ಕಾಂಗ್ರೆಸ್ ಪ್ರತಿಭಟಿಸಿದ್ದು ರಾಮ ಮಂದಿರ ದಿನದ ವಿರೋಧದಿಂದ: ‘ಕೈ’ ಪ್ರೊಟೆಸ್ಟ್ ಗೆ ಹೊಸ ನಂಟು ಕಟ್ಟಿದ ಯೋಗಿ, ಶಾ

Prasthutha|

►ಇದು ಬೋಗಸ್ ವಾದ ಎಂದ ಕಾಂಗ್ರೆಸ್

- Advertisement -

ನವದೆಹಲಿ: ಬೆಲೆ ಏರಿಕೆ ಮತ್ತು ಹೆಚ್ಚುತ್ತಿರುವ ನಿರುದ್ಯೋಗದ ವಿರುದ್ಧ ನಿನ್ನೆ ಕಾಂಗ್ರೆಸ್ ನಾಯಕರು ಮತ್ತು ಸಂಸದರು ಕಪ್ಪು ಬಟ್ಟೆಗಳನ್ನು ಧರಿಸಿ ಪ್ರತಿಭಟನೆ ನಡೆಸಿದ್ದರು. ಇದನ್ನು ಬಿಜೆಪಿ ನಾಯಕರು ರಾಮ ಮಂದಿರ ನಂಟು ಕಲ್ಪಿಸಿ, ಎರಡು ವರ್ಷಗಳ ಹಿಂದೆ ಮೋದಿ ಅವರು ಭೂಮಿಪೂಜೆಯನ್ನು ಮಾಡಿದ ರಾಮ ಮಂದಿರಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಲು ಕಾಂಗ್ರೆಸ್ ಅದೇ ದಿನ ಕಪ್ಪು ಬಟ್ಟೆ ಧರಿಸಿ  ಪ್ರತಿಭಟಿಸಿದೆ ಎಂದು ಆರೋಪಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್, ಆಗಸ್ಟ್ 5 ರಂದು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

- Advertisement -

ತಮ್ಮ ತುಷ್ಟೀಕರಣ ರಾಜಕೀಯವನ್ನು ಮತ್ತಷ್ಟು ಉತ್ತೇಜಿಸಲು ಹಾಗೂ ಸೂಕ್ಷ್ಮ ಸಂದೇಶವನ್ನು ನೀಡಲು ಬಯಸಿದ ಕಾಂಗ್ರೆಸ್,  ಪ್ರಧಾನಿ ಮೋದಿ ಅವರು ರಾಮಜನ್ಮಭೂಮಿಗೆ ಅಡಿಪಾಯ ಹಾಕಿದ ದಿನವನ್ನು ಪ್ರತಿಭಟನೆಗಾಗಿ ಆರಿಸಿಕೊಂಡಿತು ಮತ್ತು ಶುಕ್ರವಾರ ಕಪ್ಪು ಬಟ್ಟೆಗಳನ್ನು ಧರಿಸಿತು ಎಂದು ಅಮಿತ್ ಶಾ ಸುದ್ದಿಗಾರರೊಂದಿಗೆ ಹೇಳಿದರು.

ಯುಪಿ ಮುಖ್ಯಮಂತ್ರಿ ಆದಿತ್ಯನಾಥ್ ಕೂಡ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ, ಇಲ್ಲಿಯವರೆಗೆ, ಕಾಂಗ್ರೆಸ್ ಸಾಮಾನ್ಯ ಉಡುಪಿನಲ್ಲಿ ಪ್ರತಿಭಟಿಸುತ್ತಿತ್ತು, ಆದರೆ ಇಂದು, ಅವರು ಕಪ್ಪು ಬಟ್ಟೆಗಳನ್ನು ಧರಿಸಿ ಪ್ರತಿಭಟಿಸಿದರು. ಇದು ರಾಮಭಕ್ತರಿಗೆ ಮಾಡಿದ ಅವಮಾನ. ಇಂದು ಅಯೋಧ್ಯೆ ದಿವಸ್ ಆಗಿರುವುದರಿಂದ ಕಾಂಗ್ರೆಸ್ ಈ ದಿನವನ್ನು ಆರಿಸಿಕೊಂಡಿದೆ ಎಂದು ಹೇಳಿದರು.

ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಬೆಲೆ ಏರಿಕೆ, ನಿರುದ್ಯೋಗ ಮತ್ತು ಜಿಎಸ್ಟಿ ವಿರುದ್ಧ ಕಾಂಗ್ರೆಸ್ ಪ್ರತಿಭಟಿಸಿದೆ. ಇಂದಿನ ಪ್ರಜಾಸತ್ತಾತ್ಮಕ ಪ್ರತಿಭಟನೆಗಳನ್ನು ದಿಕ್ಕುತಪ್ಪಿಸಲು, ವಿಚಲಿತಗೊಳಿಸಲು, ಧ್ರುವೀಕರಿಸಲು ಮತ್ತು ದುರುದ್ದೇಶಪೂರಿತ ತಿರುವನ್ನು ನೀಡಲು ಗೃಹ ಸಚಿವರು ಹತಾಶ ಪ್ರಯತ್ನ ಮಾಡುತ್ತಿದ್ದಾರೆ. ಅಂತಹ ಬೋಗಸ್ ವಾದಗಳನ್ನು ಉಂಟುಮಾಡುವುದು ರೋಗಗ್ರಸ್ತ ಮನಸ್ಸು ಮಾತ್ರ ಎಂದು ತಿರುಗೇಟು ನೀಡಿದ್ದಾರೆ



Join Whatsapp