ಹೈದರಾಬಾದ್ : ಮಹಾನಗರ ಪಾಲಿಗೆ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಬೆಂಗಳೂರು ಸಂಸದ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಉಸ್ಮಾನಿಯಾ ವಿವಿ ಆಡಳಿತ ಮಂಡಳಿ ನೀಡಿದ ದೂರಿನ ಆಧಾರದಲ್ಲಿ ಐಪಿಸಿ ಕಲಂ 447ರಡಿ ಕ್ರಿಮಿನಲ್ ಅತಿಕ್ರಮಣ ಪ್ರಕರಣ ದಾಖಲಾಗಿದೆ.
ಚುನಾವಣಾ ಪ್ರಚಾರಕ್ಕೆ ತೆರಳಿದ್ದ ತೇಜಸ್ವಿ ಸೂರ್ಯ ಎನ್ ಸಿಸಿ ಗೇಟ್ ಬಳಿ ತಡೆಬೇಲಿ ಮುರಿದು ತಮ್ಮ ಬೆಂಬಲಿಗರೊಂದಿಗೆ ವಿಶ್ವವಿದ್ಯಾಲಯ ಆವರಣಕ್ಕೆ ಅತಿಕ್ರಮಣ ಪ್ರವೇಶಗೈದಿದ್ದರು. ಅಲ್ಲಿ ಅವರು ಆರ್ಟ್ಸ್ ಕಾಲೇಜಿನಲ್ಲಿ ಭಾಷಣ ಮಾಡಿದರು.
ಉಸ್ಮಾನಿಯಾ ವಿವಿ ರಿಜಿಸ್ಟ್ರಾರ್ ಡಾ. ಚ. ಗೋಪಾಲ್ ರೆಡ್ಡಿ ಈ ಬಗ್ಗೆ ಮಾತನಾಡಿ, ಕಾರ್ಯಕ್ರಮ ನಡೆಸಲು ಯಾವುದೇ ಅನುಮತಿ ಇರಲಿಲ್ಲ. ಇಂತಹ ರಾಜಕೀಯ ಘಟನೆಗಳನ್ನು ವಿಶ್ವವಿದ್ಯಾಲಯದಲ್ಲಿ ಅನುಮತಿಸಲಾಗುವುದಿಲ್ಲ. ಉಪಕುಲಪತಿಗಳ ನಿರ್ದೇಶನದ ಮೇರೆಗೆ ನಾವು ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಹೇಳಿದ್ದಾರೆ.