ಕಪ್ಪ ಕೊಡುವ ಸಂಸ್ಕೃತಿ ಕಾಂಗ್ರೆಸ್ಸಿನದ್ದು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Prasthutha|

ಬಳ್ಳಾರಿ: ಕಪ್ಪ ಕೊಡುವ ಸಂಸ್ಕೃತಿ ಕಾಂಗ್ರೆಸ್ಸಿನದ್ದು, ಐದು ವರ್ಷ ಕರ್ನಾಟಕವನ್ನು ಎಟಿಎಂ ಮಾಡಿದ್ದೀರಿ, ಕಪ್ಪ ಕೊಡುವ ಸಂಸ್ಕೃತಿ  ನಮ್ಮ ಪಕ್ಷದಲ್ಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

- Advertisement -

ಹೂವಿನಹಡಗಲಿ ಜನಸಂಕಲ್ಪ ಯಾತ್ರೆಯಲ್ಲಿ ಉದ್ಘಾಟಿಸಿ ಮಾತನಾಡಿದ ಬೊಮ್ಮಾಯಿ, ಹಿಂದಿನ ಮುಖ್ಯಮಂತ್ರಿ ಕಪ್ಪ ಕೊಡುವ ಬಗ್ಗೆ ಮಾತನಾಡುತ್ತಾರೆ. ಆ ಸಂಸ್ಕೃತಿ ಇರೋದು ಕಾಂಗ್ರೆಸ್ ನಲ್ಲಿ ಮಾತ್ರ. ತಾವು ಅಧಿಕಾರದಲ್ಲಿದ್ದಾಗ ಐದು ವರ್ಷ ಕರ್ನಾಟಕವನ್ನು ಎಟಿಎಂ ಮಾಡಿದ್ದೀರಿ, ಕಪ್ಪ ಕೊಡುವ ಸಂಸ್ಕೃತಿ  ನಮ್ಮ ಪಕ್ಷದಲ್ಲಿಲ್ಲ. ಕಾಂಗ್ರೆಸ್‌ ರಾಜ್ಯಾಧ್ಯಕ್ಷರು ಕಪ್ಪ ಕೊಡಲು ಹೋಗಿಯೇ ಇಡಿ ಕೈಗೆ ಸಿಲುಕಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.

ನಿಮ್ಮಿಂದ ಪಾಠ ಕಲಿಯುವ ಅಗತ್ಯವಿಲ್ಲ.  ಜನರು ಈಗ ಜಾಗೃತರಾಗಿದ್ದಾರೆ‌‌ .  ನಿಮ್ಮ ಆ ಭಾಗ್ಯ ಈ ಭಾಗ್ಯ ಅಂತ ಲೂಟಿ ಮಾಡಿದಿರಿ, ಅನ್ನಭಾಗ್ಯ ಅಂತ ಹೇಳಿ ಕನ್ನ ಭಾಗ್ಯ ಮಾಡಿದಿರಿ, ಎಸ್ಸಿ ಎಸ್ಟಿಗೆ ಕೊಳವೆಬಾವಿ ಕೊರೆಸಿದ್ದೇವೆ ಅಂತ ಲೂಟಿ ಮಾಡಿದಿರಿ. ನೀವು  ಭಾಗ್ಯ ಕೊಟ್ಟಿದ್ದ ರೆ ಜನರು ನಿಮ್ಮನ್ನು ಯಾಕೆ ಸೋಲಿಸುತ್ತಿದ್ದರು‌ ಎಂದು ಪ್ರಶ್ನಿಸಿ, ಕರ್ನಾಟಕದಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗಿದ್ದರೆ, ಅದು ಕಾಂಗ್ರೆಸ್ ನ ಭ್ರಷ್ಟಾಚಾರದಿಂದ ಆಗಿದೆ ಬೊಮ್ಮಾಯಿ ಹೇಳಿದರು.

- Advertisement -

ಸುಳ್ಳು ಆಶ್ವಾಸನೆಗಳನ್ನು ನೀಡಿದ ಕಾಂಗ್ರೆಸ್ :

ನಾಳೆ ಕಾಂಗ್ರೆಸ್ ಪಾದಯಾತ್ರೆ ಬಳ್ಳಾರಿಗೆ ಬರುತ್ತಿದೆ. ನೀವೆಲ್ಲಾ  ಸೇರಿ ಸೋನಿಯಾ ಗಾಂಧಿಗೆ ಎಂಪಿ ಮಾಡಿ ಆರಿಸಿ ಕಳುಹಿಸಿದಿರಿ. ಅವರು ಆರಿಸಿ ಬಂದ ಮೆಲೆ ಇಲ್ಲಿನ ಸ್ಥಾನಕ್ಕೆ ರಾಜಿನಾಮೆ ನೀಡಿ ಉತ್ತರ ಪ್ರದೇಶಕ್ಕೆ ಹಾರಿ ಹೋದರು. ಆಗ 3000 ಕೋಟಿ ರೂ. ಪ್ಯಾಕೇಜ್ ಕೊಡುತ್ತೇನೆ ಎಂದು ಹೇಳಿದ್ದರು. 3000 ಕೋಟಿ ಎಲ್ಲಿ ಹೋಯಿತು. ನಿಮ್ಮ ಮತವನ್ನು ಪಡೆದುಕೊಂಡು, ಈ ಕ್ಷೇತ್ರವನ್ನು ತಿರುಗಿಯೂ ನೋಡದ ಕಾಂಗ್ರೆಸ್ ನವರು ಸುಳ್ಳು ಆಶ್ವಾಸನೆಗಳನ್ನು ನೀಡಿದ್ದಾರೆ. ಈಗ ಅವರ ಮಗ ಬರುತ್ತಿದ್ದಾನೆ. ನಿಮ್ಮ ತಾಯಿಯನ್ನು ಆರಿಸಿ ಕಳುಹಿಸಿದ್ದೇವು ಅವರು ಏನು ಮಾಡಿದರು. ಈಗ ನೀವು ಏನು ಸುಳ್ಳು ಹೇಳಲು ಬಂದಿದ್ದೀರಿ ಎಂದು ಜನ ಪ್ರಶ್ನಿಸಬೇಕು. ಈ ಭಾಗದಲ್ಲಿ ಸುಳ್ಳು ನಡೆಯುವುದಿಲ್ಲ ಎಂಬ ಸಂದೇಶ ನೀಡಬೇಕು. ಎಂದರು. 

ಪಕ್ಷದ ನಿಷ್ಠೆಯೇ ನಮ್ಮ ಶಕ್ತಿ :

ಹೂವಿನ ಹಡಗಲಿಯಲ್ಲಿ ಈ ಬಾರಿ ಕಮಲ ಅರಳುತ್ತದೆ. ನಾಯಕರುಗಳು ನಿಮ್ಮಲ್ಲಿರುವ ಸಣ್ಣ ಪುಟ್ಟ ವ್ಯತ್ಯಾಸವನ್ನು ಬದಿಗಿಟ್ಟು ಯಾರಿಗೆ ಟಿಕೆಟ್ ನೀಡಿದರೂ ನಿಷ್ಟೆಯಿಂದ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಕಾರ್ಯಕರ್ತರ  ಬಳಿ ಮುಖ್ಯಮಂತ್ರಿಗಳು ಪ್ರಮಾಣ ಮಾಡಿಸಿದರು.

ನಮ್ಮ ಹಿರಿಯರಾದ ಎಂ.ಪಿ.ಪ್ರಕಾಶ್  ಅವರು ಇಡೀ ಜೀವನವನ್ನು ಕಾಂಗ್ರೆಸ್‌ ವಿರೋಧ ಮಾಡುತ್ತ ಬಂದಿದ್ದರು‌. ಅವರು ಯಾಕೆ ಕಾಂಗ್ರೆಸ್ ಗೆ ಹೋದರೋ ಗೊತ್ತಿಲ್ಲ. ಕಾಂಗ್ರೆಸ್ ಅಂದರೆ ಸೋಲು, ಅಲ್ಲಿಗೆ ಹೋದರೆ ಸೋಲುವುದು ಖಚಿತ. ಆದರೆ ಅವರ ಕನಸಿನ ಯೋಜನೆಗಳನ್ನು ನಾನು ಜಾರಿಗೊಳಿಸುವ ಕೆಲಸ ಮಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಜಲ ಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಬಿ.ಶ್ರೀರಾಮುಲು, ಆನಂದಸಿಂಗ್ ಹಾಗೂ ಮತ್ತಿತರರು  ಹಾಜರಿದ್ದರು.

Join Whatsapp