ಮಂಗಳೂರು : ಸರಕಾರದ ಆದೇಶ ಉಲ್ಲಂಘಿಸಿ ಮಂಗಳೂರಿನ ಖ್ಯಾತ ‘ಎಕ್ಸ್ಪರ್ಟ್’ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳನ್ನು ಸೇರಿಸಿ ತರಗತಿ ನಡೆಸಿದ್ದಕ್ಕಾಗಿ ಸಂಸ್ಥೆಯ ಮುಖ್ಯಸ್ಥ ಹಾಗೂ ಆಡಳಿತ ಮಂಡಳಿಯ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಎಪ್ರಿಲ್ 19 ರಂದು ಬೆಳಿಗ್ಗೆ 11.30 ಗಂಟೆಗೆ ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ವಳಚ್ಚಿಲ್ ಎಕ್ಸ್ ಪರ್ಟ್ ಕಾಲೇಜು ವಿದ್ಯಾಸಂಸ್ಥೆಯವರು ದ್ವಿತೀಯ ಪಿ.ಯು.ಸಿ ಯ 30 ಜನ ವಿಧ್ಯಾರ್ಥಿಗಳನ್ನು ವಿಧ್ಯಾಸಂಸ್ಥೆಯಲ್ಲಿ ಉಳಿಸಿಕೊಂಡಿದ್ದರು. ಇವರ ಹೆತ್ತವರು ಹಾಗೂ ಪೋಷಕರು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವ ಸಲುವಾಗಿ ದೂರದ ಊರಿನಿಂದ ಬಂದಿದ್ದು, ಆದರೆ ಸಂಸ್ಥೆಯವರು ವಿದ್ಯಾರ್ಥಿಗಳನ್ನು ಪೋಷಕರೊಂದಿಗೆ ಕಳಿಸಿರಲಿಲ್ಲ. ರಾಜ್ಯಾಂದ್ಯಂತ ಲಾಕ್ ಡೌನ್ ಘೋಷಣೆ ಮಾಡಿದ್ದರೂ ಕೂಡಾ ತಮ್ಮ ಶೈಕ್ಷಣಿಕ ಚಟುವಟಿಕೆ ನಡೆಸಿ ಕೋವಿಡ್ ಸಾಂಕ್ರಾಮಿಕದ ನಡುವೆ ಸರಕಾರದ ಆದೇಶವನ್ನು ಉಲ್ಲಂಘನೆ ಮಾಡಿದ್ದರು ಎನ್ನಲಾಗಿದೆ.
ಸದ್ರಿ ವಿದ್ಯಾಸಂಸ್ಥೆಯವರಿಂದ ಸರ್ಕಾರದ ಆದೇಶ ಉಲ್ಲಂಘನೆಯಾಗಿರುವುದರಿಂದ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ನರೇಂದ್ರ ನಾಯಕ್ ಮತ್ತು ಆಡಳಿತ ಮಂಡಳಿಯ ವಿರುದ್ದ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಕಲಂ 5(1), 5(4) ಕರ್ನಾಟಕ ಸಾಂಕ್ರಾಮಿಕ ರೋಗ ತಡೆ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿರುವುದಾಗಿ ವರದಿಯಾಗಿದೆ