ಬೆಂಗಳೂರು: ಬ್ರಾಹ್ಮಣರ ಬಗ್ಗೆ ಖ್ಯಾತ ನಟ ಚೇತನ್ ಅವರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಬ್ರಾಹ್ಮಣರ ಅಭಿವೃದ್ಧಿ ಮಂಡಳಿ ದೂರು ನೀಡಿದೆ.
ಬ್ರಾಹ್ಮಣರ ಬಗ್ಗೆ ನಟ ಚೇತನ್ ಮಾಡಿದ್ದ ಟ್ವೀಟ್ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಟ್ವೀಟ್ಗೆ ಸಂಬಂಧಿಸಿ ಬಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಗೆ ದೂರು ನೀಡಿದ್ದಾರೆ.
‘ಬ್ರಾಹ್ಮಣ್ಯವು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಮನೋಭಾವವನ್ನು ನಿರಾಕರಿಸುತ್ತದೆ. ನಾವು ಬ್ರಾಹ್ಮಣ್ಯವನ್ನು ಬೇರುಸಹಿತ ಕಿತ್ತುಹಾಕಬೇಕು’ ಎಂದು ಅಂಬೇಡ್ಕರ್ ಹೇಳಿದ್ದಾರೆ. ‘ಎಲ್ಲರೂ ಸರಿಸಮಾನರಾಗಿ ಜನಿಸಿದರೆ, ಬ್ರಾಹ್ಮಣರು ಮಾತ್ರ ಅತ್ಯುನ್ನತರು ಮತ್ತು ಉಳಿದವರೆಲ್ಲರೂ ಕೆಳಹಂತದವರು ಮತ್ತು ಅಸ್ಪೃಶ್ಯರು ಎಂದು ಹೇಳುವುದು ಸಂಪೂರ್ಣ ಅಸಂಬದ್ಧ. ಇದೊಂದು ದೊಡ್ಡ ವಂಚನೆ ಎಂಬುದಾಗಿ ಪೆರಿಯಾರ್ ಹೇಳಿದ್ದಾರೆ ಎಂದು ಚೇತನ್ ಟ್ವೀಟ್ ಮಾಡಿದ್ದರು.
ಬ್ರಾಹ್ಮಣಿಕೆ ಮತ್ತು ಬ್ರಾಹ್ಮಣತ್ವ ಭಯೋತ್ಪಾದಕ ಎಂಬ ರೀತಿಯಲ್ಲಿ ನಟ ಚೇತನ್ ಅವರ ಹೇಳಿಕೆ ಇದೆ. ಈ ಹೇಳಿಕೆಗಳು ಬ್ರಾಹ್ಮಣ ಸಮುದಾಯಕ್ಕೆ ತುಂಬಾ ನೋವು ತಂದಿವೆ. ಚೇತನ್ ಬ್ರಾಹ್ಮಣ ಸಮುದಾಯದ ಬೇಷರತ್ ಕ್ಷಮೆ ಕೇಳಲಿ. ನಟ ಚೇತನ್ ವಿರುದ್ಧ ಕಾನೂನು ರೀತಿ ಕ್ರಮಕೈಗೊಳ್ಳಬೇಕು ಎಂದು ಸಚ್ಚಿದಾನಂದ ಮೂರ್ತಿ ಆಗ್ರಹಿಸಿದ್ದಾರೆ.
ಈ ಬಗ್ಗೆ ‘ಪ್ರಸ್ತುತ’ ದೊಂದಿಗೆ ಪ್ರತಿಕ್ರಿಯಿಸಿರುವ ನಟ ಚೇತನ್, ತಮ್ಮ ಟ್ವೀಟ್ ಯಾವುದೇ ಜಾತಿ ಜನಾಂಗದ ವಿರುದ್ಧವಾಗಿಲ್ಲ, ಅದು ಒಂದು ಸಿದ್ಧಾಂತದ ವಿರುದ್ಧವಾಗಿದೆ. ಈ ಸಿದ್ಧಾಂತದಿಂದಾಗಿ ಸಾವಿರಾರು ವರ್ಷಗಳಿಂದ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ನಾನು ಬ್ರಾಹ್ಮಣ ಎಂಬ ಜಾತಿಯ ಬಗ್ಗೆ ಮಾತನಾಡಿಲ್ಲ. ಬ್ರಾಹ್ಮಣ್ಯತ್ವದ ಬಗ್ಗೆ ಪ್ರಸ್ತಾಪಿಸಿದ್ದೇನೆ, ಅದು ಕೂಡ ನನ್ನ ವೈಯಕ್ತಿಕ ಹೇಳಿಕೆಯಲ್ಲ, ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಪೆರಿಯಾರ್ ನೀಡಿದ್ದ ಹೇಳಿಕೆಯನ್ನು ಟ್ವೀಟ್ ಮಾಡಿದ್ದೇನೆ. ಆದರೂ ನನ್ನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಅದನ್ನು ಕಾನೂನಾತ್ಮಕವಾಗಿ ಮತ್ತು ಸೈದ್ಧಾಂತಿಕವಾಗಿ ಎದುರಿಸುತ್ತೇನೆ ಎಂದು ತಿಳಿಸಿದ್ದಾರೆ.