ಬೆಂಗಳೂರು: ರಸ್ತೆಯಲ್ಲಿ ವಾಹನಗಳನ್ನು ಬೇಕಾಬಿಟ್ಟಿ ತಡೆದು ನಿಲ್ಲಿಸಿ ತಪಾಸಣೆ ನಡೆಸಕೂಡದು ಎಂದು ಇಂದು ಬೆಳಗ್ಗೆ ಐಜಿಪಿ ಪ್ರವೀಣ್ ಸೂದ್, ಪೊಲೀಸರಿಗೆ ಕಟ್ಟುನಿಟ್ಟಿನ ಆದೇಶ ಮಾಡಿದ್ದರು. ಇದನ್ನೂ ಮೀರಿ ತಪಾಸಣೆ ನೆಪದಲ್ಲಿ ವಾಹನ ತಡೆದಿದ್ದ ಟ್ರಾಫಿಕ್ ಕಾನ್ಸ್ಟೇಬಲ್ ವಿರುದ್ಧ ಇಲಾಖೆ ತನಿಖೆಗೆ ಆದೇಶಿಸಿದೆ.
ಐಜಿಪಿ ಪ್ರವೀಣ್ ಸೂದ್ ಸುಖಾಸುಮ್ಮನೆ ವಾಹನಗಳನ್ನು ನಿಲ್ಲಿಸದಂತೆ ಎರಡನೇ ಬಾರಿಗೆ ಖಡಕ್ ಸೂಚನೆ ನೀಡಿದ್ದರು. ಇದರ ಹೊರತಾಗಿಯೂ ಬೆಂಗಳೂರಿನ ಬೆಳ್ಳಂದೂರಿನ ಇಕೋ ಸ್ಪೇಸ್ ಬಳಿ ಹೆಚ್ ಎಸ್ ಆರ್ ಟ್ರಾಫಿಕ್ ಠಾಣೆಯ ಕಾನ್ಸ್ಟೇಬಲ್ ದ್ವಿಚಕ್ರ ವಾಹನ ತಡೆದಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಟ್ವಿಟರ್ ಮೂಲಕ ಡಿಜಿ ಐಜಿಪಿ ಪ್ರವಿಣ್ ಸೂದ್ , ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಗೆ ದೂರು ನೀಡಿದ್ದಾರೆ.
ಸಾರ್ವಜನಿಕರ ದೂರಿನ ಬಗ್ಗೆ ಪರಿಶೀಲನೆ ನಡೆಸುವಂತೆ ಪೊಲೀಸ್ ಕಮಿಷನರ್ ಅವರು ನಗರ ಸಂಚಾರ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಮತ್ತು ಪೂರ್ವ ವಿಭಾಗ ಡಿಸಿಪಿ ಕಲಾ ಕೃಷ್ಣಸ್ವಾಮಿ ಗೆ ಸೂಚನೆ ನೀಡಿದ್ದು, ತನಿಖೆ ವೇಳೆ ಕಾನ್ಸ್ಟೇಬಲ್ ಸುಖಾ ಸುಮ್ಮನೆ ವಾಹನ ತಡೆದಿರುವುದು ಬೆಳಕಿಗೆ ಬಂದಿದೆ.
ಅಲ್ಲದೆ ಅವರು ಬಾಡಿ ವೋರ್ನ್ ಕ್ಯಾಮರಾ ರೆರ್ಕಾಡಿಂಗ್ ಅನ್ನು ಆನ್ ಮಾಡಿರಲಿಲ್ಲ. ಕ್ಯಾಮರಾ ಆನ್ ಮಾಡದೆ ಕರ್ತವ್ಯ ನಿರ್ವಹಿಸುತ್ತಿದ್ದರು ಎಂಬುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಕಾನ್ಸ್ಟೇಬಲ್ ವಿರುದ್ಧ ಇಲಾಖಾ ತನಿಖೆಗೆ ರವಿಕಾಂತೇಗೌಡ ಅವರು ಆದೇಶ ಹೊರಡಿಸಿದ್ದಾರೆ.