ಬುಲಂದ್ ಶಹರ್: 2022ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಈ ಮೂಲಕ ಚುನಾವಣಾ ಕದನದಲ್ಲಿ ಗೆಲುವು ಸಾಧಿಸಲಿದೆ ಎಂದು ಕಾಂಗ್ರೆಸ್ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
ಬುಲಂದ್ ಶಹರ್ ನಲ್ಲಿ ನಡೆದ ಪ್ರತಿಜ್ಞಾ ಸಮ್ಮೇಳನದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, 2017 ರ ಉನ್ನಾವೋ ಅತ್ಯಾಚಾರ ಪ್ರಕರಣ ಮತ್ತು ಹತ್ರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಸಂತ್ರಸ್ತರಿಗೆ ನಡೆದ ಹೋರಾಟದಲ್ಲಿ ಸಮಾಜವಾದಿ ಪಕ್ಷ (ಎಸ್ ಪಿ) ಮತ್ತು ಬಹುಜನ ಸಮಾಜ ಪಕ್ಷ (ಎಸ್ ಪಿ) ನಾಯಕರು ಎಲ್ಲಿಯೂ ಕಾಣಿಸಲಿಲ್ಲ. ಆದರೆ, ಕಾಂಗ್ರೆಸ್ ಮಾತ್ರ ಜನರಿಗಾಗಿ ಹೋರಾಡುತ್ತಿದೆ ಎಂದು ಹೇಳಿದರು.
ಪಕ್ಷಕ್ಕೆ ಉತ್ತರ ಪ್ರದೇಶ ಚುನಾವಣೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಅವರು, ಈ ಚುನಾವಣೆಯನ್ನು ‘ಮಾಡು ಇಲ್ಲವೇ ಮಡಿ’ಎಂದು ಕರೆದರು. ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವ ಮೂಲಕ ಮಾತ್ರ ಚುನಾವಣಾ ಸ್ಪರ್ಧೆಯನ್ನು ಗೆಲ್ಲಲು ಸಾಧ್ಯ ಎಂದ ಅವರು, ಬೂತ್ ಸಮಿತಿಗಳನ್ನು ಬಲಪಡಿಸಲು ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದರು.