ಗುಜರಾತ್ ಚುನಾವಣಾ ಪ್ರಚಾರದಿಂದ ತಡೆಯಲು ನನ್ನ ವಿರುದ್ಧ ಸಿಬಿಐ ದಾಳಿ: ಮನೀಷ್ ಸಿಸೋಡಿಯಾ ಆರೋಪ

Prasthutha|

ನವದೆಹಲಿ: ಮುಂಬರುವ ಗುಜರಾತ್ ಅಸೆಂಬ್ಲಿ ಚುನಾವಣೆಯಲ್ಲಿ ನಾನು ಪ್ರಚಾರದಲ್ಲಿ ಭಾಗವಹಿಸುವುದನ್ನು ತಡೆಯಲು ನನ್ನ ವಿರುದ್ಧ ಸಿಬಿಐ ದಾಳಿ ನಡೆಸಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯ ಆರೋಪಿಸಿದ್ದಾರೆ.

- Advertisement -

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, “ನನ್ನ ವಿರುದ್ಧ ಸಂಪೂರ್ಣ ನಕಲಿ ಪ್ರಕರಣವನ್ನು ಸಿದ್ಧಪಡಿಸಲಾಗಿದೆ. ನನ್ನ ನಿವಾಸದ ಮೇಲೆ ದಾಳಿ, ನನ್ನ ಬ್ಯಾಂಕ್ ಲಾಕರ್‌ಗಳ ಹುಡುಕಾಟ ಮತ್ತು ನನ್ನ ಗ್ರಾಮದಲ್ಲಿ ವಿಚಾರಣೆ ನಡೆಸಿದಾಗ ಏನೂ ಪತ್ತೆಯಾಗಿಲ್ಲ. ಇದೊಂದು ಸಂಪೂರ್ಣ ನಕಲಿ ಪ್ರಕರಣ’ ಎಂದು ತಿಳಿಸಿದರು.

ಸಿಸೋಡಿಯಾ ಅವರಿಗೆ ಬೆಂಬಲ ನೀಡುತ್ತಾ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಎಎಪಿ ಮುಖ್ಯಸ್ಥ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಗುಜರಾತ್’ನಲ್ಲಿ ಪ್ರಚಾರ ಮಾಡುವುದನ್ನು ತಡೆಯುವ ಪ್ರಯತ್ನದಲ್ಲಿ ಅವರನ್ನು ಬಂಧಿಸುವ ಸಾಧ್ಯತೆಯಿದೆ. ಅಲ್ಲದೆ ಸಿಸೋಡಿಯ ವಿರುದ್ಧದ ಪ್ರಕರಣ ನಕಲಿ ಎಂದು ತಿಳಿಸಿದ್ದಾರೆ.

- Advertisement -

ಮನೀಶ್ ಅವರ ನಿವಾಸ ಮತ್ತು ಅವರ ಬ್ಯಾಂಕ್ ಲಾಕರ್ ಮೇಲೆ ನಡೆದ ದಾಳಿಯಲ್ಲಿ ಏನೂ ಪತ್ತೆಯಾಗಿಲ್ಲ. ಅವರ ವಿರುದ್ಧದ ಪ್ರಕರಣ ಸಂಪೂರ್ಣ ನಕಲಿ. ಅವರು ಗುಜರಾತ್‌ಗೆ ಪ್ರಚಾರಕ್ಕೆ ಹೋಗಬೇಕಿತ್ತು. ಅದಕ್ಕಾಗಿಯೇ ಅವರನ್ನು ಬಂಧಿಸಲಾಗುತ್ತಿದ್ದು, ಆದರೆ ಪ್ರಚಾರ ನಿಲ್ಲಿಸುವುದಿಲ್ಲ. ಗುಜರಾತ್‌ನ ಪ್ರತಿಯೊಬ್ಬ ವ್ಯಕ್ತಿಯೂ ಗುಜರಾತ್‌ನಲ್ಲಿ ಎಎಪಿ ಪರ ಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು.

ಮಥುರಾ ರಸ್ತೆಯಲ್ಲಿರುವ ತನ್ನ ನಿವಾಸದಿಂದ ಸಿಸೋಡಿಯಾ ಅವರು ಸಿಬಿಐ ಕಚೇರಿಗೆ ತೆರಳಲು ಮುಂದಾದಾಗ ಅವರ ತಾಯಿಯ ಆಶೀರ್ವಾದವನ್ನು ಪಡೆದರು. ಈ ವೇಳೆ ಪಕ್ಷದ ಸಂಸದ ಸಂಜಯ್ ಸಿಂಗ್, ಶಾಸಕರಾದ ಅತಿಶಿ, ಸೌರಭ್ ಭಾರದ್ವಾಜ್ ಸೇರಿದಂತೆ ಹಲವು ಎಎಪಿ ನಾಯಕರು ಅವರ ಮನೆಯಲ್ಲಿ ಉಪಸ್ಥಿತರಿದ್ದರು.

ಕೇಜ್ರಿವಾಲ್ ಸರ್ಕಾರಲ್ಲಿ ಅಬಕಾರಿ ಖಾತೆಯನ್ನು ಹೊಂದಿರುವ ಸಿಸೋಡಿಯಾ ಸೇರಿದಂತೆ ಹಲವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು.

Join Whatsapp