡಿ, ಸರ್ಕಾರದ ಹಾಲಿ ಸಚಿವ ಬೈರತಿ ಬಸವರಾಜು, ಮಾಜಿ ಸಚಿವ ಶಂಕರ್ ಮೇಲೆ ಐಪಿಸಿ ಸೆಕ್ಷನ್ 420 ಸೇರಿದಂತೆ ಇನ್ನಿತರ ಅಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕೋರ್ಟ್ ಆದೇಶಿಸಿದೆ. ಹೀಗಾಗಿ, ಇದೊಂದು ನಾಲಾಯಕ್ ಸರ್ಕಾರವಾಗಿದ್ದು, ಸಚಿವರೂ, ಸರ್ಕಾರವೂ ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದರು.ಎಸ್.ಆರ್.ಪಾಟೀಲ್ ಅವರು, ಇದೊಂದು ಪ್ರಮುಖ ವಿಚಾರವಾಗಿದ್ದು, ಕೂಲಂಕಷವಾಗಿ ಚರ್ಚೆ ನಡೆಸಲು ಅವಕಾಶ ಕಲ್ಪಿಸಬೇಕು ಎಂದು ಸಭಾಪತಿ ಬಳಿ ಬೇಡಿಕೆಯಿಟ್ಟರು.

- Advertisement -

ಇದಕ್ಕೆ ಸಮಾಜಾಯಿಷಿ ನೀಡಿದ ಆರ್.ಅಶೋಕ್, ಸಚಿವರ ಮೇಲಿನ ಮೊಕದ್ದಮೆ ವಿಚಾರ ಕೋರ್ಟಿನಲ್ಲಿ ಇದೆ. ಹಾಗಾಗಿ, ಪ್ರತಿಭಟನೆ ಹಿಂಪಡೆದು ಸಭಾಪತಿ ಆದೇಶ ಪಾಲಿಸಿ ಎಂದು ಹೇಳಿದರು. ಕೊನೆಯದಾಗಿ ಬಸವರಾಜ ಹೊರಟ್ಟಿ ಅವರು, ಇದೆಲ್ಲ ರೆಕಾರ್ಡ್ ಗೆ ಹೋಗಬಾರದು ಎಂದು ಸೂಚನೆ ನೀಡಿದರು.



Join Whatsapp