ಲಸಿಕೆ ಹಾಕಿಸಿಕೊಳ್ಳದಿದ್ದರೆ ಮೊಬೈಲ್ ಬ್ಲಾಕ್, ಉದ್ಯೋಗಕ್ಕೆ ಕತ್ತರಿ | ನೆರೆ ರಾಷ್ಟ್ರದ ವಿಭಿನ್ನ ಎಚ್ಚರಿಕೆ!

Prasthutha|

ಇಸ್ಲಾಮಾಬಾದ್: ಕೋವಿಡ್ ಲಸಿಕೆ ಹಾಕಿಸುವುದರಿಂದ ತಪ್ಪಿಸಿಕೊಳ್ಳುವ ತಮ್ಮ ನಾಗರಿಕರಿಗೆ ಪಾಕಿಸ್ತಾನ ಸರಕಾರವು ವಿಭಿನ್ನವಾಗಿ ಎಚ್ಚರಿಕೆ ನೀಡಿದೆ. ಒಂದು ವೇಳೆ ಲಸಿಕೆ ಹಾಕಿಸಿಕೊಳ್ಳದೇ ಇರುವ ನಾಗರಿಕರ ಮೊಬೈಲ್ ಫೋನ್ ಸ್ಥಗಿತ ಹಾಗೂ ಉದ್ಯೋಗದ ಮೇಲೆ ನಿಷೇಧ ಹೇರುವುದಾಗಿ ತಿಳಿಸಿದೆ.

- Advertisement -

ಅಲ್ಲದೇ ಲಸಿಕೆ ಹಾಕಿಸಿಕೊಂಡ ಪ್ರಮಾಣ ಪತ್ರ ಇಲ್ಲದೇ ಹೋದಲ್ಲಿ ಶಾಪಿಂಗ್ ಮಾಲ್, ರೆಸ್ಟೋರೆಂಟ್, ಕಚೇರಿ ಹಾಗೂ ಸಾರ್ವಜನಿಕ ಸಾರಿಗೆಯ ಬಳಕೆಯನ್ನ ತಡೆ ಹಿಡಿಯುವುದಾಗಿಯೂ ಪಾಕ್ ಸರಕಾರ ಎಚ್ಚರಿಸಿದೆ. ಇದರಿಂದಾಗಿ ಪಾಕಿಸ್ತಾನದಲ್ಲಿ ಏಕಾಏಕಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿರುವುದು ಕಂಡು ಬಂದಿದೆ.  

“ನನಗೆ ಕೊರೊನಾ ಸೋಂಕಿನ ಬಗ್ಗೆ ಭಯವಿಲ್ಲ, ಆದರೆ ಹಾಕಿಸಿಕೊಳ್ಳದೇ ಇದ್ದಲ್ಲಿ ನಮ್ಮ ಸಿಮ್ ಕಾರ್ಡ್ ಬ್ಲಾಕ್ ಆಗುತ್ತವೆ. ನಮ್ಮ ವೇತನವನ್ನ ತಡೆ ಹಿಡಿಯಲಾಗುತ್ತದೆ. ಹೀಗಾಗಿ ನಾನು ನನ್ನ ಎರಡನೇ ಲಸಿಕೆಯನ್ನು ಪಡೆದುಕೊಂಡಿದ್ದೇನೆ” ಅಂತಾ ಬ್ಯಾಂಕ್ ಉದ್ಯೋಗಿಯೊಬ್ಬರು ಮಾಧ್ಯಮಗಳಿಗೆ ಪ್ರತಿಕ್ರಿಯಸಿದ್ದಾರೆ.

- Advertisement -

ಕಳೆದ ತಿಂಗಳಿನಿಂದ ಪಾಕಿಸ್ತಾನ ಸರಕಾರವು ಲಸಿಕೆ ಹಾಕಿಸಿಕೊಳ್ಳದವರ ಸಾರ್ವಜನಿಕ ಓಡಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾಕಷ್ಟು ಕಟ್ಟುನಿಟ್ಟಿನ ಕ್ರಮವನ್ನ ಘೋಷಿಸಿತ್ತು. ಇದರಿಂದಾಗಿ ಕಳೆದ ಒಂದು ವಾರದಿಂದ ಪಾಕಿಸ್ತಾನದ ಹಲವು ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಪಡೆಯಲು ಸಾಲುಗಟ್ಟಿ ನಿಂತಿರುವುದು ಕಂಡು ಬರುತ್ತಿದೆ ಎನ್ನಲಾಗಿದೆ.

“ಈಗಾಗಲೇ ನಿಯಮವನ್ನ ಜಾರಿಗೊಳಿಸಲು ಆರಂಭಿಸಿದ್ದೇವೆ. ಕೆಲವೊಂದು ಕಂಪೆನಿಗಳು ಕೂಡಾ ತಮ್ಮ ನೌಕರರ ಮೇಲೆ ಬಿಗಿ ಕ್ರಮವನ್ನ ಜಾರಿಗೊಳಿಸುತ್ತಿದೆ” ಅನ್ನೋದಾಗಿ ಸರಕಾರದ ಪರ ವಕ್ತಾರ ಮುರ್ತಝಾ ವಹಾಬ್ ತಿಳಿಸಿದ್ದಾರೆ.  

ಪಾಕಿಸ್ತಾನ ಹಾಗೂ ಅಫಘಾನಿಸ್ತಾನ ದೇಶಗಳ ಲಸಿಕೆ ವಿರೋಧಿ ನೀತಿಯಿಂದಾಗಿಯೇ ಇಂದಿಗೂ ಆ ಎರಡು ದೇಶಗಳು ಪೋಲಿಯೋ ರೋಗ ಮುಕ್ತವಾಗಿಲ್ಲ ಅನ್ನೋದಾಗಿ ಮಾಧ್ಯಮಗಳು ತಮ್ಮ ವರದಿಯಲ್ಲಿ ಉಲ್ಲೇಖಿಸಿದೆ.     

Join Whatsapp