ಮೌಲಾನ ಆಜಾದ್ ಶಾಲೆಗಳನ್ನು ಮುಚ್ಚುತ್ತಿರುವುದು ಅಲ್ಪಸಂಖ್ಯಾತರನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವ ಬಿಜೆಪಿಯ ತಂತ್ರದ ಮುಂದುವರಿದ ಭಾಗ: ಅಬ್ದುಲ್ ಮಜೀದ್ 

Prasthutha|

ಬೆಂಗಳೂರು: ಮೂಲಸೌಕರ್ಯ ಕೊರತೆ ನೆಪವೊಡ್ಡಿ 22 ಮೌಲಾನ ಆಜಾದ್ ಮಾದರಿ ಶಾಲೆಗಳನ್ನು ರಾಜ್ಯ ಸರ್ಕಾರ ಮುಚ್ಚುತ್ತಿರುವುದು ಅಲ್ಪಸಂಖ್ಯಾತರನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವ ಬಿಜೆಪಿಯ ತಂತ್ರದ ಮುಂದುವರಿದ ಭಾಗವಾಗಿದ್ದು ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ  (ಎಸ್ ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜಿದ್ ಮೈಸೂರು ತಿಳಿಸಿದ್ದಾರೆ.

- Advertisement -

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ನೂರಕ್ಕಿಂತ ಕಡಿಮೆ ಮಕ್ಕಳು ದಾಖಲಾಗಿರುವ ಕಾರಣ ಆ ಶಾಲೆಗಳನ್ನು ಮುಚ್ಚುತ್ತಿರುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಆದರೆ ಆ ರೀತಿ ನೂರಕ್ಕಿಂತ ಕಡಿಮೆ ದಾಖಲಾತಿ ಇರುವ ಅದೆಷ್ಟೋ ಶಾಲೆಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವುದನ್ನು ನಾವು ನೋಡಬಹುದು. ಇದು ಸಂತೋಷದ ವಿಚಾರವೇ, ಆದರೆ ಅಲ್ಪಸಂಖ್ಯಾತರ ಶಾಲೆಗಳ ವಿಚಾರದಲ್ಲಿ ಮಾತ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಅವರು ಕಿಡಿಕಾರಿದರು.

ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗ ಜಾರಿಗೆ ತಂದ ಈ ಯೋಜನೆಗೆ ಬಿಜೆಪಿ ಸರ್ಕಾರ ಸಮಯಕ್ಕೆ ಸರಿಯಾಗಿ ಸೂಕ್ತ ಅನುದಾನ ಒದಗಿಸಲಿಲ್ಲ. ಈ ಕಾರಣಕ್ಕೆ ಮೂಲಸೌಕರ್ಯ ಒದಗಿಸಲು ಸಾಧ್ಯವಾಗಿಲ್ಲ. ಸರಿಯಾದ ಸಮಯಕ್ಕೆ ಕಟ್ಟಡ ನಿರ್ಮಾಣ ಮಾಡಿ, ಮೂಲಸೌಕರ್ಯ ಒದಗಿಸಿ, ಮಕ್ಕಳಿಗೆ ಸಮವಸ್ತ್ರ ಇನ್ನಿತರ ಸೌಲಭ್ಯಗಳನ್ನು ಒದಗಿಸಿದ್ದರೆ ಅಲ್ಲಿ ಮಕ್ಕಳ ದಾಖಲಾತಿ ಖಂಡಿತ ಉತ್ತಮವಾಗಿರುತ್ತಿತ್ತು. ಇದು ಸರ್ಕಾರದ ಕರ್ತವ್ಯಲೋಪವಲ್ಲದೆ ಮತ್ತೇನು ಅಲ್ಲ ಎಂದು ಮಜೀದ್  ಆರೋಪಿಸಿದ್ದಾರೆ.

- Advertisement -

ಈ ಶಾಲೆಗಳನ್ನು ನಿರ್ವಹಿಸಲು ಸರ್ಕಾರದ ಬಳಿ ಹಣದ ಕೊರತೆಯಿದೆ ಎಂದಾದರೆ ಮಕ್ಕಳಿಗೆ ಶಿಕ್ಷಣ ಒದಗಿಸಲು ಸಹ ರಾಜ್ಯ ಸರ್ಕಾರದ ಬಳಿ ಹಣ ಇಲ್ಲದಷ್ಟು ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ತಿಳಿಯಬೇಕಾಗುತ್ತದೆ. ಸರ್ಕಾರದ ಬಳಿ ಅನವಶ್ಯಕ ವಿಚಾರಗಳಿಗೆ, ಜಾಹೀರಾತುಗಳಿಗೆ ಹಣ ಇದೆ ಎಂದಾದರೆ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಲು ಹಣ ಏಕೆ ಇಲ್ಲ? ಎಂದು ಅವರು ಪ್ರಶ್ನಿಸಿದ್ದಾರೆ.

ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ತೆಗೆದುಕೊಂಡಿರುವ ಈ ನಿರ್ಧಾರವನ್ನು ರಾಜ್ಯ ಸರ್ಕಾರ ತಕ್ಷಣವೇ ಹಿಂಪಡೆಯಬೇಕು ಎಂದು ಎಸ್‌ಡಿಪಿಐ ಪಕ್ಷ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತದೆ ಎಂದು ಅಬ್ದುಲ್ ಮಜೀದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp