ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ| ನ್ಯಾಯಾಲಯಕ್ಕೆ ಸಾಕ್ಷ್ಯಗಳನ್ನು ಸಲ್ಲಿಸಿದ ಪೊಲೀಸರು

Prasthutha|

ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನ್ಯಾಯಾಲಯಕ್ಕೆ ಸಾಕ್ಷ್ಯಗಳನ್ನು ಸಲ್ಲಿಸಿದ್ದಾರೆ.

- Advertisement -

ಉಡುಪಿ ಪೊಲೀಸರು ಸಂತೋಷ್ ಪಾಟೀಲ್ ಅವರ ಎರಡೂ ಮೊಬೈಲ್ ಡಿಟೇಲ್ಸ್, FSL ವರದಿ ಸೇರಿದಂತೆ ಇತರೆ ಸಾಕ್ಷ್ಯಗಳನ್ನು ಜನಪ್ರತಿನಿಧಿಗಳ ಕೋರ್ಟಿಗೆ ಸಲ್ಲಿಸಿದ್ದಾರೆ.
ತನಿಖೆ ವೇಳೆ ಪೊಲೀಸರು ಮಾಡಿದ್ದ ವಿಡಿಯೋ ನೀಡಲು ಕೋರ್ಟ್ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಉಡುಪಿ ಪೊಲೀಸರು ಮಂಗಳವಾರ (ಜನವರಿ 31) ಸಾಕ್ಷ್ಯ ಸಲ್ಲಿಕೆ ಮಾಡಿದ್ದಾರೆ.

ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆರೋಪಿಯಾಗಿದ್ದರು. ಆದ್ರೆ, ಉಡುಪಿ ಟೌನ್ ಪೊಲೀಸರು ಬಿ. ರಿಪೋರ್ಟ್ ಸಲ್ಲಿಸಿದ್ದರು. ಈ ಬಿ. ರಿಪೋರ್ಟನ್ನು ಪ್ರಶ್ನಿಸಿ ಪ್ರಶಾಂತ್ ಪಾಟೀಲ್ ಎಂಬ ವಕೀಲರು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಸರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್, ಪ್ರಶಾಂತ್ ಪಾಟೀಲ್ ಅರ್ಜಿ ಆಧರಿಸಿ ಪ್ರಕರಣದ ಸಾಕ್ಷ್ಯಗಳನ್ನು ನೀಡುವಂತೆ ಉಡುಪಿ ಪೊಲೀಸರಿಗೆ ಸೂಚನೆ ನೀಡಿತ್ತು. ಇದೀಗ ಪೊಲೀಸರು ಸಾಕ್ಷ್ಯಗಳನ್ನು ಕೋರ್ಟ್​ಗೆ ಒದಗಿಸಿದ್ದು, ಪೊಲೀಸರು ಸಲ್ಲಿಸಿದ ಸಾಕ್ಷ್ಯಗಳನ್ನು ಪರಿಶೀಲಿಸಲು ನ್ಯಾಯಾಲಯ ಪ್ರಶಾಂತ್ ಪಾಟೀಲ್ ಅವರಿಗೆ ಅವಕಾಶ ನೀಡಿದೆ. ಅಲ್ಲದೇ ಮನವಿ ಮಾಡಿದ್ದ ಎಲ್ಲಾ ಸಾಕ್ಷ್ಯಗಳನ್ನು ನೀಡಲಾಗಿದೆಯಾ ಎಂದು ಖಾತರಿಗೆ ಸೂಚನೆ ನೀಡಿ, ಪ್ರಕರಣ ವಿಚಾರಣೆ ಫೆಬ್ರವರಿ 8ಕ್ಕೆ ಮುಂದೂಡಿದೆ.

- Advertisement -

ಗುತ್ತಿಗೆದಾರ ಸಂತೋಷ್ ಪಾಟೀಲ್ ಉಡುಪಿ KSRTC ಬಸ್ ನಿಲ್ದಾಣ ಸಮೀಪದ ಲಾಡ್ಜ್‌ನಲ್ಲಿ 2022ರ ಏಪ್ರಿಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಆತ್ಮಹತ್ಯೆಗೂ ಮುನ್ನ ತನ್ನ ಆತ್ಮೀಯರಿಗೆ, ಮಾಧ್ಯಮ ಸ್ನೇಹಿತರಿಗೆ ಗ್ರಾಮೀಣಾಭಿವೃದ್ಧಿ ಸಚಿವರ ವಿರುದ್ಧ ಗಂಭೀರವಾಗಿ ಆರೋಪಿಸಿ ಸಂದೇಶ ಕಳುಹಿಸಿದ್ದರು. ಬಳಿಕ ಈಶ್ವರಪ್ಪನವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

Join Whatsapp