ಸಂತ್ರಸ್ತ ಕುಟುಂಬದ ವಿರುದ್ಧವೇ ಪ್ರಕರಣ: ಶನಿವಾರಸಂತೆ ಪೊಲೀಸ್ ಠಾಣೆಗೆ ಮಹಿಳೆಯರ ಮುತ್ತಿಗೆ

Prasthutha|

ಮಡಿಕೇರಿ : ಕಾರಿನಲ್ಲಿ ಸಂಚರಿಸುತ್ತಿದ್ದ ಕುಟುಂಬದ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕ್ರಮಕೈಗೊಳ್ಳಬೇಕು, ಅಮಾಯಕ ಯುವಕರಿಗೆ ಪೊಲೀಸರು ನೀಡುತ್ತಿರುವ ಕಿರುಕುಳ ನಿಲ್ಲಿಸಬೇಕು ಎಂದು ಒತ್ತಾಯಿಸಿ ಶುಕ್ರವಾರ ಶನಿವಾರಸಂತೆ ಪೊಲೀಸ್ ಠಾಣೆ ಮುಂಭಾಗ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಧರಣಿ ನಡೆಸಿದರು.

- Advertisement -


ಕಾರಿನಲ್ಲಿ ಹೋಗುತ್ತಿದ್ದಾಗ ತಮ್ಮ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದು ಐದು ದಿನಗಳಾದರೂ ಪೊಲೀಸರು ಹಲ್ಲೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಲ್ಲ ಹಾಗೂ ಕ್ರಮಕೈಗೊಂಡಿಲ್ಲ ಎಂದು ಹಲ್ಲೆಗೊಳದಾಗ ಜಾಕಿರ್ ಪಾಷ ಅವರ ಪತ್ನಿ ನಾಝಿಯಾ ತಬಸ್ಸುಮ್ ಅವರು ಮಹಿಳಾ ಸ್ವಸಹಾಯ ಸಂಘದ ಸದಸ್ಯರೊಂದಿಗೆ ಧರಣಿ ನಡೆಸಿದರು.


ಪೊಲೀಸರು ಅಮಾಯಕ ಯುವಕರನ್ನು ಠಾಣೆಗೆ ಕರೆಸಿ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕೂಡಲೇ ಹಿರಿಯ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

- Advertisement -


ಘಟನೆಯ ಹಿನ್ನೆಲೆ
ಇತ್ತೀಚೆಗೆ ಶನಿವಾರಸಂತೆ ನಿವಾಸಿ ಜಾಕಿರ್ ಪಾಷ ಅವರು ತನ್ನ ಪತ್ನಿ, ಮಕ್ಕಳೊಂದಿಗೆ ಕಾರಿನಲ್ಲಿ ಗುಡುಗಳಲೆ ಎಂಬಲ್ಲಿಗೆ ಹೋಗುತ್ತಿದ್ದಾಗ ಎರಡು ಬೈಕ್ ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು, ಕಾರಿಗೆ ಅಡ್ಡ ಬಂದು ಅಸಭ್ಯವಾಗಿ ವರ್ತಿಸಿದ್ದರು. ಕಾರು ನಿಲ್ಲಿಸಿದ ಜಾಕಿರ್, ಅವರನ್ನು ಪ್ರಶ್ನಿಸಿದಾಗ ನಾಲ್ವರು ಸೇರಿ ಪಾಷ ಅವರಿಗೆ ಹಲ್ಲೆ ನಡೆಸಿದ್ದರು.


ಈ ವೇಳೆ ಕಾರಿನಲ್ಲಿ ಕುಳಿತಿದ್ದ ಅವರ ಪತ್ನಿ ತಕ್ಷಣ ಜಾಕಿರ್ ಅವರ ಸಹೋದರರಿಗೆ ಕರೆ ಮಾಡಿ, ತಕ್ಷಣ ಸ್ಥಳಕ್ಕೆ ಬರುವಂತೆ ಹೇಳಿದ್ದಾರೆ. ಸ್ಥಳಕ್ಕೆ ಧಾವಿಸಿದ ಜಾಕಿರ್ ಅವರ ಸಹೋದರರು, ದುಷ್ಕರ್ಮಿಗಳ ಮೇಲೆ ಹಲ್ಲೆ ನಡೆಸಿದ್ದು, ಈ ವೇಳೆ ಇಬ್ಬರು ಪರಾರಿಯಾಗಿದ್ದಾರೆ. ಮತ್ತಿಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.


ಈ ವಿಷಯ ತಿಳಿದ ಸಂಘಪರಿವಾರದ ನಾಯಕರು ಪೊಲೀಸರ ಮೇಲೆ ಒತ್ತಡ ಹಾಕಿದ್ದಾರೆ. ಒತ್ತಡಕ್ಕೆ ಮಣಿದ ಪೊಲೀಸರು ದೂರು ನೀಡಲು ಬಂದ ಜಾಕಿರ್ ಪಾಷ, ಅಝರ್, ಮುಜಾಹಿದ್ ಮತ್ತು ರಶೀದ್ ಅವರ ಮೇಲೆ 307, 323,142,144,147,148 ಸೇರಿದಂತೆ ಐಪಿಸಿಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿ, ಬಂಧಿಸಿದ್ದರು. ಹಲ್ಲೆ ನಡೆಸಿದ ಸಂದೇಶ್, ನಂದನ್ ಸೇರಿದಂತೆ ಇತರರ ಮೇಲೆ ದೂರು ನೀಡಿದ್ದರೂ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸದೆ ನಿರ್ಲಕ್ಷ್ಯ ತೋರಿದ್ದರು ಎಂಬ ಆರೋಪ ಕೇಳಿಬಂದಿತ್ತು.



Join Whatsapp