ರಾಜಕೀಯ ಪಕ್ಷಗಳು ಮತದಾರರಿಗೆ ಭರವಸೆ ನೀಡುವುದನ್ನು ತಡೆಯಲು ಸಾಧ್ಯವಿಲ್ಲ: ಸುಪ್ರಿಂಕೋರ್ಟ್

Prasthutha|

ಕುಡಿಯುವ ನೀರು, ಆರೋಗ್ಯ ಸೇವೆಗಳು ಉಚಿತ ಕೊಡುಗೆಯೇ? ಎಂದು ಕೇಳಿದ ಪೀಠ

- Advertisement -

ನವದೆಹಲಿ: ಆಡಳಿತಾರೂಢ ರಾಜಕೀಯ ಪಕ್ಷಗಳು ಸಾರ್ವಜನಿಕ ಆರೋಗ್ಯ ಸೇವೆ, ಕುಡಿಯುವ ನೀರು ಮತ್ತು ವಿದ್ಯುತ್ ಒದಗಿಸುವುದನ್ನು ಉಚಿತ ಕೊಡುಗೆ ಎಂದು ಪರಿಗಣಿಸಬಹುದೇ ಅಥವಾ ಅಂತಹ ನಿಬಂಧನೆಗಳು ವಾಸ್ತವವಾಗಿ ನಾಗರಿಕರ ಹಕ್ಕುಗಳೇ ಎಂದು ಸುಪ್ರೀಂ ಕೋರ್ಟ್ ಬುಧವಾರ ಕೇಳಿದೆ.

ಚುನಾವಣಾ ಪ್ರಣಾಳಿಕೆಗಳಲ್ಲಿ ರಾಜಕೀಯ ಪಕ್ಷಗಳು ನೀಡುವ ಉಚಿತ ಕೊಡುಗೆಗಳನ್ನು ನಿಷೇಧಿಸಬೇಕೆಂದು ಕೋರಿರುವ ಮನವಿಗೆ ಸಂಬಂಧಿಸಿದಂತೆ ತೀರ್ಪು ನೀಡುವಾಗ ನ್ಯಾಯಾಲಯವು ‘ಉಚಿತ’ ಎಂದರೆ ಏನೆಂಬುದನ್ನು ನಿಖರವಾಗಿ ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್ ವಿ ರಮಣ ನೇತೃತ್ವದ ಪೀಠ ಹೇಳಿತು.

- Advertisement -

“ರಾಜ್ಯ ರಾಜಕೀಯ ಪಕ್ಷಗಳು ಮತದಾರರಿಗೆ ಭರವಸೆ ನೀಡುವುದನ್ನು ತಡೆಯಲು ಸಾಧ್ಯವಿಲ್ಲ ಎಂಬುದು ಒಂದು ಸಲಹೆಯಾಗಿದೆ. ಈಗ ಉಚಿತ ಕೊಡುಗೆ ಎಂದರೇನು ಎಂಬುದನ್ನು ವ್ಯಾಖ್ಯಾನಿಸಬೇಕಾಗಿದೆ. ಸಾರ್ವತ್ರಿಕ ಆರೋಗ್ಯ ರಕ್ಷಣೆ, ಕುಡಿಯುವ ನೀರಿನ ಪೂರೈಕೆ, ವಿದ್ಯುತ್ ಒದಗಿಸುವುದನ್ನು ಉಚಿತ ಕೊಡುಗೆ ಎಂದು ಪರಿಗಣಿಸಬಹುದೇ?” ಎಂದು ಸಿಜೆಐ ಪ್ರಶ್ನಿಸಿದರು.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಂತಹ ಪ್ರಯೋಜನಕಾರಿ ಕಾನೂನುಗಳನ್ನೂ ಅವರು ಎತ್ತಿ ತೋರಿಸಿದರು.

“ಜೀವನಕ್ಕೆ ಘನತೆ ನೀಡುವ ಎಂ.ನರೇಗಾ ರೀತಿಯ ಯೋಜನೆಗಳಿವೆ. ಕೇವಲ ಭರವಸೆಗಳಿಂದ ಮಾತ್ರ ರಾಜಕೀಯ ಪಕ್ಷಗಳ ಗೆಲುವಿಗೆ ಆಧಾರವಲ್ಲ ಎಂದು ನಾನು ಭಾವಿಸುತ್ತೇನೆ. ಕೆಲವರು ಭರವಸೆ ನೀಡುತ್ತಾರೆ ಆದರೆ ನಂತರವೂ ಆಯ್ಕೆಯಾಗುವುದಿಲ್ಲ. ನೀವೆಲ್ಲರೂ ನಿಮ್ಮ ಅಭಿಪ್ರಾಯ ನೀಡಿದ ನಂತರ ಚರ್ಚಿಸಿ ನಾವು ತೀರ್ಮಾನಕ್ಕೆ ಬರಬಹುದು ಎಂದು ಸಿಜೆಐ ಹೇಳಿದರು.

ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಯನ್ನು ನಿಯಂತ್ರಿಸಲು ಕ್ರಮಕೈಗೊಳ್ಳುವಂತೆ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಬಿಜೆಪಿ ನಾಯಕ ಅಶ್ವಿನಿ ಕುಮಾರ್ ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಉಚಿತ ಕೊಡುಗೆಗಳ ಬಗ್ಗೆ ಪಕ್ಷಕಾರರ ವಾದಗಳನ್ನು ಸುದೀರ್ಘವಾಗಿ ಆಲಿಸಬೇಕಾಗುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿತು. ಆಗಸ್ಟ್ 22, ಸೋಮವಾರದಂದು ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.

ಇಲ್ಲಿಯವರೆಗೆ, ವಿವಿಧ ರಾಜಕೀಯ ಪಕ್ಷಗಳು ಮತ್ತು ಮುಖಂಡರು ಮನವಿಯನ್ನು ವಿರೋಧಿಸಿದ್ದಾರೆ. ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಅವರ ಮನವಿ ʼರಾಜಕೀಯ ಹಿತಾಸಕ್ತಿ ದಾವೆʼ ಎಂದು ಆಮ್ ಆದ್ಮಿ ಪಕ್ಷ ಹೇಳಿತ್ತು. ದುರ್ಬಲ ವರ್ಗಕ್ಕೆ ಸಹಾಯಧನ ನೀಡುವುದು ಆಡಳಿತ ಪಕ್ಷಗಳ ಕರ್ತವ್ಯ, ಅದು ಉಚಿತ ಕೊಡುಗೆಯಲ್ಲ ಕಾಂಗ್ರೆಸ್ ನಾಯಕಿ ಜಯಾ ಠಾಕೂರ್ ಸುಪ್ರೀಂ ಕೋರ್ಟ್ಗೆ ತಿಳಿಸಿದ್ದರು. ಡಿಎಂಕೆ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಪಿ ವಿಲ್ಸನ್, ಪಕ್ಷ ಮನವಿಯನ್ನು ವಿರೋಧಿಸುತ್ತಿದೆ. ಅರ್ಜಿದಾರರು ಭಾರತವನ್ನು ಸಮಾಜವಾದಿ ದೇಶದಿಂದ ಬಂಡವಾಳಶಾಹಿ ದೇಶವಾಗಿ ಪರಿವರ್ತಿಸಲು ಯತ್ನಿಸುತ್ತಿದ್ದಾರೆ ಎಂದಿದ್ದರು.

ಆದರೆ ಕೇಂದ್ರ ಸರ್ಕಾರ ಅರ್ಜಿದಾರರ ಬೆಂಬಲಕ್ಕೆ ನಿಂತಿತ್ತು. ಉಚಿತ ಕೊಡುಗೆಗಳನ್ನು ನಿಯಂತ್ರಿಸುವ ಅಗತ್ಯವಿದೆ. ಶಾಸಕಾಂಗ ಈ ನಿಟ್ಟಿನಲ್ಲಿ ಕಾನೂನು ರೂಪಿಸುವವರೆಗೆ ಸುಪ್ರೀಂ ಕೋರ್ಟ್ ಏನನ್ನಾದರೂ ಮಾಡಬೇಕು ಎಂದು ಹೇಳಿತ್ತು. ರಾಜಕೀಯ ಪಕ್ಷಗಳ ಉಚಿತ ಕೊಡುಗೆಗಳು ಮತ್ತು ಜನಪ್ರಿಯ ಭರವಸೆಗಳು ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದ್ದು ಆಗಾಗ್ಗೆ ಆರ್ಥಿಕ ವಿಪತ್ತುಗಳಿಗೆ ಕಾರಣವಾಗುತ್ತವೆ ಎಂದು ಅದು ವಾದಿಸಿತ್ತು.


(ಕೃಪೆ: ಬಾರ್ & ಬೆಂಚ್)

Join Whatsapp