ಬಿಜೆಪಿಯ ಹಗರಣಗಳ ಬಗ್ಗೆ ಮೊದಲು ಮಾತಾಡಿ ದಮ್ಮು ತೋರಿಸಿ: ನಳಿನ್ ಲವ್ ಜಿಹಾದ್ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು

Prasthutha|

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರ ಲವ್ ಜಿಹಾದ್ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದ್ದು, ಬಿಜೆಪಿ ಸರಕಾರದ ಹಗರಣಗಳ ಬಗ್ಗೆ ಮೊದಲು ಮಾತಾಡಿ ತಾಕತ್ತು ತೋರಿಸಿ ಎಂದು ಸವಾಲು ಹಾಕಿದೆ.
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ನಳಿನ್ ಕುಮಾರ್ ಅವರೇ, ಲವ್ ಜಿಹಾದ್ ಬಗ್ಗೆ ಆಮೇಲೆ ಮಾತಾಡುವಿರಂತೆ. ಬಿಟ್ ಕಾಯಿನ್ ಹಗರಣ, PSI ಅಕ್ರಮ, ಕೆಪಿಟಿಸಿಎಲ್ ಅಕ್ರಮ, ಸಾಲು ಸಾಲು ನೇಮಕಾತಿ ಅಕ್ರಮಗಳು, ಗುತ್ತಿಗೆದಾರರ ಆತ್ಮಹತ್ಯೆ, ರಸ್ತೆ ಗುಂಡಿಯ ಸಾವುಗಳು, ಹೆಚ್ಚಿದ ದಲಿತರ ಮೇಲಿನ ದೌರ್ಜನ್ಯಗಳ ಬಗ್ಗೆ ಮೊದಲು ಮಾತಾಡಿ ದಮ್ಮು, ತಾಕತ್ತು ತೋರಿಸಿ ಎಂದು ಸವಾಲು ಹಾಕಿದೆ.

- Advertisement -

ರಸ್ತೆ, ಚರಂಡಿ, ರಸ್ತೆಗುಂಡಿಗಳ ಸಣ್ಣ ವಿಚಾರ, ರಸ್ತೆ ಗುಂಡಿಗಳಿಂದ ಜನ ಸತ್ತಿದ್ದೂ ಸಣ್ಣ ವಿಚಾರ, ಭ್ರಷ್ಟಾಚಾರ, ಕಮಿಷನ್ ಸಣ್ಣ ವಿಚಾರ, ಗುತ್ತಿಗೆದಾರರು ಸತ್ತಿದ್ದೂ ಸಣ್ಣ ವಿಚಾರ, 54 ಸಾವಿರ PSI ಅಭ್ಯರ್ಥಿಗಳ ಭವಿಷ್ಯ ಛಿದ್ರವಾಗಿದ್ದೂ ಸಣ್ಣ ವಿಚಾರ. ಯುವಕರ ನಿರುದ್ಯೋಗವೂ ಸಣ್ಣ ವಿಚಾರ. ಹಾಗಾದರೆ ಬಿಜೆಪಿಗೆ ದೊಡ್ಡ ವಿಚಾರ ಯಾವುದು? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ರಸ್ತೆ, ಮೋರಿ, ಚರಂಡಿಯಂತಹ ಸಣ್ಣ ವಿಷಯಗಳ ಬಗ್ಗೆ ಮಾತನಾಡಬೇಡಿ, ನಿಮ್ಮ ಮಕ್ಕಳ ಬದುಕಿನ ಪ್ರಶ್ನೆಯಾದ ಲವ್ ಜಿಹಾದ್ ನಿಲ್ಲಿಸಲು ಬಿಜೆಪಿ ಗೆಲ್ಲಿಸಿ ಎಂದು ನಳಿನ್ ಕುಮಾರ್ ಹೇಳಿಕೆ ನೀಡಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

- Advertisement -

ದಕ್ಷಿಣ ಕನ್ನಡ ಜಿಲ್ಲೆಯ ಉಲ್ಲಾಳದ ಸಭೆಯಲ್ಲಿ ನಳೀನ್ ಕುಮಾರ್ ಕಟೀಲ್ ಮಾತನಾಡಿರುವ ವಿಡಿಯೋ ವೈರಲ್ ಆಗಿದ್ದು, ಕಾಂಗ್ರೆಸ್ ಸೇರಿದಂತೆ ಹಲವರು ಕಟೀಲ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

“ರಸ್ತೆ, ಮೋರಿ, ಚರಂಡಿಯಂತಹ ಸಣ್ಣ ವಿಷಯಗಳ ಬಗ್ಗೆ ಮಾತನಾಡಬೇಡಿ; ವೇದವ್ಯಾಸ್ ಕೈ ಎತ್ತಿಲ್ಲ, ನಳೀನ್ಕುಮಾರ್ ಕಟೀಲ್ ನಕ್ಕಿಲ್ಲ, ನಳೀನ್ಕುಮಾರ್ ನಕ್ಕರೆ ನಿಮಗೇನು ಬಂಗಾರ ಸಿಗಲ್ಲ. ನಿಮ್ಮ ಮಕ್ಕಳ ಬದುಕಿನ ಪ್ರಶ್ನೆ ಲವ್ ಜಿಹಾದ್… ಅದನ್ನು ನಿಲ್ಲಿಸಬೇಕಿದ್ದರೆ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬರಬೇಕು” ಎಂದು ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

Join Whatsapp