LJP ಪಕ್ಷದ ಮುಖ್ಯಸ್ಥ ಸ್ಥಾನದಿಂದ ಚಿರಾಗ್ ಪಾಸ್ವಾನ್ ಔಟ್!
Prasthutha: June 15, 2021

►ನೂತನ ಮುಖ್ಯಸ್ಥರಾಗಿ ಪಶುಪತಿ ಕುಮಾರ್ ಪರಾಸ್ ಆಯ್ಕೆ
ಹೊಸದಿಲ್ಲಿ : ಚಿರಾಗ್ ಪಾಸ್ವಾನ್ ಅವರನ್ನು ಲೋಕ ಜನಶಕ್ತಿ ಪಕ್ಷದ (ಎಲ್ ಜೆಪಿ) ಮುಖ್ಯಸ್ಥ ಸ್ಥಾನದಿಂದ ತೆಗೆದು ಹಾಕಲಾಗಿದ್ದು, ಅವರ ಬದಲಿಗೆ ಪಶುಪತಿ ಕುಮಾರ್ ಪರಾಸ್ ಅವರನ್ನು ನೂತನ ನಾಯಕರನ್ನಾಗಿ ಹೆಸರಿಸಿದೆ.
ಲೋಕಸಭೆಯ ಆರು ಲೋಕ ಜನಶಕ್ತಿ ಪಕ್ಷದ ಸಂಸದರಲ್ಲಿ ಐದು ಮಂದಿ ತಮ್ಮ ನಾಯಕ ಚಿರಾಗ್ ಪಾಸ್ವಾನ್ ವಿರುದ್ಧ ತಿರುಗಿ ನಿಂತು ಪಾಸ್ವಾನ್ ಅವರ ದಿವಂಗತ ತಂದೆ ಮತ್ತು ಪಕ್ಷದ ಸಂಸ್ಥಾಪಕ ರಾಮ್ ವಿಲಾಸ್ ಪಾಸ್ವಾನ್ ಅವರ ಕಿರಿಯ ಸಹೋದರ ಪಶುಪತಿ ಕುಮಾರ್ ಪರಾಸ್ ಅವರನ್ನು LJP ಮುಖ್ಯಸ್ಥ ಸ್ಥಾನಕ್ಕೆ ಆಯ್ಕೆ ಮಾಡಿದ್ದು, ಇದು ಬಿಹಾರ ರಾಜಕೀಯದಲ್ಲಿ ಭಾರೀ ಸಂಚಲನವನ್ನುಂಟು ಮಾಡಿದೆ.
‘ನನ್ನ ತಂದೆ ಮತ್ತು ಕುಟುಂಬ ಸ್ಥಾಪಿಸಿದ ಪಕ್ಷವನ್ನ ಒಟ್ಟಿಗೆ ಇರಿಸಲು ನಾನು ಪ್ರಯತ್ನಿಸಿದೆ. ಆದ್ರೆ, ವಿಫಲನಾದೆ. ತಾಯಿಯಂತಿರುವ ಪಕ್ಷಕ್ಕೆ ಯಾರೂ ಅದಕ್ಕೆ ದ್ರೋಹ ಮಾಡಬಾರದು. ಪ್ರಜಾಪ್ರಭುತ್ವದಲ್ಲಿ ಜನರು ಸರ್ವೋಚ್ಚರಾಗಿದ್ದಾರೆ. ಪಕ್ಷದ ಮೇಲೆ ವಿಶ್ವಾಸವಿಡುವವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ’ ಎಂದು ಚಿರಾಗ್ ಪಾಸ್ವಾನ್ ಅವರು ಪಕ್ಷದ ಹುದ್ದೆಯಿಂದ ಹೊರಹಾಕಲ್ಪಟ್ಟ ನಂತರ ಹೇಳಿಕೆ ನೀಡಿದ್ದಾರೆ.
