ಮೃತಪಟ್ಟ 8 ಗಂಟೆಯ ಬಳಿಕ ಕೋವಿಡ್ ಸೋಂಕಿತೆಗೆ ಬೆಡ್ ಹಂಚಿಕೆ ಮಾಡಿದ್ದೇವೆಂದು ಕರೆ ಮಾಡಿದ ಬಿಬಿಎಂಪಿ !

Prasthutha|

ರಾಜ್ಯದಲ್ಲಿ ಆರೋಗ್ಯ ವ್ಯವಸ್ಥೆಯ ಕ್ರೂರತೆ !

- Advertisement -

ಬೆಂಗಳೂರು: ಕೋವಿಡ್ ಸೋಂಕಿತೆಯೊಬ್ಬರು ಮೃತಪಟ್ಟು 8 ಗಂಟೆಗಳ ಬಳಿಕ ಬಿಬಿಎಂಪಿ ಅವರಿಗೆ ಬೆಡ್ ಹಂಚಿಕೆ ಮಾಡಿರುವ ಆಘಾತಕಾರಿ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಮೃತ ಮಹಿಳೆಯ ಅಂತ್ಯಸಂಸ್ಕಾರ ನೆರವೇರಿಸಿ ದುಃಖದಲ್ಲಿದ್ದ ಕುಟುಂಬದವರಿಗೆ ಬಿಬಿಎಂಪಿ ಸಿಬ್ಬಂದಿ ಕರೆ ಮಾಡಿ, ‘ತಕ್ಷಣ ಐದು ನಿಮಿಷದೊಳಗೆ ಬರಬೇಕು, ನಿಮಗೆ ಬೆಡ್ ಹಂಚಿಕೆಯಾಗಿದೆ’ ಎಂದು ತಿಳಿಸಿದ್ದಾರೆ. ಇದು ಕೇಳಿ ಕುಟುಂಬದವರು ಹೌಹಾರಿದ್ದಾರೆ. ಸಮಯಕ್ಕೆ ಸರಿಯಾಗಿ ಸೋಂಕಿತ ಮಹಿಳೆಗೆ ಬೆಡ್ ಮತ್ತು ಆಕ್ಸಿಜನ್ ಸಿಗದೆ ಅವರು 8 ಗಂಟೆಯ ಹಿಂದೆ ಮೃತಪಟ್ಟಿದ್ದರು.

ಕೊರೊನಾ ಸೋಂಕಿತರೆಲ್ಲರೂ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಆಸ್ಪತ್ರೆಗೆ ದಾಖಲಾಗಲೇಬೇಕಾದವರಿಗೆ ಜೀವ ಉಳಿಸಲು ಬೆಡ್ ಸಿಗುತ್ತಿಲ್ಲ ಎಂಬುದು ಕಠೋರ ವಾಸ್ತವ. ಬೆಂಗಳೂರಿನ ಕಮ್ಮನಹಳ್ಳಿ ನಿವಾಸಿ ರೆಜಿನಾ ಅವರು ಸೋಂಕಿನ ಲಕ್ಷಣಗಳು ಕಂಡುಬಂದ ನಂತರ ಮಂಗಳವಾರ ಕೋವಿಡ್ ಪರೀಕ್ಷೆ ನಡೆಸಿದಾಗ ಪಾಸಿಟಿವ್ ವರದಿ ಬಂದಿದೆ. ಅವರ ಕುಟುಂಬ ಸದಸ್ಯರು ಬೆಡ್ ಗಾಗಿ ಹಲವೆಡೆ ವಿಚಾರಿಸಿ ಹುಡುಕಾಡಿದ್ದಾರೆ. ಆದರೆ ಬೆಡ್ ಸಿಗಲೇ ಇಲ್ಲ. ಬುಧವಾರ, ರೆಜಿನಾ ಅವರ ಆಮ್ಲಜನಕದ ಮಟ್ಟವು ಇದ್ದಕ್ಕಿದ್ದಂತೆ ಇಳಿಯಲು ಪ್ರಾರಂಭಿಸಿದೆ.

- Advertisement -

ಆತಂಕಗೊಂಡ ಕುಟುಂಬ ಸದಸ್ಯರು 108 ಮತ್ತು 1912 ರ ಸಹಾಯವಾಣಿ ಸಂಖ್ಯೆಗಳಿಗೆ ನಿರಂತರವಾಗಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಮಾತ್ರವಲ್ಲ ನೆರವಿಗಾಗಿ ಕೋವಿಡ್ ಸ್ವಯಂಸೇವಕ ಹಮೀದ್ ಅಬೂಶಯೀರ್ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ತಕ್ಷಣ ಅವರು ಕೂಡ ಆಮ್ಲಜನಕ, ಐಸಿಯು ಹಾಸಿಗೆ ಅಥವಾ ಆಂಬ್ಯುಲೆನ್ಸ್ ಗಾಗಿ ಹುಡುಕಾಟ ನಡೆಸಿದರು. ಸಹಾಯವಾಣಿ ಸಂಖ್ಯೆಗಳು ರಿಂಗಣಿಸುತ್ತಲೇ ಇರುತ್ತವೆ ಅಥವಾ ಕಾರ್ಯನಿರತವಾಗಿದ್ದವು ಎಂದು 17 ವರ್ಷದ ಹಮೀದ್ ಹೇಳುತ್ತಾರೆ.

 “ರಾತ್ರಿ 10 ಗಂಟೆಯ ನಂತರ, ರೆಜಿನಾ ಅವರ ಮಗ ಅಂತಿಮವಾಗಿ ಸಾಕಷ್ಟು ಪ್ರಯತ್ನದ ನಂತರ 1912 ಸಹಾಯವಾಣಿಯನ್ನು ಸಂಪರ್ಕಿಸುತ್ತಾರೆ, ಆದರೆ ಕರೆ ಸ್ವೀಕರಿಸಿದವರಿಗೆ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಅವರು ಅದನ್ನು ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ. ಕನಿಷ್ಠ ಆಕ್ಸಿಜನ್ ಇರುವ ಆಂಬ್ಯುಲೆನ್ಸ್ ಆದರೂ ಕಳುಹಿಸಿಕೊಡುವಂತೆ ಮನವಿ ಮಾಡಿದೆವು. ಆ ವೇಳೆ, ಮಹಿಳೆಯ ಆಮ್ಲಜನಕ ಮಟ್ಟವು ಶೇ.35ಕ್ಕೆ ಇಳಿದಿತ್ತು. ಕೊನೆಗೂ ಆಮ್ಲಜನಕ ಸಿಲಿಂಡರ್ ಸಿಗಲೇ ಇಲ್ಲ ಎಂದು ಹಮೀದ್ ವಿಷಾದದಿಂದ ಹೇಳುತ್ತಾರೆ.

ಸುದೀರ್ಘ ಕಾಯುವಿಕೆ ಮತ್ತು ಆಕ್ಸಿಜನ್ ಗಾಗಿ ಅಲೆದಾಡುತ್ತಿದ್ದಾಗಲೇ ರೆಜಿನಾ ಗುರುವಾರ ಮುಂಜಾನೆ 4.26 ಕ್ಕೆ ತನ್ನ ಮನೆಯಲ್ಲಿ ಕೊನೆಯುಸಿರೆಳೆದರು. ಮರ್ಸಿ ಏಂಜಲ್ಸ್ ಸ್ವಯಂಸೇವಕರಾದ ಆನ್ ಮೋರಿಸ್ ಅವರ ಸಹಾಯದಿಂದ ಕುಟುಂಬವು ಬೆಳಿಗ್ಗೆ 10 ಗಂಟೆ ಸುಮಾರಿಗೆ ಕಲ್ಪಲ್ಲಿ ಸ್ಮಶಾನದಲ್ಲಿ ರೆಜಿನಾ ಅವರ ಅಂತ್ಯಸಂಸ್ಕರ ನೆರವೇರಿಸಿತು. ಕುಟುಂಬವು ದುಃಖ ಮತ್ತು ಆಘಾತದಲ್ಲಿ ಇರುವಾಗಲೇ ನಾಗವಾರ ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯವಿದೆ ಎಂದು 1912 ಸಹಾಯವಾಣಿಯಿಂದ ಕರೆ ಬಂದಿದೆ. ಐದು ನಿಮಿಷಗಳಲ್ಲಿ ಆಸ್ಪತ್ರೆಗೆ ತಲುಪದಿದ್ದರೆ, ಹಾಸಿಗೆಯನ್ನು ಬೇರೆಯವರಿಗೆ ನೀಡಲಾಗುವುದು ಎಂದು ಸಿಬ್ಬಂದಿ ಎಚ್ಚರಿಸುತ್ತಿದ್ದರು. ಇದನ್ನು ಕೇಳಿದ ಸಂತ್ರಸ್ತ ಕುಟುಂಬದ ಸದಸ್ಯರು ಹೌಹಾರಿದ್ದಾರೆ. ಇದೊಂದು ಕ್ರೂರ ತಮಾಷೆಯಾಗಿ ಕಂಡರೂ ನಮ್ಮ ಆರೋಗ್ಯ ವ್ಯವಸ್ಥೆಯ ಕ್ರೂರತೆಯನ್ನು ಅನಾವರಣ ಮಾಡಿದೆ.

Join Whatsapp