ನವದೆಹಲಿ: ಕೈಮಗ್ಗ ಮತ್ತು ಕೈಯಿಂದ ನೇಯ್ದ ಖಾದಿಯಿಂದ ಮಾಡಿದ ಬಟ್ಟೆ ರಾಷ್ಟ್ರಧ್ವಜಗಳ ಜೊತೆಗೆ ಯಂತ್ರದಿಂದ ತಯಾರಿಸಿದ ಪಾಲಿಸ್ಟರ್ ತ್ರಿವರ್ಣ ಧ್ವಜವನ್ನು ಬಳಸಲು ಅನುವು ಮಾಡಿಕೊಡುವ ಭಾರತದ ಧ್ವಜ ಸಂಹಿತೆ 2002 ರ ತಿದ್ದುಪಡಿಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ‘ಸತ್ಯಾಗ್ರಹ’ ನಡೆಸುವ ನಿರ್ಧಾರವನ್ನು ಕಾಂಗ್ರೆಸ್ ಶುಕ್ರವಾರ ಬೆಂಬಲಿಸಿದೆ.
ಹಿರಿಯ ಕಾಂಗ್ರೆಸ್ ಮುಖಂಡ ಅಜಯ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘವು ಖಾದಿ ರಾಷ್ಟ್ರಧ್ವಜಗಳನ್ನು ಪ್ರದರ್ಶಿಸಲು ಪರವಾನಗಿ ಪಡೆದ ಏಕೈಕ ಘಟಕವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಖಾದಿಯ ರಾಯಭಾರಿಯಂತೆ ವರ್ತಿಸುತ್ತಾರೆ. ಆದರೆ ವಾಸ್ತವವಾಗಿ ಖಾದಿ ಮತ್ತು ಮಹಾತ್ಮ ಗಾಂಧಿಯನ್ನು ಅವಮಾನಿಸಿದ್ದಾರೆ. ಈ ನಿರ್ಧಾರವು ಉದ್ಯೋಗ ನಷ್ಟಕ್ಕೆ ಕಾರಣವಾಗುತ್ತದೆ ಮತ್ತು ಸ್ವಾತಂತ್ರ್ಯದ 75 ನೇ ವರ್ಷದ ಭಾಗವಾಗಿ ‘ಹರ್ ಘರ್ ತಿರಂಗಾ’ (ಪ್ರತಿ ಮನೆಯಲ್ಲಿ ತ್ರಿವರ್ಣ) ಅಭಿಯಾನವನ್ನು ಅವಮಾನಿಸಿದಂತಾಗುತ್ತದೆ ಎಂದು ಆರೋಪಿಸಿದರು.