ದಲಿತರ ಮನೆ ಪ್ರವೇಶಿಸಿದ್ದ ಪೇಜಾವರ ಶ್ರೀಗಳು ಲಿವರ್ ಫ್ರೈ ಕೊಟ್ಟಿದ್ದರೆ ತಿನ್ನುತ್ತಿದ್ದರೇನು ? ಹಂಸಲೇಖರಿಂದ ಹೀಗೊಂದು ಪ್ರಶ್ನೆ !

Prasthutha|

► ನಮಗ್ಯಾಕೆ ಟ್ರೋಲ್ ?, ಎಲ್ಲವೂ ಕಂಟ್ರೋಲ್ ಎಂದು ಕ್ಷಮೆಯಾಚನೆ !

- Advertisement -

ಬೆಂಗಳೂರು : ಖ್ಯಾತ ಸಂಗೀತ ನಿರ್ದೇಶಕ, ಸಿನಿಮಾ ಸಾಹಿತಿ ಹಂಸಲೇಖ ಅವರು ಇದೀಗ ಪೇಜಾವರ ಶ್ರೀಗಳ ಕುರಿತು ಆಡಿದ ಮಾತುಗಳು ಜಾಲತಾಣದಲ್ಲಿ ಪರ ವಿರೋಧ ಚರ್ಚೆಗೆ ಕಾರಣವಾಗಿವೆ. ಜಾತಿ ತಾರತಮ್ಯ, ಜಾತಿ ಪಿಡುಗು ವಿಚಾರವಾಗಿ ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಹಂಸಲೇಖ ಆಡಿರುವ ಮಾತುಗಳು ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಫೇಸ್ ಬುಕ್ ವೀಡಿಯೊ ಮೂಲಕ ಕ್ಷಮೆಯೂ ಕೇಳಿದ್ದಾರೆ.


ಕಾರ್ಯಕ್ರಮದಲ್ಲಿ ಮಾತನಾಡಿದ್ದ ಹಂಸಲೇಖ, ಪೇಜಾವರ ಶ್ರೀಗಳು ದಲಿತರ ಮನೆ ಪ್ರವೇಶಿಸಿದ್ದಾರೆ ಎಂದು ಸ್ಟೇಟ್ ಮೆಂಟ್ ಇದೆ, ಆದರೆ ಪೇಜಾವರ ಸ್ವಾಮಿಗಳು ದಲಿತರ ಮನೆಗೆ ಹೋಗಿ ಅಲ್ಲಿ ಕುಳಿತು ಕೊಳ್ಳಬಹುದಷ್ಟೇ, ಅವರು ಕೋಳಿ ಕೊಟ್ಟರೆ ತಿನ್ನೋಕೆ ಸಾಧ್ಯವೇ..? ಕೋಳಿ ಬೇಡ, ಕುರಿ ರಕ್ತದ ಫ್ರೈ ಮಾಡಿಕೊಟ್ಟರೆ ತಿನ್ನುತ್ತಾರಾ..? ಲಿವರ್ ಫ್ರೈ ತಿಂತಾರಾ, ಆಗುತ್ತಾ..? ಎಂದು ಪ್ರಶ್ನಿಸಿದ್ದೇ ವಿವಾದಕ್ಕೆ ಎಡೆ ಮಾಡಿದೆ. ದಲಿತರ ಮನೆಗೆ ಮೇಲ್ಜಾತಿಯವರು ಹೋದರೂ ಅಲ್ಲಿಯೂ ಅವರು ಮೇಲ್ಜಾತಿಯವರಾಗಿಯೇ ವರ್ತಿಸುತ್ತಾರೆ ಎಂದು ಹಂಸಲೇಖ ವಿಮರ್ಶಿಸಿದ್ದರು.

- Advertisement -


ಬಿಳಿಗಿರಿ ರಂಗಯ್ಯ ಸೋಲಿಗರ ಮನೆಯ ಹೆಣ್ಣಿನೊಂದಿಗೆ ರಮಿಸಿದರೆ, ಅದರಲ್ಲಿ ದೊಡ್ಡ ವಿಷ್ಯ ಏನು ಇದೆ? ಅದೇ ಸೋಲಿಗರ ಹೆಣ್ಣು ಮಗಳನ್ನು ಕರೆದುಕೊಂಡು ಹೋಗಿ ತನ್ನ ದೇವಾಲಯದಲ್ಲಿ ಇಟ್ಟು ಗೌರವಿಸಿದ್ದರೆ, ಅದು ಬಿಳಿಗಿರಿ ರಂಗಯ್ಯನ ತಾಕತ್ತು. ಸೂರ್ಯ ಉದಯಿಸುವುದಕ್ಕಿಂತ ಮುಂಚೆ ಸೋಲಿಗರ ಮನೆಗೆ ಬಂದು ಆ ಹೆಣ್ಣು ಮಗಳೊಂದಿಗೆ ಬಿಳಿಗಿರಿ ರಂಗಯ್ಯ ಸಂಸಾರ ನಡೆಸಿ ಬೆಳಕು ಹರಿಯುವುದರೊಳಗೆ ಹೋಗಿ ಕಲ್ಲಾಗುತ್ತಾನಂತೆ! ಅದೇನು ದೊಡ್ಡ ವಿಷಯ, ಅದೊಂದು ನಾಟಕ, ಬೂಟಾಟಿಕೆ. ದಲಿತರ ಮನೆಗೆ ಬಲಿತರು ಹೋಗುವುದು ಅದೇನು ದೊಡ್ಡ ವಿಷಯವೇ..? ದಲಿತರನ್ನು ಬಲಿತರು ತಮ್ಮ ಮನೆಗಳಿಗೆ ಕರೆದುಕೊಂಡು ಹೋಗಬೇಕು. ಅವರ ಮನೆಯಲ್ಲಿ ದಲಿತರಿಗೆ ಊಟ ಹಾಕಬೇಕು, ದಲಿತರು ಮುಟ್ಟಿದ ಲೋಟಗಳನ್ನು ನಾವು ತೊಳೆಯುತ್ತೀವಿ ಎಂದು ಬಲಿತರು ಹೇಳಬೇಕು’ ಎಂದು ಹಂಸಲೇಖ ಹೇಳಿದ್ದರು.

► ವಿವಾದವಾಗುತ್ತಿದ್ದಂತೆ ಕ್ಷಮೆ ಯಾಚಿಸಿದ ನಾದ ಬ್ರಹ್ಮ!


ಇದೀಗ ಆಡಿದ ಮಾತು ವಿವಾದವಾಗುತ್ತಿದ್ದಂತೆ ಫೇಸ್ ಬುಕ್ ವೀಡಿಯೋ ಮೂಲಕ ಕ್ಷಮೆಯಾಚಿಸಿರುವ ಹಂಸಲೇಖ, ನಾನು ಒಬ್ಬ ಸಂಗೀತಗಾರ. ನಮಗ್ಯಾಕೆ ಟ್ರೋಲು, ಕಂಟ್ರೋಲ್ ಆಗಿರುವುದೇ ನಮ್ಮ ಕೆಲಸ ಎಂದಿದ್ದಾರೆ. ಯಾರಿಗೂ ನೋವು ಕೊಡಲು ನನಗೆ ಇಷ್ಟವಿಲ್ಲ. ನನ್ನ ಸಂಗೀತದಂತೆ ನನ್ನ ಮಾತು, ಬದುಕು ಕೂಡ ಎಲ್ಲರಿಗೂ ಸುಖ ಕೊಡಬೇಕು. ಆದರೆ, ಎಲ್ಲಾ ಅನಿಷ್ಟಗಳನ್ನು ತೊಡೆದು ಹಾಕುವ ದಿಸೆಯಲ್ಲಿ ನನ್ನ ಪಾತ್ರವೂ ಯಾವುದೇ ಮೂಲಕ ಇದ್ದರೆ ಅದನ್ನು ನಾನು ಮಾಡಿಯೇ ಮಾಡುತ್ತೇನೆ ಎಂದು ಹೇಳಿದ್ದಾರೆ.

Join Whatsapp