ಕಾಂಗ್ರೆಸ್ ಶಾಸಕಿ ವಿರುದ್ಧ ಕೀಳುಮಟ್ಟದ ಹೇಳಿಕೆ: ಸಂಜಯ್ ಪಾಟೀಲ್ ಭಾವಚಿತ್ರ ದಹಿಸಿ ಪ್ರತಿಭಟಿಸಿದ ಕಾಂಗ್ರೆಸ್ ಕಾರ್ಯಕರ್ತರು

Prasthutha|

ಬೆಂಗಳೂರು: ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ್ ಪಾಟೀಲ್ ನೀಡಿರುವ ಕೀಳುಮಟ್ಟದ ಹೇಳಿಕೆಯನ್ನು ಖಂಡಿಸಿ ಬೆಂಗಳೂರಿನಲ್ಲಿ ಶುಕ್ರವಾರ ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಸಂಜಯ್ ಪಾಟೀಲ್ ಭಾವಚಿತ್ರವನ್ನು ದಹಿಸಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

- Advertisement -


ಸಮಿತಿ ಮುಖಂಡ ಎಸ್. ಮನೋಹರ್ ವಿ ಮಾತನಾಡಿ, ಬಿಜೆಪಿ ನಾಯಕರ ರಾತ್ರಿ ಸಂಸ್ಕೃತಿಯನ್ನು ಕಾಂಗ್ರೆಸ್ ಪಕ್ಷದ ಮೇಲೆ ಹೊರಿಸುವ ಹೇಳಿಕೆ ನೀಡಿರುವ ಸಂಜಯ್ ಪಾಟೀಲ್ ವಿರುದ್ಧ ಕ್ರಮಕೈಗೊಳ್ಳಬೇಕು. ಬಿಜೆಪಿ ನಾಯಕರಿಗೆ ಪ್ರತಿನಿತ್ಯ ಈಗ ರಾತ್ರಿ ಸಂಸ್ಕೃತಿ ನೆನಪಾಗುತ್ತಿದೆ. ಏಕೆಂದರೆ ಬಿಜೆಪಿಯಲ್ಲಿ ಯಾವ ರೀತಿ ಕಾಮುಕರು ಇದ್ದಾರೆ ಎಂಬುದು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲೂ ಈಗ ಬಹಿರಂಗವಾಗಿದೆ ಎಂದು ಕುಟುಕಿದರು.


ಆ ಸಂಸ್ಕೃತಿಯ ನೆನಪು ಬಿಜೆಪಿ ನಾಯಕರಿಂದ ದಿನನಿತ್ಯ ಕಾಡುತ್ತಿದೆ. ಅದಕ್ಕಾಗಿ ಬಿಜೆಪಿಯ ಕೇಂದ್ರದ ಮಾಜಿ ಸಚಿವರು ರಾಜ್ಯದ ಅನೇಕ ಸಚಿವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದು ತಮ್ಮ ಖಾಸಗಿತನವನ್ನು ಪ್ರದರ್ಶಿಸಬೇಡಿ ಎಂದು ಮನವಿ ಮಾಡಿರುವ ವಿಷಯ ಬಿಜೆಪಿ ಪಕ್ಷದಲ್ಲೇ ಪ್ರತಿಯೊಬ್ಬ ಕಾರ್ಯಕರ್ತರಿಗೂ ತಿಳಿದಿದೆ ಎಂದು ವ್ಯಂಗ್ಯವಾಡಿದರು.

- Advertisement -

ಬಿಜೆಪಿಯವರಿಗೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರನ್ನು ಹೀಯಾಳಿಸುವುದು ದಿನನಿತ್ಯದ ಕಾಯಕವಾಗಿದೆ. ಆದರೆ ಮುಂದಿನ ದಿನಗಳಲ್ಲಿ ಮಹಿಳೆಯರು ಬಿಜೆಪಿಗೆ ಯಾವ ರೀತಿ ಬುದ್ಧಿ ಕಲಿಸುತ್ತಾರೆ ಎಂಬುವ ಪರಿಜ್ಞಾನವೂ ಬಿಜೆಪಿ ಪಕ್ಷಕ್ಕೆ ಹಾಗೂ ನಾಯಕರಿಗೆ ತಿಳಿಯುತ್ತಿಲ್ಲ. ಅವರು ಬಳಸುವ ಪದಗಳು ಅವರ ಸಂಸ್ಕೃತಿ ಅವರ ನೀಚ ತನದ ನಾಲಿಗೆಯಿಂದ ನಿತ್ಯವೂ ಹರಿದಾಡುತ್ತಿದೆ ಎಂದು ಆರೋಪಿಸಿದರು.


ಸಂಜಯ್ ಪಾಟೀಲ್ ನೀಡಿರುವ ರಾತ್ರಿ ಸಂಸ್ಕೃತಿಯ ಹೇಳಿಕೆಯನ್ನ ಖಂಡಿಸಿ ಅ ಸಂಸ್ಕೃತಿ ಸಂಜಯ್ ಪಾಟೀಲ್ ಗೆ ಹಾಗೂ ಆ ಪಕ್ಷದ ಅಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್ ಗೆ ಬಹಳ ಹತ್ತಿರವಾಗಿದೆ. ಆದ್ದರಿಂದ ರಾತ್ರಿ ಸಂಸ್ಕೃತಿ ಬಗ್ಗೆ ಮಾತನಾಡಿದ್ದರೆ ಇಂತಹ ರಾಜಕಾರಣಿಗಳಿಗೆ ರಾಜ್ಯದ ಜನ ತಕ್ಕ ಪಾಠ ಕಲಿಸಲಿದ್ದಾರೆ. ಬಿಜೆಪಿ ಮುಂದಿನ ದಿನಗಳಲ್ಲಿ ಕರ್ನಾಟಕದಿಂದ ನಿರ್ನಾಮ ಆಗುವುದು ಖಚಿತ ಎಂದು ಹೇಳಿದರು.


ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಎಸ್. ಮನೋಹರ್ ವಿ, ಶಂಕರ್ ವಿಜಯ್, ಮುಳಗುಂದ ಜಿ ಪದ್ಮಾವತಿ, ಜಿ ಜನಾರ್ದನ್ ಎ ಆನಂದ್, ಜಯಸಿಂಹ, ಎಂ ಎ ಸಲೀಂ ಆದಿತ್ಯ ಪ್ರಕಾಶ್ ಪುಟ್ಟರಾಜು ಚಂದ್ರಶೇಖರ ಜಾನಕೀ ರಾಮ್ ಬ್ಲಾಕ್ ಅಧ್ಯಕ್ಷರಾದ ತೇಜಸ್ ಅಶ್ವಥ್ ಹಾಗೂ ಪಕ್ಷದ ಮುಖಂಡರು ಭಾಗವಹಿಸಿದ್ದರು.


Join Whatsapp