ಸೈದ್ಧಾಂತಿಕವಾಗಿ ವಿಚಾರ ಮಂಡಿಸಲಿ, ಆದರೆ ಹತ್ಯೆಮಾಡುವುದು, ರಕ್ತ ಹರಿಸುವುದು ಸರಿಯಲ್ಲ: ಗೃಹ ಸಚಿವ

Prasthutha|

ಬೆಂಗಳೂರು: ಸೈದ್ಧಾಂತಿಕವಾಗಿ ವಿಚಾರ ಮಂಡಿಸಲಿ. ಆದರೆ ಹತ್ಯೆ ಮಾಡುವುದು, ರಕ್ತ ಹರಿಸುವುದು ಸರಿಯಲ್ಲ. ಇಂಥ ಶಕ್ತಿಗಳನ್ನು ಮಟ್ಟ ಹಾಕುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

- Advertisement -

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದೊಂದು ದುರದೃಷ್ಟಕರ ಸಂಗತಿ. ಒಬ್ಬ ಅಮಾಯಕ ಯುವಕ ತನ್ನ ಅಂಗಡಿ ಮುಚ್ಚಿ ಮನೆಗೆ ಹೋಗುವಾಗ ಕೊಲೆಯಾಗಿದ್ದಾನೆ.

ಬೈಕ್ ನಲ್ಲಿ ಬಂದು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಪ್ರವೀಣ್ ಕೇರಳದ ಗಡಿಯಲ್ಲಿದ್ದರು. ಹೀಗಾಗಿ ಕೇರಳ ಸರ್ಕಾರದ ಜೊತೆಗೂ ನಮ್ಮ ಪೊಲೀಸರು ಮಾತನಾಡಿದ್ದಾರೆ. ಅಲ್ಲೂ ಕಾರ್ಯಾಚರಣೆ ನಡೆಯುತ್ತಿದೆ. ಒಬ್ಬ ಯುವಕನ ಕೊಲೆಯಾಗಿರುವುದರಿಂದ ಆ ಭಾಗದ ಜನರು ಕೂಡ ಆತಂಕಕ್ಕೊಳಗಾಗಿದ್ದಾರೆ. ನಾನು, ಮುಖ್ಯಮಂತ್ರಿಗಳು ರಾತ್ರಿಯೇ ಪೊಲೀಸರ ಜೊತೆ ಮಾತಾಡಿದ್ದೇವೆ. ಅಗತ್ಯ ಸೂಚನೆ ನೀಡಿದ್ದೇವೆ. ಇದೀಗ ಪೊಲೀಸರು ಕೊಲೆಗಡುಕರ ಬೆನ್ನಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

- Advertisement -

ನಮ್ಮ ಎಡಿಜಿಪಿ ಮಂಗಳೂರಿಗೆ ಹೋಗಿದ್ದಾರೆ. ಇಂಥ ಘಟನೆಗಳು ಮರುಕಳಿಸುತ್ತಿವೆ. ಹಿಜಾಬ್ ಹಿಂದಿನ ಶಕ್ತಿಗಳೇ ಇದರ ಹಿಂದೆಯೂ ಇದೆ. ಸೈದ್ಧಾಂತಿಕವಾಗಿ ವಿಚಾರ ಮಂಡಿಸಲಿ. ಆದರೆ ಹತ್ಯೆ ಮಾಡುವುದು, ರಕ್ತ ಹರಿಸುವುದು ಸರಿಯಲ್ಲ. ಇಂಥ ಶಕ್ತಿಗಳನ್ನು ಮಟ್ಟ ಹಾಕುತ್ತೇವೆ. ಅನೇಕ ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದಾರೆ. ಕಳೆದ ವಾರ ನಡೆದ ಕೊಲೆ ಪ್ರಕರಣದ ಆರೋಪಿಗಳು ಸಿಕ್ಕಿದ್ದಾರೆ. ಅದೂ ಕಾರಣ ಆಗಿದೆಯಾ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ. ಈಗಾಗಲೇ ಮಂಗಳೂರು ಜಿಲ್ಲೆಯಾದ್ಯಂತ ಸಾಕಷ್ಟು ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಪೊಲೀಸರು ಶೀಘ್ರವೇ ಆರೋಪಿಗಳನ್ನು ಬಂಧಿಸಿ ಅವರ ದಮನ ಮಾಡುತ್ತಾರೆ. ಈ ಘಟನೆ ಸಂಬಂಧ ಜನರಲ್ಲಿ ಆಕ್ರೋಶ ಮನೆ ಮಾಡಿದೆ. ಹೀಗಾಗಿ ಮೂರು ತಾಲೂಕುಗಳಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಜನರಿಗೆ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಿದ್ದಾರೆ.

ಮತ್ತೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರ, ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಈ ಮತಾಂಧ ಶಕ್ತಿಗಳು ಒಂದು ರಾಜ್ಯದಲ್ಲಿ ಮಾತ್ರ ಕಾರ್ಯಾಚರಣೆ ಮಾಡುತ್ತಿಲ್ಲ. ಅವರ ಕಾರ್ಯಾಚರಣೆ ಎರಡು ರಾಜ್ಯಗಳಲ್ಲಿ ನಡೆಯುತ್ತಿದೆ. ಗಡಿ ಭಾಗದಲ್ಲಿ ಈ ಕೃತ್ಯಗಳನ್ನು ಮಾಡುತ್ತಿದ್ದಾರೆ. ಕೇರಳ ಸಿಎಂ ಸಹ ಮಾತನಾಡಿದ್ದಾರೆ. ಈ ವಿಚಾರವಾಗಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.



Join Whatsapp