ಬಿಜೆಪಿ ತ್ಯಜಿಸಿ TMC ಸೆರಿದ ಮುಕುಲ್ ರಾಯ್ । Z ಶ್ರೇಣಿ ಭದ್ರತೆ ವಾಪಸ್ ಪಡೆದ ಕೇಂದ್ರ

Prasthutha|

2017 ರಲ್ಲಿ TMC ತ್ಯಜಿಸಿ ಬಿಜೆಪಿ ಸೇರಿ ಶಾಸಕರಾಗಿದ್ದ ಹಿರಿಯ ಮುಖಂಡ ಮುಕುಲ್ ರಾಯ್ ಕಳೆದ ವಾರ ವಾಪಸ್ ಟಿಎಂಸಿ ಸೇರಿದ್ದಾರೆ. ಇದೇ ಸಂದರ್ಭದಲ್ಲಿ ಅವರಿಗೆ ನೀಡಲಾಗಿದ್ದ Z ಶ್ರೇಣಿಯ ವಿಐಪಿ ಭದ್ರತೆಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ವಾಪಸ್ ಪಡೆದಿದೆ ಎನ್ನಲಾಗಿದೆ.

- Advertisement -

ಮುಕುಲ್ ರಾಯ್‌ಗೆ ನೀಡಲಾಗಿದ್ದ ರಕ್ಷಣೆಯನ್ನು ನಿಲ್ಲಿಸುವಂತೆ ಕೇಂದ್ರ ಗೃಹ ಸಚಿವಾಲಯವು ಕೇಂದ್ರ ಮೀಸಲು ಪೊಲೀಸ್ ಪಡೆಗೆ (ಸಿಆರ್‌ಪಿಎಫ್) ನಿರ್ದೇಶನ ನೀಡಿದೆ. ಕಳೆದ ವಾರ ಮುಕುಲ್ ರಾಯ್ ಬಿಜೆಪಿ ತ್ಯಜಿಸಿ ತನ್ನ ಮಗ ಸುಬ್ರಂಗ್ಶು ರಾಯ್‌ ಜೊತೆಗೆ ಟಿಎಂಸಿ ಸೇರಿದ್ದರು. ಅವರ ಅನುಯಾಯಿಗಳು ಸಹ ಬಿಜೆಪಿ ಬಿಟ್ಟು ಭಾರಿ ಸಂಖ್ಯೆಯಲ್ಲಿ ಟಿಎಂಸಿ ಸೇರುತ್ತಾರೆ ಎಂಬ ಚರ್ಚೆಗಳು ಕೇಳಿಬರುತ್ತಿವೆ.

2017ರಲ್ಲಿ ಮುಕುಲ್ ರಾಯ್ ಟಿಎಂಸಿ ತ್ಯಜಿಸಿ ಬಿಜೆಪಿ ಸೇರಿದ ನಂತರ ಅವರನ್ನು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಮಾಡಲಾಗಿತ್ತು. ಜೊತೆಗೆ Z ಶ್ರೇಣಿಯ ವಿಐಪಿ ರಕ್ಷಣೆ ನೀಡಲಾಗಿತ್ತು. ಅವರು ಪಶ್ಚಿಮ ಬಂಗಾಳದಲ್ಲಿ ಸಂಚರಿಸುವಾಗ 22-24 ಸಿಆರ್‌ಪಿಎಫ್‌ ಕಮಾಂಡೊಗಳು ಅವರಿಗೆ ರಕ್ಷಣೆ ನೀಡಲು ಸಂಚರಿಸುತ್ತಿದ್ದವು. ಸದ್ಯ ಅವರಿಗೆ ರಾಜ್ಯ ಪೊಲೀಸರು ಭದ್ರತೆ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.



Join Whatsapp