ಬೆಂಗಳೂರು: ರಾಜ್ಯದಲ್ಲಿ ನಡೆದ 543 ಮಂದಿ ಪಿಎಸ್ ಐ ನೇಮಕಾತಿ ಅಕ್ರಮದ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳ ಸಂಬಂಧ ಸಿಐಡಿ ಅಧಿಕಾರಿಗಳು ಇಂದು ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಲಿದ್ದಾರೆ.
ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳ ಸಂಬಂಧ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಿದೆ. ಕೆಲ ಆರೋಪಿಗಳನ್ನು ಬಿಟ್ಟು ಉಳಿದ ಆರೋಪಿಗಳ ಮೇಲೆ ಚಾರ್ಜ್ ಶೀಟ್ ಸಲ್ಲಿಸಲಾಗುತ್ತದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಪ್ರಕರಣದ ಸಂಪೂರ್ಣ ತನಿಖೆ ಮುಗಿದವರ ವಿರುದ್ಧ ಮಾತ್ರ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಎಫ್ ಐಆರ್ ನಲ್ಲಿ ಹೆಸರು ಇದ್ದು, ಬಂಧನವಾಗದೆ ಇರುವ ಆರೋಪಿಗಳು ಹಾಗೂ ಕೊನೆಯ ಹಂತದಲ್ಲಿ ಬಂಧನವಾಗಿರುವ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ನಲ್ಲಿ ಸೇರಿಸಲಾಗಿಲ್ಲ.
ಇನ್ನೂ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ಅಧಿಕಾರಿಗಳು ಕಲಬುರಗಿ ನಗರ ಪೊಲೀಸ್ ಆಯುಕ್ತ ರವಿಕುಮಾರ್ ಗೆ ಪತ್ರ ಬರೆದಿದ್ದಾರೆ. ಜ್ಞಾನಜ್ಯೋತಿ ಶಾಲೆಯಲ್ಲಿ ಪಿಐಎಸ್ ನೇಮಕಾತಿ ಪರೀಕ್ಷೆ ನಡೆದಿತ್ತು. ಬಳಿಕ ಪಿಎಸ್ ಐ ಪರೀಕ್ಷೆ ವೇಳೆ ಅಕ್ರಮ ನಡೆದ ವಿಷಯ ಬಹಿರಂಗವಾಗಿತ್ತು. ಈ ಹಿನ್ನೆಲೆ ಜ್ಞಾನಜ್ಯೋತಿ ಶಾಲೆಯ ಅಕ್ರಮ ಸೇರಿದಂತೆ ಪ್ರಕರಣ ಸಂಬಂಧ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಪೊಲೀಸ್ ಆಯುಕ್ತರನ್ನು ಕೇಳಿದ್ದಾರೆ.
ಹುಲ್ಲೂರ್ ಅವರನ್ನು ಪರೀಕ್ಷಾ ಕೇಂದ್ರದಿಂದ ಬಿಡುಗಡೆಗೆ ರಾಯಚೂರು ಎಸ್ ಪಿ ಪತ್ರ ಬರೆದಿದ್ದರಾ? ಪರೀಕ್ಷಾ ಕೇಂದ್ರದಿಂದ ಬಿಡುಗಡೆ ಮಾಡುವಂತೆ ಹುಲ್ಲೂರ ಆಯುಕ್ತರ ಕಚೇರಿಗೆ ಮನವಿ ಪತ್ರ ಕೊಟ್ಟಿದಾರೆಯೇ? ಡಿವೈಎಸ್ ಪಿ ಹುಲ್ಲೂರ್ ಸ್ಥಳಕ್ಕೆ ಹೊಸಮನಿ ನೇಮಿಸದಕ್ಕೆ, ಹೊಸಮನಿ ಅವರ ಜಾಗಕ್ಕೆ ಯಾರನ್ನು ನೇಮಕ ಮಾಡಲಾಯಿತು? ಪಿಎಸ್ ಐ ಪರೀಕ್ಷೆ ವೇಳೆ ಲೋಹ ಶೋಧಕ ಯಂತ್ರ ಇದ್ದರೂ ಸಹ ಪರೀಕ್ಷೆ ಒಳಗಡೆ ಡಿವೈಸ್ ತೆಗೆದುಕೊಂಡು ಹೋಗಿದ್ದಾರೆ.
ಆದರೆ ಬಾಗಿಲಲ್ಲಿ ಇರುವ ನಿಮ್ಮ ಸಿಬ್ಬಂದಿ ಯಾಕೆ ಇದನ್ನು ಪತ್ತೆ ಮಾಡಲಿಲ್ಲ? ಡಿವೈ ಎಸ್ ಪಿ ಹುಲ್ಲೂರ್ ರನ್ನು ದಿಢೀರನೆ ಏಕೆ ಆ ಕೇಂದದಿಂದ ಬದಲಾವಣೆ ಮಾಡಲಾಯಿತು? ಆ ಕೇಂದ್ರಕ್ಕೆ ನೇಮಕವಾದ ಡಿವೈಎಸ್ ಪಿ ಹೊಸಮನಿ ಅವರಿಗೆ ಪರೀಕ್ಷಾ ತರಬೇತಿ ನೀಡಲಾಗಿತ್ತಾ? ಅಕ್ರಮ ನಡೆದ ಹಲವು ಕೇಂದ್ರಗಳಲ್ಲಿ ಮೆಟಲ್ ಡಿಟಕ್ಟರ್ ಲೋಪ್ ಕಂಡು ಬಂದಿರುವದು ಏಕೆ? ಎಂಬ ಅನೇಕ ವಿಷಯಗಳ ಬಗ್ಗೆ ಮಾಹಿತಿ ನೀಡುವಂತೆ ಸಿಐಡಿ ಪತ್ರ ಬರೆದಿದೆ.
ಪಿಎಸ್ ಐ ನೇಮಕಾತಿ ಪರೀಕ್ಷೆ ರದ್ದು ಮಾಡಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳ ಅರ್ಜಿಯನ್ನು ವಜಾಗೊಳಿಸಿ ಕರ್ನಾಟಕ ಆಡಳಿತ ನ್ಯಾಯಮಂಡಳಿ ಆದೇಶ ಹೊರಡಿಸಿದೆ.
ಪಿಎಸ್ ಐ ಅಭ್ಯರ್ಥಿಗಳು ಪರೀಕ್ಷೆ ರದ್ದು ಆದೇಶ ಪ್ರಶ್ನಿಸಿ ತನಿಖೆ ಮೂಲಕ ಕಳಂಕಿತರನ್ನು ಪ್ರತ್ಯೇಕಿಸಲು ಮನವಿ ಮಾಡಿದ್ದರು. ಆದ್ರೆ ಈಗ ಕಾರಣಕೊಟ್ಟು ಅಭ್ಯರ್ಥಿಗಳ ಅರ್ಜಿ ವಜಾಗೊಳಿಸಿ ಕರ್ನಾಟಕ ಆಡಳಿತ ನ್ಯಾಯಮಂಡಳಿ ಆದೇಶ ಹೊರಡಿಸಿದೆ.