ರಮೇಶ್ ಜಾರಕಿಹೊಳಿ ಸೆಕ್ಸ್ CD ಹಗರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಣಧೀರ ಪಡೆಯನ್ನು ಎಳೆದು ತರಲಾಗುತ್ತಿದೆ ಕರ್ನಾಟಕ ರಣಧೀರ ಪಡೆ ರಾಜ್ಯಾಧ್ಯಕ್ಷ ಹರೀಶ್ ಕುಮಾರ್ ಆರೋಪಿಸಿದ್ದಾರೆ.
ಅವರು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಪ್ರತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. “ರಣಧೀರ ಪಡೆಯ ವೇದಿಕೆಯಲ್ಲಿದ್ದ ಯುವತಿ ಮತ್ತು ಸಚಿವರ ಜೊತೆ ಸಿಡಿಯಲ್ಲಿರುವ ಯುವತಿಯಾಗಿದ್ದಾಳೆ ಎನ್ನುವುದಕ್ಕೆ ಯಾವುದೇ ನಿಖರ ದಾಖಲೆಗಳು ಇಲ್ಲ. ಸೆಕ್ಸ್ CDಗೂ ನಮಗೂ ಯಾವುದೇ ಸಂಬಂಧವಿಲ್ಲ. ಅದರ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಸಂಘಟನೆಯ ಏಳಿಗೆಯನ್ನು ಸಹಿಸದವರು ನಮ್ಮ ವಿರುದ್ಧ ಪಿತೂರಿ ಮಾಡಿದ್ದಾರೆ. ಸಂಘಟನೆ ಬಗ್ಗೆ ಮಾಧ್ಯಮಗಳು ಸುಳ್ಳು ಪ್ರಚಾರ ಮಾಡಬಾರದು. ಈ ಬಗ್ಗೆ ನಾವು ಕಾನೂನು ರೀತಿಯ ಕ್ರಮಗಳನ್ನು ಕೈಗೊಳ್ಳುತ್ತೇವೆ” ಎಂದು ಹರೀಶ್ ಕುಮಾರ್ ಹೇಳಿದ್ದಾರೆ.
ರಣಧೀರ ಪಡೆಯ ವೇದಿಕೆಯಲ್ಲಿದ್ದ ಯುವತಿ ಮತ್ತು CDಯಲ್ಲಿರುವ ಯುವತಿಯ ನಡುವೆ ಸಾಮ್ಯತೆ ಇದೆ ಎಂದು ಹೇಳಿ ಹೆಣ್ಣುಮಕ್ಕಳ ಮಾನ ಹರಾಜು ಹಾಕುವ ಪ್ರಯತ್ನ ನಡೆಯುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಕಚೇರಿಯಲ್ಲಿ ಕಸ ಗುಡಿಸುವವರು ನಮ್ಮ ವಿರುದ್ಧ ಸುಳ್ಳು ಬಿತ್ತರಿಸುತ್ತಿದ್ದಾರೆ. ಘಟನೆಗೂ ನಮಗೂ ಯಾವುದೇ ಸಂಬಂಧವಿಲ್ಲ. ನೀವು ಟ್ರೋಲ್ ಮಾಡುತ್ತಿರುವ ಹುಡುಗಿ ಕೇವಲ ಒಂದು ತಿಂಗಳು ಮಾತ್ರ ನಮ್ಮ ಸಂಘಟನೆಯಲ್ಲಿದ್ದಳು. ಮಾಧ್ಯಮಗಳು ನಮ್ಮ ಸಂಘಟನೆಯ ಮೇಲೆ ಗೂಬೆ ಕೂರಿಸುವ ಕೆಲಸ ಮಾಡ್ತಿದೆ. ಮಾಧ್ಯಮಗಳೇನು ಪೊಲೀಸ್ ಇಲಾಖೆಯಾ? ಇದೀಗ ಅ ಯುವತಿ ನಮ್ಮ ಸಂಘಟನೆಯಲ್ಲಿಲ್ಲ ಆದರೆ ಅ ಯುವತಿ ಯಾರೆಂದು ಹೇಳುವುದಕ್ಕೆ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.