ಬೆಂಗಳೂರು: ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ ಹಂಚಿಕೆ ಮತ್ತು ವಿದ್ಯಾರ್ಥಿಗಳಿಗೆ ಸಾಲ ನೀಡುವ ಅರಿವು-1 ಯೋಜನೆಯಲ್ಲಿ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನವನ್ನು ಬೇಕಾಬಿಟ್ಟಿಯಾಗಿ ಹಂಚಲಾಗಿದೆ ಮತ್ತು ಅರಿವು-1 ಯೋಜನೆಯಲ್ಲಿ ಇಲಾಖೆಯ ಸಿಬ್ಬಂದಿಗಳು ಅಕ್ರಮವೆಸಗಿದ್ದಾರೆ ಎನ್ನಲಾಗಿದೆ.
ಮುಸ್ಲಿಮ್ ವಿದ್ಯಾರ್ಥಿಗಳಿಗಾಗಿ ಮೀಸಲಿಟ್ಟ ವಿದ್ಯಾರ್ಥಿ ವೇತನ ಹಣವನ್ನು ಮಸೀದಿ, ದರ್ಗಾ ಮತ್ತು ಪ್ರತಿಷ್ಠಿತ ಸಂಘ-ಸಂಸ್ಥೆಗಳಿಗೆ ವಿಶೇಷ ಅನುದಾನವಾಗಿ ನೀಡಲಾಗಿದೆ.
ರಾಜ್ಯದ ಮಸೀದಿ, ದರ್ಗಾ ಮತ್ತು ಸಮುದಾಯದ ಸಂಘ ಸಂಸ್ಥೆಗಳಿಗೆ ವಿಶೇಷ ಅನುದಾನ ಬಿಡುಗಡೆಗೆ ಹಣದ ಕೊರತೆಯಿದ್ದ ಕಾರಣ ವಿದ್ಯಾರ್ಥಿ ವೇತನಕ್ಕಾಗಿ ಮೀಸಲಿಟ್ಟ ಹಣದ ಬಳಕೆಗೆ ಅವಕಾಶ ನೀಡುವಂತೆ ಇಲಾಖೆಯು ಆರ್ಥಿಕ ಇಲಾಖೆಗೆ ಪತ್ರ ಬರೆದಿತ್ತು. ಆರ್ಥಿಕ ಇಲಾಖೆಯು 5.20 ಕೋಟಿ ರೂಪಾಯಿ ವಿನಿಯೋಗಕ್ಕೆ ಅಲ್ಪಸಂಖ್ಯಾತ ಇಲಾಖೆಗೆ ಒಪ್ಪಿಗೆ ನೀಡಿತ್ತು.
ಅರಿವು -2 ಯೋಜನೆಯಲ್ಲಿ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಾಂಗಕ್ಕಾಗಿ ಇರುವ ಸಾಲ ಸೌಲಭ್ಯವನ್ನು ಇಲಾಖೆಯ ಸಿಬ್ಬಂದಿಗಳು ನಕಲಿ ಖಾತೆಗಳನ್ನು ಸೃಷ್ಟಿಸಿ ಸಾಲ ಮಂಜೂರು ಮಾಡಿಸಿಕೊಂಡು ಹಣವನ್ನು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿರುವುದಾಗಿ ರಹಮಾನ್ ಎಂಬವರು ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ದೂರು ನೀಡಿದ್ದಾರೆ. ಬೆಂಗಳೂರಿನ ಆರ್.ಟಿ ನಗರದಲ್ಲಿ ಈ ಕುರಿತು ದೂರು ದಾಖಲಾಗಿದೆ ಎನ್ನಲಾಗಿದೆ.
ಎಸ್.ಐ.ಒ ಖಂಡನೆ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕಾಗಿ ಮೀಸಲಿಟ್ಟ ಹಣದಲ್ಲಿ 5.2 ಕೋಟಿ ಹಣವನ್ನು ಅಲ್ಪಸಂಖ್ಯಾತ ಇಲಾಖೆ ದುರುಪಯೋಗ ಪಡಿಸಿಕೊಂಡಿದ್ದು, ಅರಿವು -2 ಯೋಜನೆಯಲ್ಲಿ 50 ಕೋಟಿ ರೂಪಾಯಿ ಅಕ್ರಮ ನಡೆದಿದೆ. ಈ ಕುರಿತು ರಾಜ್ಯ ಸರಕಾರ ತನಿಖೆ ನಡೆಸಿ ಕ್ರಮಕೈಗೊಳ್ಳ ಬೇಕು ಎಂದು ಎಸ್.ಐ.ಒ ಆಗ್ರಹಿಸಿದೆ.