ಕರ್ನಾಟಕ ಪೊಲೀಸ್ ರಾಜ್ಯವಾಗುವುದನ್ನು ತಡೆಯಬೇಕಿದೆ: ಅಥಾವುಲ್ಲ ಪೂಂಜಾಲಕಟ್ಟೆ

Prasthutha|

ಮಂಗಳೂರು: ರಾಜ್ಯದಲ್ಲಿ ಇತ್ತೀಚಿಗೆ ಕೆಲ ದಿನಗಳಿಂದ ಕಾನೂನನ್ನು ದೂರಪಯೋಗಪಡಿಸಿಕೊಂಡು ಪೊಲೀಸರು ನಡೆಸುತ್ತಿರುವ ದೌರ್ಜನ್ಯದ ಮಿತಿ ಮೀರಿದೆ. ಇದನ್ನು ತಡೆಯಲು ಪೊಲೀಸ್ ಕ್ರೌರ್ಯದ ವಿರುದ್ಧ ದೊಡ್ಡ ಮಟ್ಟದ ಜನಾಂದೋಲದ ಅಗತ್ಯವಿದೆ ಎಂದು ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷ ಅಥಾವುಲ್ಲ ಪೂಂಜಲಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -


ರಾಜ್ಯದ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದ ದಿನದಿಂದಲೇ ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಪ್ರಮುಖವಾಗಿ ಜನರಿಗೆ ರಕ್ಷಣೆ ಕೊಡಬೇಕಾದ ಪೊಲೀಸರು ಅಪರಾಧಿಗಳ, ಅಕ್ರಮಿಗಳ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಜೆಪಿ ತನ್ನ ರಾಜಕೀಯ ಲಾಭಕ್ಕಾಗಿ ಕೋಮು ಧ್ರುವೀಕರಣಗೊಳಿಸಲು ಲವ್ ಜಿಹಾದ್, ಗೋಹತ್ಯೆ ಹೆಸರನಲ್ಲಿ ದ್ವೇಷ ಬಿತ್ತಿ ಮುಸ್ಲಿಮರನ್ನು ಗುರಿ ಪಡಿಸಿ ದೌರ್ಜನ್ಯವೆಸಗುವಾಗ ಸರಕಾರದ ಅಣತಿಯಂತೆ ಪೊಲೀಸ್ ಇಲಾಖೆಯು ಸಹ ಮುಸ್ಲಿಮರ ಮೇಲೆ ದಬ್ಬಾಳಿಕೆ ನಡೆಸುವ ಎಲ್ಲಾ ಪ್ರಯತ್ನಗಳಿಗೆ ಕೈ ಹಾಕುತ್ತಿದೆ. ಸರಕಾರ ಪೊಲೀಸ್ ಇಲಾಖೆಗೆ ಸಂಪೂರ್ಣ ಅಧಿಕಾರ ಕೊಟ್ಟು ಮುಸ್ಲಿಮರ ವಿರುದ್ಧ ಕ್ರೂರವಾಗಿ ವರ್ತಿಸಲು ಸೂಚಿಸುತ್ತಿದೆ. ಇದಕ್ಕೆ ಪೂರಕವಾಗಿ ಬೆಂಗಳೂರಿನಲ್ಲಿ ಅಮಾಯಕ ಮುಸ್ಲಿಂ ಯುವಕರನ್ನು ಪೊಲೀಸರು ಬಂಧನದಲ್ಲಿರಿಸಿ ಕ್ರೂರವಾಗಿ ಕಿರುಕುಳ ನೀಡಿ ಹಿಂಸಿಸಿದ ಎರಡು ಘಟನೆಗಳು ಸಾಕ್ಷಿಯಾಗಿ ಗೋಚರಿಸುತ್ತವೆ.


ಈ ಸರಣಿ ದುರ್ಘಟನೆಗಳ ಬೆನ್ನಲ್ಲೇ ಉಪ್ಪಿನಂಗಡಿಯಲ್ಲಿ ಅಕ್ರಮವಾಗಿ ಸಾಮಾಜಿಕ ಹೋರಾಟಗಾರರನ್ನು ಬಂಧಿಸಿದ್ದ ಪೊಲೀಸರ ನಡೆಯನ್ನು ಖಂಡಿಸಿ ಪ್ರತಿಭಟಿಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಭೀಕರ ಲಾಠಿ ಪ್ರಹಾರದ ಘಟನೆಯು ಪೊಲೀಸ್ ರಾಜ್ಯಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಪೊಲೀಸರ ತಾರತಮ್ಯ ನೀತಿ, ಕೋಮುವಾದಿ ಮನಸ್ಥಿತಿಯು ಕರ್ನಾಟಕದ ಸೌಹಾರ್ದತೆಯ ಪರಂಪರೆಗೆ ಕಪ್ಪು ಚುಕ್ಕೆಯಾಗಿದೆ. ಹೀಗೆ ಮುಂದುವರೆದರೆ ರಾಜ್ಯದಲ್ಲಿ ಪೊಲೀಸರಿಂದಲೇ ಅವರ ನಡೆಯಿಂದಾಗಿ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗಲಿದೆ. ರಾಜ್ಯದ ಜನರು ಎಚ್ಚೆತ್ತುಕೊಂಡು ಕರ್ನಾಟಕವನ್ನು ಪೊಲೀಸ್ ರಾಜ್ಯವಾಗುವುದನ್ನು ತಡೆಯಬೇಕಿದೆ ಎಂದು ಅಥಾವುಲ್ಲ ಪೂಂಜಲಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp