ಆನೆಯ ಕಾಲಿನ ಪಾದ ಸೇರಿ 1 ಕೋಟಿ ರೂ ಮೌಲ್ಯದ ಪ್ರಾಚೀನ ವಸ್ತುಗಳ ಮಾರಾಟ: ವ್ಯಕ್ತಿಯ ಸೆರೆ

Prasthutha|

ಬೆಂಗಳೂರು ; ಅರಣ್ಯ ಇಲಾಖೆಯಿಂದ ನಿರಾಕ್ಷೇಪಣ ಪ್ರಮಾಣಪತ್ರ ಪಡೆಯದೆ ಅಕ್ರಮವಾಗಿ ಆನೆಯ ಕಾಲಿನ ಪಾದ ಸೇರಿ ಸುಮಾರು 1 ಕೋಟಿ ರೂ ಮೌಲ್ಯದ ಪ್ರಾಚೀನ ಕಾಲದ ವಸ್ತುಗಳನ್ನು ಮಾರಾಟಕ್ಕೆ ಯತ್ನಿಸಿದ ಆರೋಪಿಯನ್ನು ಕಾಡುಗೊಂಡನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

- Advertisement -


ಕೆಜಿಹಳ್ಳಿಯ ಎಚ್ ಬಿಆರ್ ಲೇಔಟ್ ನಿವಾಸಿ ಆರ್ಯನ್ ಖಾನ್ ಬಂಧಿತ ಆರೋಪಿ ಎಂದು ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ತಿಳಿಸಿದರು. ಬಂಧಿತನಿಂದ ಆನೆ ಕಾಲಿನ ಪಾದ, ತಾಮ್ರದ ಪ್ಲೇಟ್, ಒಂದು ಮಿಲ್ಕ್ ಜಗ್, ಒಂದು ಟೀ ಪಾಟ್, ಒಂದು ಮಗರ್ ಸ್ಟೇಯರ್, ಭೂತಾನ್ ಶೋ ಪೀಸ್, ಐರೀಷ್ ಟೀ ಮೇಕರ್, ಶುಗರ್ ಪಾಟ್, ಸ್ಮಾಲ್ ಮಿಲ್ಕ್ ಜಗ್, ಒಂದು ಜರ್ಮನ್ ಸಿಲ್ವರ್ ಸೌಟು, ಎರಡು ಜರ್ಮನ್ ಸಿಲ್ವರ್ ಆಶ್ ಟ್ರೇ, 5 ಚಿಕ್ಕ ಮಸ್ಟರ್ಡ್ ಟ್ರೇ, ಎರಡು ಚಿಕ್ಕ ಮಂಚಗಳು, ಎರಡು ಆಫ್ರಿಕನ್ ಆರ್ಟ್ವುಡ್ ಸ್ಪೂನ್, ಪ್ರಾಣಿಯ ಮೂಳೆಯಿಂದ ಮಾಡಿದ ಸ್ಪೂನ್, ಎರಡು ಜರ್ಮನ್ ಸಿಲ್ವರ್ ಫೋರ್ಕ್, ಟೇಬಲ್ ನೈಫ್ ಶಾರ್ಪ್ನರ್ ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.


ಆರೋಪಿಯು ಅನಾರೋಗ್ಯ ಪೀಡಿತ ಅಣ್ಣನ ಮಗನ ವೈದ್ಯಕೀಯ ಚಿಕಿತ್ಸೆ ಕೊಡಿಸುವ ಸಲುವಾಗಿ ಮತ್ತು ತನ್ನ ಮನೆಯ ಬಾಡಿಗೆ ಕಟ್ಟಲು ಮಾಡಿಕೊಂಡಿರುವ ಸಾಲ ತೀರಿಸಲು ಈ ವಸ್ತುಗಳ ಮಾರಾಟಕ್ಕೆ ಪ್ರಯತ್ನಿಸುತ್ತಿರುವುದಾಗಿ ಪೊಲೀಸರ ಮುಂದೆ ತಿಳಿಸಿದ್ದಾನೆ.ವಶಪಡಿಸಿಕೊಂಡಿರುವ ವಸ್ತುಗಳಿಗೆ ಪಾಶ್ಚಿಮಾತ್ಯ ದೇಶಗಳಲ್ಲಿ ಅಪಾರ ಬೇಡಿಕೆ ಇದೆ ಎಂದು ತಿಳಿದು ಬಂದಿದೆ. ಕಾಡುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

- Advertisement -


ಆರೋಪಿ ಆರ್ಯನ್ ಖಾನ್ ತಾತ ಕೆಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿದ್ದ ಆಂಗ್ಲೋ-ಇಂಡಿಯನ್ ಮಹಿಳೆ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಇಂಗ್ಲೆಂಡ್ ಗೆ ಹೋಗುವಾಗ ಮನೆಯಲ್ಲಿದ್ದ ಪ್ರಾಚೀನ ವಸ್ತುಗಳನ್ನು ಉಡುಗೊರೆಯಾಗಿ ಆ ಮಹಿಳೆ ನೀಡಿದ್ದರು. ಕಾನೂನು ಪ್ರಕಾರ ವನ್ಯಜೀವಿಗೆ ಸಂಬಂಧಿಸಿ ವಸ್ತುಗಳನ್ನು ಇಟ್ಟುಕೊಳ್ಳಬೇಕಾದರೆ ಅರಣ್ಯ ಇಲಾಖೆಯಿಂದ ಪ್ರಮಾಣಪತ್ರ ಪಡೆಯಬೇಕಾಗುತ್ತದೆ. ಜೊತೆಗೆ ಇನ್ನೊಬ್ಬರಿಗೆ ಮಾರಾಟ ಮಾಡಬೇಕಾದರೂ ದಾಖಲಾತಿ ಮಾಡಿಸಿಕೊಳ್ಳಬೇಕಿದೆ.ಆದರೆ, ಆರೋಪಿಯು ಯಾವುದೇ ರೀತಿಯ ನಿಯಮಗಳನ್ನ ಪಾಲಿಸದೆ ಅಕ್ರಮವಾಗಿ ಕೋಟ್ಯಂತರ ಹಣಕ್ಕೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಎಂದು ಶರಣಪ್ಪ ತಿಳಿಸಿದ್ದಾರೆ

Join Whatsapp