ಬೆಂಗಳೂರು : ರಾಜ್ಯ ಸರ್ಕಾರ ಕ್ರೈಸ್ತ ಸಮುದಾಯವನ್ನು ಗುರಿಯಾಗಿಸಿಕೊಂಡು ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಲು ಹೊರಟಿರುವುದು ಸಂವಿಧಾನ ವಿರೋಧಿ ನಡೆ ಎಂದು ಬೆಂಗಳೂರಿನ ಮಹಾ ಧರ್ಮಾಧ್ಯಕ್ಷರೂ ಆದ ಕರ್ನಾಟಕ ಪ್ರಾಂತೀಯ ಕಥೋಲಿಕ ಧರ್ಮಾಧ್ಯಕ್ಷ ಮಂಡಳಿ ಅಧ್ಯಕ್ಷ ಆರ್ಚ್ ಬಿಷಪ್ ಡಾ.ಪೀಟರ್ ಮಚಾದೋ ಹೇಳಿದ್ದಾರೆ.
ಸೋಮವಾರ ನಗರದ ನಂದಿದುರ್ಗ ರಸ್ತೆಯ ಪಾಲಾನ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿವಾಹ, ಧರ್ಮದ ವಿಚಾರದಲ್ಲಿ ಭಾರತೀಯ ಪ್ರಜೆಗಳಿಗೆ ಸಂವಿಧಾನವು ಮುಕ್ತ ಸ್ವಾತಂತ್ರ್ಯ ನೀಡಿದ್ದು, ಯಾರು ಯಾವುದೇ ಧರ್ಮವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಹೀಗಿರುವಾಗ, ಮತಾಂತರ ನಿಷೇಧ ಕಾಯ್ದೆ ಜಾರಿ ಸರಿಯಲ್ಲ ಎಂದರು.
ನಮ್ಮ ಶಾಲೆ, ಕಾಲೇಜು ಹಾಗೂ ಶೈಕ್ಷಣಿಕ ಸಂಸ್ಥೆಗಳಗಳಲ್ಲಿ ಎಂದಿಗೂ ಮತಾಂತರ ಆಗಲು ನಾವು ಅವಕಾಶ ನೀಡಿಲ್ಲ. ಅಂತಹ ಚಟುವಟಿಕೆಗಳಿಗೆ ಅನುವು ಮಾಡಿಕೊಡುವುದಿಲ್ಲ, ನಾವು ಬಲವಂತದ ಹಾಗೂ ಆಮಿಷಗಳನ್ನು ಒಡ್ಡಿ ಮಾಡುವ ಮತಾಂತರದ ಕಡು ವಿರೋಧಿಗಳಾಗಿದ್ದೇವೆ ಎಂದರು.
ತಪ್ಪು ಮಾಡಿದವರಿಗೆ ಶಿಕ್ಷೆ ವಿಧಿಸುವುದಕ್ಕೆ ಸಂವಿಧಾನದಲ್ಲಿ ಈಗಾಗಲೇ ಹಲವು ರೀತಿಯ ಕ್ರಮಗಳನ್ನು ನೀಡಲಾಗಿದೆ. ಭಾರತೀಯ ದಂಡ ಸಂಹಿತೆ(ಐಪಿಸಿ)ಯೂ ಇದೆ. ಹೀಗಾಗಿ, ಪ್ರತ್ಯೇಕ ಕಾಯ್ದೆಯ ಔಚಿತ್ಯವಾದರೂ ಏನು ಎಂದು ಪ್ರಶ್ನಿಸಿದರು.
ಕರ್ನಾಟಕವೂ ಸರ್ವ ಜನಾಂಗದ ನಾಡು.ಇಲ್ಲಿ ಯಾವುದೇ ರೀತಿಯ ಧಾರ್ಮಿಕ ಕಾಯ್ದೆಗಳು ಅಗತ್ಯವಿಲ್ಲ.ಇನ್ನೂ, ಕ್ರೈಸ್ತ ಸಮುದಾಯ ಎಲ್ಲಾ ವರ್ಗಗಳ ಸೇವೆಗೆ ನಿರತವಾಗಿದ್ದು, ಆಸ್ಪತ್ರೆ, ಶಿಕ್ಷಣ ಸೇರಿದಂತೆ ಹಲವು ಸೇವೆಗಳನ್ನು ನೀಡುತ್ತ ಬಂದಿದೆ ಎಂದು ನುಡಿದರು.
ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ಮಾತನಾಡಿ, ಭಾರತವನ್ನು ಬ್ರಿಟಿಷರು ಬರೋಬ್ಬರಿ 200 ವರ್ಷ ಆಳ್ವಿಕೆ ನಡೆಸಿದರು. ಆದರೂ, ಕ್ರೈಸ್ತರ ಜನಸಂಖ್ಯೆ ಬೆಳೆದಿಲ್ಲ. ಹೀಗಿರುವಾಗ, ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆಗೆ ಮುಂದಾಗಿರುವುದು ಹಾಸ್ಯಾಸ್ಪದ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಕೆ.ಜೆ.ಜಾರ್ಜ್, ಶಾಸಕಿ ವಿನಿಷಾ ನಿರೋ, ಕಾಂಗ್ರೆಸ್ ನಾಯಕರಾದ ಪ್ರವೀಣ್ ಪೀಟರ್, ಲೋಬೋ ಸೇರಿದಂತೆ ಪ್ರಮುಖರಿದ್ದರು.