ಮುಖ್ಯಮಂತ್ರಿ ಹುದ್ದೆಗೆ ಕಾಂಗ್ರೆಸ್ ನಲ್ಲಿ ಈಗಲೇ ಲಾಭಿ ಶುರು ?

Prasthutha|

ಬೆಂಗಳೂರು : ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಹೇಳಿಕೆಗಳನ್ನು ಸಿದ್ದು ಆಪ್ತ ಬಣದ ಶಾಸಕರು ಪದೇ ಪದೇ ಹೇಳುತ್ತಿದ್ದಾರೆ. ಆದರೆ ಇದಕ್ಕೆ ಕಡಿವಾಣ ಹಾಕಲು ಡಿಕೆಶಿ ಬಣ ತಂತ್ರಗಾರಿಕೆ ನಡೆಸುತ್ತಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಡಿಕೆಶಿ ದೆಹಲಿಗೆ ತೆರಳಿ ರಾಹುಲ್ ಗಾಂಧಿಯನ್ನು ಭೇಟಿ ಮಾಡಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

- Advertisement -

ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್ ಅವರಿಗೆ ಮುಂದಿನ ಸಿಎಂ ಆಗಬೇಕು ಎಂಬ ಕನಸಿದೆ. ಈ ನಿಟ್ಟಿನಲ್ಲಿ ಪಕ್ಷವನ್ನು ತಮ್ಮದೇ ಆದ ರೀತಿಯಲ್ಲಿ ಸಂಘಟಿಸುವ ಪ್ರಯತ್ನದಲ್ಲಿ ಡಿಕೆಶಿ ಇದ್ದಾರೆ. ಆದರೆ ಇದರಲ್ಲಿ ಅವರು ಇನ್ನೂ ಯಶಸ್ಸನ್ನು ಕಾಣಲು ಸಾಧ್ಯವಾಗಿಲ್ಲ. ಪಕ್ಷ ಸಂಘಟನೆಯಲ್ಲಿ ಸಿದ್ದರಾಮಯ್ಯ ಅವರ ಹಿಡಿತ ಇರುವುದರಿಂದ ಹಾಗು ಅಯಕಟ್ಟಿನ ಸ್ಥಳದಲ್ಲಿ ಸಿದ್ದು ಟೀಂ ಬೀಡು ಬಿಟ್ಟಿರುವುದು ಡಿಕೆಶಿ ಗೆ ಅಡ್ಡಗಾಲಾಗಿ ಪರಿಣಮಿಸಿದೆ.

ಇದೇ ಕಾರಣಕ್ಕಾಗಿ ಪಕ್ಷದ ಪದಾಧಿಕಾರಿಗಳನ್ನು ಬದಲಾವಣೆ ಮಾಡುವ ಚಿಂತನೆ ಡಿಕೆ ಶಿವಕುಮಾರ್ ನಡೆಸಿದ್ದಾರೆ. ಅದಕ್ಕಾಗಿಯೇ ರಾಹುಲ್ ಗಾಂಧಿಯವರ ಒಪ್ಪಿಗೆ ಪಡೆಯಲು ದೆಹಲಿಗೆ ತೆರಳಿದ್ದರು ಎಂದು ಹೇಳಲಾಗಿದೆ. ಆದರೆ ತಳಮಟ್ಟದಲ್ಲಿ ಪಕ್ಷದ ಪದಾಧಿಕಾರಿಗಳ ಬದಲಾವಣೆ ಅಷ್ಟೊಂದು ಸುಲಭದ ಮಾತಲ್ಲ. ಸಿದ್ದರಾಮಯ್ಯ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಈ ಕೆಲಸಕ್ಕೆ ಕೈಹಾಕಬೇಕಿದೆ. ಈ ನಿಟ್ಟಿನಲ್ಲಿ ಡಿಕೆಶಿ ತಂತ್ರಗಾರಿಕೆ ಏನು ಎಂಬುವುದು ಕೂಡಾ ಕುತೂಹಲಕ್ಕೆ ಕಾರಣವಾಗಿದೆ.

- Advertisement -

ಇನ್ನು ಪಕ್ಷದಲ್ಲಿ ನಡೆಯುತ್ತಿರುವ ಸಿಎಂ ಸ್ಥಾನಕ್ಕಾಗಿ ಗುದ್ದಾಟ ವಿಚಾರವಾಗಿ ಶೀಘ್ರದಲ್ಲೇ ಹಿರಿಯ ಮುಖಂಡರ ಸಭೆಯನ್ನು ಡಿಕೆಶಿ ಕರೆಯುವ ಸಾಧ್ಯತೆ ಇದೆ. ಈ ಸಭೆಯಲ್ಲಿ ಪಕ್ಷದಲ್ಲಿ ನಡೆಯುತ್ತಿರುವ ಸಿಎಂ ಸ್ಥಾನದ ಗುದ್ದಾಟ ಕುರಿತಾಗಿ ಚರ್ಚೆ ನಡೆಯಲಿದೆ. ಸದ್ಯಕ್ಕೆ ಯಾರೂ ಕೂಡಾ ಬಹಿರಂಗ ಹೇಳಿಕೆ ನೀಡಬಾರದು. ಈ ನಿಟ್ಟಿನಲ್ಲಿ ಮುಖಂಡರು ಆಪ್ತರಿಗೆ ಸೂಚನೆಯನ್ನು ನೀಡಬೇಕು ಎಂಬ ಸಲಹೆಗಳನ್ನು ಹಿರಿಯ ಮೂಲಕವೇ ಕೊಡಿಸುವುದು ಡಿಕೆಶಿ ತಂತ್ರಗಾರಿಕೆಯಾಗಿದೆ. ಸದ್ಯ ಚುನಾವಣೆಯ ಎರಡು ವರ್ಷಗಳ ಕಾಲಾವಕಾಶವಿದೆ. ಇಂತಹ ಸಂದರ್ಭದಲ್ಲಿ ಪಕ್ಷದಲ್ಲಿ ಸಿಎಂ ಯಾರು ಎಂಬ ಚರ್ಚೆ ನಡೆಸಬಾರದು ಎಂಬ ವಿಚಾರವನ್ನು ಸಭೆಯಲ್ಲಿ ಪ್ರಸ್ತಾಪ ಮಾಡಿ ಗೊಂದಲಕ್ಕೆ ಅಂತ್ಯ ಹಾಡುವುದು ಡಿಕೆಶಿ ತಂತ್ರಗಾರಿಕೆ ಆಗಿದೆ.

ಒಟ್ಟಿನಲ್ಲಿ ಸಿಎಂ ಸ್ಥಾನಕ್ಕಾಗಿ ನಡೆಯುತ್ತಿರುವ ಗುದ್ದಾಟ ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಗೊಂದಲಗಳನ್ನು ಸೃಷ್ಟಿಸಿದೆ. ಪಕ್ಷದ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇದನ್ನು ಹೇಗೆ ಬಗೆಹರಿಸಿಕೊಳ್ಳುತ್ತಾರೆ ಎಂಬುವುದು ಸದ್ಯದ ಕುತೂಹಲ.

Join Whatsapp