October 1, 2021

ಬಿಕರಿಯಾದ ದೇಶ ಇದುವೇ ಬಿಜೆಪಿಯ ಸಾಧನೆ !

✍️ಪಾರ್ವತೀಶ ಬಿಳಿದಾಳೆ

ದೇಶ ನಮ್ಮದು, ವ್ಯಾಪಾರ ಬಿಜೆಪಿಯದ್ದು

ಭಾರತೀಯ ಆರ್ಥಿಕತೆಯನ್ನು ಕುರಿತು ಚರ್ಚಿಸುವಾಗೆಲ್ಲ ನಮಗೆ ನೋಡಸಿಗುವ ಎರಡು ಮುಖ್ಯ ಆಯಾಮಗಳೆಂದರೆ; ಒಂದು, ಭಾರತದ ಆರ್ಥಿಕತೆ ದಿನೇ ದಿನೇ ಬಲಿಷ್ಠವಾಗುತ್ತಿದೆ. ಅಭಿವೃದ್ಧಿಯ ಫಲ ಎಲ್ಲರಿಗೂ ಸಿಗುತ್ತಿದೆ. ಭಾರತ ವಿಶ್ವಗುರುವಾಗುತ್ತಿದೆ ಎಂಬುದು. ಇನ್ನೊಂದು, ಭಾರತದಲ್ಲಿ ಬಡತನ, ನಿರುದ್ಯೋಗವು ದಿನೇ ದಿನೇ ಹೆಚ್ಚಾಗುತ್ತಿದೆ. ಅಭಿವೃದ್ಧಿಯ ಫಲ ಕೆಲವರಿಗೆ ಮಾತ್ರ ಸಿಗುತ್ತಿದೆ.

ಭಾರತದ ಸ್ಥಾನಮಾನವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಸಿಯುತ್ತಿದೆ ಎಂಬುದು.ಇವೆರಡರಲ್ಲಿ ನಾವು ಯಾವುದನ್ನು ನಿಜ ಎಂದು ಭಾವಿಸಬೇಕು? ವಾಸ್ತವದಲ್ಲಿ ಅಥವಾ ಒಂದು ರೀತಿಯ ಹೇಳಬೇಕೆಂದರೆ ಇವೆರಡೂ ಸತ್ಯ ಸಂಗತಿಗಳು ಆಗಿವೆ: ಅದು ಹೇಗೆಂದರೆ, ಮೊದಲನೇಯ ಅಂಶವಾದ ಅಭಿವೃದ್ಧಿ, ಬಲಿಷ್ಠ ಆರ್ಥಿಕತೆ ಇತ್ಯಾದಿ ಮಾತುಗಳನ್ನು ಭಾರತ ಒಕ್ಕೂಟದ ಕಾರ್ಪೊರೇಟ್ ಕಂಪನಿಗಳಿಗೆ ಅನ್ವಯಿಸಿ ನೋಡಿದರೆ ಆ ಮಾತು ನಿಜವೆನಿಸುತ್ತದೆ. ಎರಡನೇಯ ವ್ಯಾಖ್ಯಾನವನ್ನು ಭಾರತ ಗಣ ರಾಜ್ಯದ ಸದಸ್ಯ ರಾಜ್ಯಗಳ ಹಾಗೂ ಜನಸಾಮಾನ್ಯರ ದಾರುಣ ಸ್ಥಿತಿಗತಿಗಳಿಗೆ ಅನ್ವಯಿಸಿ ನೋಡಿದರೆ ನಿಜ ಸಂಗತಿ ಕಾಣುತ್ತದೆ. ಹೀಗೆ ಏಕಕಾಲದಲ್ಲಿ ಕಾರ್ಪೊರೇಟ್ ಕುಳಗಳ ಅಥವಾ ಖಾಸಗಿ ಉದ್ದಿಮೆದಾರರ ಅಭಿವೃದ್ಧಿಯನ್ನು ಮತ್ತೊಂದೆಡೆ ಜನಸಾಮಾನ್ಯರ ಅವನತಿಯನ್ನು ಬಿಜೆಪಿ ಎಂಬ ರಿಂಗ್ ಮಾಸ್ಟರ್‌ ಗೆ ಸಾಧಿಸಲು ಸಾಧ್ಯವಾಗುತ್ತದೆ. ಬಿಜೆಪಿ ಹಾಗೂ ಸಂಘಪರಿವಾರವು ಇಲ್ಲಿ ಪ್ರದರ್ಶಿಸುತ್ತಿರುವ ಚಾಕಚಕ್ಯತೆ, ಕಟ್ಟುತ್ತಿರುವ ಮಾತಿನ ಮಂಟಪವು ಬಲು ಅಪರೂಪದ್ದಾಗಿದೆ. 20ನೇ ಶತಮಾನದಲ್ಲಿ ಭಾರತವನ್ನು ಮುನ್ನಡೆಸಿದ್ದ ಕಾಂಗ್ರೆಸ್ ಪಕ್ಷವು 21ನೇ ಶತಮಾನದ ಮೊದಲ ದಶಕದ ವೇಳೆಗೆ ರಾಜಕೀಯ ಅಧಿಕಾರವೆಂಬ ಡ್ರೈವರ್ ಸೀಟನ್ನು ಅನಿವಾರ್ಯವಾಗಿ ಬಿಜೆಪಿಗೆ ಬಿಟ್ಟುಕೊಡಬೇಕಾಗಿ ಬಂತು.

ಭೂ ಸುಧಾರಣೆ ಜಾರಿ, ಗರೀಬಿ ಹಠಾವೋ ಘೋಷಣೆ ನೀತಿ, ಐನೂರಕ್ಕೂ ಹೆಚ್ಚು ಸಾರ್ವಜನಿಕ ಉದ್ದಿಮೆಗಳನ್ನು ಸ್ಥಾಪಿಸಿ, ರಸ್ತೆ-ಅಣೆಕಟ್ಟುಗಳನ್ನು ನಿರ್ಮಿಸಿ, ಉನ್ನತ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದ ಕಾಂಗ್ರೆಸ್ ಪಕ್ಷವನ್ನು ಈ ಭಾರತ ದೇಶದ ಮತದಾರರು ತಿರಸ್ಕರಿಸಿ ಆ ರೀತಿಯಾದ ಯಾವ ರಚನಾತ್ಮಕ ಕೊಡುಗೆಯನ್ನೂ ನೀಡಿರದಿದ್ದ ಬಿಜೆಪಿಯನ್ನು ಆರಿಸಿ ಗೆಲ್ಲಿಸಿದರೆಂದು ಬಿಂಬಿಸಲಾಗಿದೆ. ಆದರೆ ಬಿಜೆಪಿಯನ್ನು ತಮ್ಮ ಮುಂದಿನ ನಾಯಕ ಅಥವಾ ಪಾಲುದಾರನಾಗಿ ಆಯ್ಕೆ ಮಾಡಿಕೊಂಡಿದ್ದು ಭಾರತದ ಕಾರ್ಪೊರೇಟ್ ಕುಳಗಳು. ಅವರ ಆಯ್ಕೆಯನ್ನೇ ದೇಶದ ಮತದಾರರ ಆಯ್ಕೆಯನ್ನಾಗಿ ಅನಿವಾರ್ಯಗೊಳಿಸಲಾಯಿತು ಅಷ್ಟೆ. ಈ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿ ನರೇಂದ್ರ ಮೋದಿಯನ್ನು ಅಧಿಕಾರಕ್ಕೆ ತರಲು ಹಿಂದುತ್ವ, ಕೋಮುವಾದ, ಹಣ, ತೋಳ್ಬಲ, ಮೀಡಿಯಾ, ಕಾರ್ಯಾಂಗ, ಹೀಗೆ ಸಾಧ್ಯವಿದ್ದ ಎಲ್ಲವನ್ನೂ ಯಶಸ್ವಿಯಾಗಿ ಬಳಸಲಾಯಿತು. ಬಿಜೆಪಿ ಪಕ್ಷ ಭಾರತ ಒಕ್ಕೂಟದ ಅಧಿಕಾರವನ್ನು ಕಂಟ್ರೋಲಿಗೆ ತೆಗೆದುಕೊಂಡು ಒಂದು ದಶಕವಾಗುತ್ತಾ ಬಂದಿದೆ.

ಕಾರ್ಪೊರೇಟ್ ಕಂಪನಿಗಳು ಸಂಭ್ರಮಿಸುತ್ತಿವೆ. ಜನಸಾಮಾನ್ಯರು ನರಳುತ್ತಿದ್ದಾರೆಂಬುದೇ ಒಂದು ಸಾಲಿನ ಸಾಧನೆ. ಭಾರತದ ಉದ್ದಿಮೆದಾರರು ಕಾಂಗ್ರೆಸ್ ತಿರಸ್ಕರಿಸಿ ಬಿಜೆಪಿಯತ್ತ ಒಲವು ತೋರಿಸಲು ಕೆಲವು ಮಹತ್ವದ ಕಾರಣಗಳಿವೆ. ಕಾಂಗ್ರೆಸ್‌ ಗೆ ದೇಶವನ್ನು ಇಡಿಯಾಗಿ ಖಾಸಗಿ ವ್ಯವಹಾರಸ್ಥರಿಗೆ ಒಪ್ಪಿಸಿ ಬಿಡಲು ಹಿಂಜರಿಕೆಯಿದೆ. ಆದರೆ ಬಿಜೆಪಿ ಮುನ್ನುಗ್ಗಿ ಆ ಕೆಲಸ ಮಾಡಲು ಸದಾ ಸಿದ್ಧವಿರುತ್ತದೆ. 1990ರ ದಶಕದಲ್ಲಿ ತೇಲಿಬಂದ ಖಾಸಗೀಕರಣ, ಮುಕ್ತ ಆರ್ಥಿಕ ನೀತಿ ಹಾಗೂ ಉದಾರೀಕರಣ ಪೂರ್ಣ ಅವಕಾಶ, ಲಾಭಗಳನ್ನು ಭಾರತದ ಕಾರ್ಪೊರೇಟ್ ಕಂಪನಿಗಳು ಮತ್ತವುಗಳ ಮಾಲೀಕರು ಪಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಸರ್ಕಾರವು ಸಂಪೂರ್ಣವಾಗಿ ಖಾಸಗಿಯವರ ಸೇವಕನಾದರೆ ಜನಪ್ರಿಯತೆ ಕಳೆದುಕೊಳ್ಳಬೇಕಾಗುತ್ತದೆ ಎಂಬ ಹಿಂಜರಿಕೆ ಕಾಂಗ್ರೆಸ್‌ಗಿತ್ತು. ಹಾಗಾಗಿಯೇ ಒಂದು ಕಡೆ ಖಾಸಗೀಕರಣಕ್ಕೆ ಒತ್ತು ನೀಡುತ್ತಾ, ನರೇಗಾ ಯೋಜನೆ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಮುಂತಾದ ಪಾಪ್ಯುಲರ್ ಯೋಜನೆಗಳಿಗೂ ಕಾಂಗ್ರೆಸ್ ಹಣ ಖರ್ಚು ಮಾಡುತ್ತಿತ್ತು.ಪೆಟ್ರೋಲ್, ಡೀಸೆಲ್ ಅಗತ್ಯ ವಸ್ತುಗಳ ಬೆಲೆ ಏರಿಸಿ ಲೂಟಿ ಮಾಡಲು ಪೂರ್ಣ ಅವಕಾಶ ನೀಡುತ್ತಿರಲಿಲ್ಲ.

ಬಿಜೆಪಿ ಸರ್ಕಾರದ ಈಗಿನ ನೀತಿಗಳೊಂದಿಗೆ ಹೋಲಿಸಿ ನೋಡಿದಾಗ ಮಾತ್ರ ನಮಗೆ ಆಗಿನ ಕಾಂಗ್ರೆಸ್ ಸರ್ಕಾರದ ಹಿಂಜರಿಕೆ ಅರ್ಥವಾಗುತ್ತದೆ. ವಿಶ್ವ ಆರ್ಥಿಕತೆಯನ್ನು ಈಗ 5ನೇ ದೊಡ್ಡ ಎಕಾನಮಿ ಆಗಿರುವ ಯುರೋಪ್, ಅಮೇರಿಕ ಖಂಡಗಳೆರಡೂ ಸೇರಿದಷ್ಟು ಜಾಸ್ತಿ ಜನಸಂಖ್ಯೆ ಹೊಂದಿರುವ ಅರ್ಧಕ್ಕಿಂತ ಹೆಚ್ಚು ಮಿಡಲ್ ಕ್ಲಾಸ್ ಹಾಗೂ ಮಧ್ಯಮ ಶ್ರೇಣಿಯ ಆದಾಯ ವರ್ಗವನ್ನು ಹೊಂದಿರುವ ಭಾರತದ ಮಾರುಕಟ್ಟೆಯನ್ನು ಭಾರತದ್ದೇ ಕಾರ್ಪೊರೇಟ್ ಕಂಪನಿಗಳು ಅದರ ಪೂರ್ಣ ಉಪಯೋಗಪಡೆಯಬೇಕೆಂದರೆ, ಅನಿಯಂತ್ರಿತ ವ್ಯಾಪಾರ ವಿಸ್ತರಣೆಯ ಅಶ್ವಮೇಧಯಾಗ ನಡೆಸಬೇಕೆಂದರೆ ಅವರಿಗೆ ಬಿಜೆಪಿಯಂತಹ ಪಕ್ಷ ಪಾಲುದಾರನಾಗಿ ಬೇಕಿದ್ದಿತು. ಭಾರತ ದೇಶವನ್ನು ಬಿಜೆಪಿಗರು ಮಾರುತ್ತಿರುವುದು ನಿಜ. ಆದರೆ ಹೀಗೆ ಮಾರಾಟಕ್ಕಿಡುತ್ತಿದ್ದಾರೆ ಎಂಬುದನ್ನು ಅರಿಯಲು ನಾವು ಭಾರತದಲ್ಲಿ ಪರ್ಯಾಯ ಸರ್ಕಾರವನ್ನು ನಡೆಸುತ್ತಿರುವ ರಿಲಯನ್ಸ್ ಕಂಪನಿಯ ಮುಖೇಶ್ ಅಂಬಾನಿಯ ಬೋಡ್ ರೂಂ ಭಾಷಣಗಳನ್ನು ಗಮನಿಸಬೇಕು. ಭಾರತದ ಆರ್ಥಿಕತೆಯ ಒಟ್ಟು ಗಾತ್ರ ಮುಂದಿನ 10,20,30 ವರ್ಷಗಳಲ್ಲಿ ಸಾಧಿಸಬಹುದಾದ ಔದ್ಯಮಿಕ ಬೆಳವಣಿಗೆ, ಮಾರುಕಟ್ಟೆಯ ವ್ಯಾಪ್ತಿ, ಹೊಸ ಟೆಕ್ನಾಲಜಿಗಳು, ಜಿಡಿಪಿ ಪ್ರಮಾಣ, ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಭಾರತದ ಪಾಲೆಷ್ಟು.. ಇನ್ನೇನನ್ನೋ ಅಂಬಾನಿ ಪದೇ ಪದೇ ಮಾತನಾಡುತ್ತಿರುತ್ತಾನೆ. ಅದಾದ ಮರುದಿನ ನಮ್ಮ ಪ್ರಧಾನಮಂತ್ರಿ ಅದೇ ಆರ್ಥದ ಮಾತನ್ನು ತಮ್ಮ ಶೈಲಿಯಲ್ಲಿ ಘೋಷಿಸುತ್ತಿರುತ್ತಾರೆ.

ಬಿಜೆಪಿಗರು ಭಾರತವನ್ನು ಯಾಕೆ ಹೀಗೆ ಮಾರುತ್ತಿದ್ದಾರೆಂದರೆ ಕಾರ್ಪೊರೇಟ್ ಕುಳಗಳಿಗೆ ಮುಕ್ತ ಅವಕಾಶ ನೀಡಲು. ಕಾರ್ಪೊರೇಟ್ ಕುಳಗಳು ಮುಕ್ತ ಅವಕಾಶವನ್ನು ಯಾಕೆ ಬಯಸುತ್ತಿದ್ದಾರೆಂದರೆ ತಾವು ಈ ಹಿಂದೆ ಖಾಸಗೀಕರಣದ ಯುಗ ಶುರುವಾದ ಎರಡು ದಶಕಗಳ ಕಾಲ ಸುವರ್ಣಾವಕಾಶಗಳನ್ನು ಕಳೆದುಕೊಂಡೆವು ಅಥವಾ ಕಾಂಗ್ರೆಸ್ ಸರ್ಕಾರವು ತಮ್ಮ ಲೂಟಿಗೆ ಪೂರ್ಣ ಅವಕಾಶ ನೀಡುತ್ತಿರಲಿಲ್ಲ ಎಂಬ ಕಾರಣಕ್ಕಾಗಿದೆ. ಬಿಜೆಪಿ ಹಾಗೂ ಕಾರ್ಪೊರೇಟ್ ಕಂಪನಿ ಮಾಲೀಕರು ಈಗ ತಮ್ಮ ಗುರಿ ಸಾಧನೆಯತ್ತ ಹೊರಟಿದ್ದಾರೆ. ಇದೇ ಕೇಂದ್ರ ಸರ್ಕಾರ, ಸಾರ್ವಜನಿಕ ಸಂಪನ್ಮೂಲಗಳು, ಉದ್ದಿಮೆ, ವ್ಯಾಪಾರ, ಖನಿಜ, ನೀರು, ಗಾಳಿ, ವಿದ್ಯುತ್, ಇಂಧನ, ಬಂದರು, ಏರ್ ಪೋರ್ಟ್, ರೈಲು, ಸಾರಿಗೆ, ರಸ್ತೆ, ಸೇತುವೆ…ಹೀಗೇ ಎಲ್ಲೆಲ್ಲಿ ಯಾವೆಲ್ಲಾ ಹಣವಿದೆಯೋ ಅಲ್ಲೆಲ್ಲಾ ಸರ್ಕಾರ ಹಿಂದೆ ಸರಿದು ಖಾಸಗಿಯವರು ಮೇಯುವ ಹುಲ್ಲುಗಾವಲಾಗಿ ಮಾಡಲಾಗುತ್ತಿದೆ. ಕಳೆದ ಕೆಲ ವರ್ಷಗಳಲ್ಲಿ ಭಾರತದ ಉದ್ದಿಮೆದಾರರ ಆಸ್ತಿಗಳಲ್ಲಿ ವಹಿವಾಟುಗಳ ವಿಸ್ತರಣೆಯಲ್ಲಿ ಕಂಡುಬರುತ್ತಿರುವ ಅಗಾಧ ಹೆಚ್ಚಳವು ಇದಕ್ಕೆ ಸಾಕ್ಷಿಯಾಗಿದೆ.

ಅಭಿವೃದ್ಧಿಯೆಂಬ ಬಾಳೆಯ ಹಣ್ಣಿನ ತಿರುಳನ್ನು ಖಾಸಗೀಯವರಿಗೂ, ಸಿಪ್ಪೆಯನ್ನು ಜನಸಾಮಾನ್ಯರಿಗೂ ಕೊಡಲಾಗುತ್ತಿದೆ. ದೇಶಭಕ್ತಿ, ಭಾರತಮಾತೆ ಎಂದೆಲ್ಲಾ ಅಬ್ಬರಿಸುತ್ತಾ ಪೂಜಾ ಪ್ರಸಾದವನ್ನು ಅಂಬಾನಿ, ಅದಾನಿಗಳಿಗೂ ಕೇವಲ ಆರತಿಯನ್ನು ಜನತೆಗೆ ಪ್ರದರ್ಶಿಸಲಾಗುತ್ತಿದೆ. ಇವ್ಯಾವುದರ ಅರಿವು ಜನಸಾಮಾನ್ಯರಿಗೆ ಬರದಿರಲೆಂದು ಸತತವಾಗಿ ದೇಶಭಕ್ತಿಯೆಂಬ ಉನ್ನತ ವೌಲ್ಯವನ್ನು ದುರುಪಯೋಗಪಡಿಸಿಕೊಂಡು ಯುವ ಜನತೆಯನ್ನು ದಾರಿ ತಪ್ಪಿಸಲಾಗುತ್ತಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!