ಹೊಸದಿಲ್ಲಿ: ಕೋವಾಕ್ಸಿನ್ ನ ಎರಡು ಡೋಸ್ ಪಡೆದಿರುವ ಜನರಿಗೆ ಮತ್ತೆ ‘ಕೋವಿಶೀಲ್ಡ್’ ನೀಡುವಂತೆ ಒಕ್ಕೂಟ ಸರ್ಕಾರಕ್ಕೆ ನಿರ್ದೇಶಿಸಿದ ಸುಪ್ರೀಂ ಕೋರ್ಟ್ ಜನರ ಜೀವದ ಜೊತೆ ಚೆಲ್ಲಾಟವಾಡಲು ಸಾಧ್ಯವಿಲ್ಲ ಎಂದು ಶುಕ್ರವಾರ ಹೇಳಿದೆ.
ಕೋವಾಕ್ಸಿನ್ ಗೆ ಮಾನ್ಯತೆ ನೀಡದ ಕಾರಣಕ್ಕಾಗಿ ವಿದೇಶ ಪ್ರವಾಸಕ್ಕೆ ಅನುಮತಿ ಪಡೆಯಲು ಜನರು ತೊಂದರೆ ಎದುರಿಸುತ್ತಿದ್ದಾರೆ ಎಂದು ಆರೋಪಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಬಿವಿ ನಾಗರತ್ನ ಅವರನ್ನೊಳಗೊಂಡ ದ್ವಿಸದಸ್ಯ ಪೀಠ, “ಮತ್ತೆ ಲಸಿಕೆ ನೀಡುವಂತೆ ಒಕ್ಕೂಟ ಸರ್ಕಾರಕ್ಕೆ ನಿರ್ದೇಶನ ನೀಡುವ ಮೂಲಕ ನಾವು ಜನರ ಜೀವದ ಜೊತೆ ಚೆಲ್ಲಾಟವಾಡಲು ಸಾಧ್ಯವಿಲ್ಲ. ನಮ್ಮೊಂದಿಗೆ ಯಾವುದೇ ಡೇಟಾ ಇಲ್ಲ. ಭಾರತ್ ಬಯೋಟೆಕ್ ವಿಶ್ವ ಆರೋಗ್ಯ ಸಂಸ್ಥೆಗೆ ಮಾನ್ಯತೆಗಾಗಿ ಅರ್ಜಿ ಸಲ್ಲಿಸಿರುವುದನ್ನು ನಾವು ಪತ್ರಿಕೆಗಳಲ್ಲಿ ಓದಿದ್ದೇವೆ. ವಿಶ್ವ ಆರೋಗ್ಯ ಸಂಸ್ಥೆ (WHO) ನ ಪ್ರತಿಕ್ರಿಯೆಗಾಗಿ ನಾವು ಕಾಯೋಣ. ದೀಪಾವಳಿ ರಜೆಯ ನಂತರ ನಾವು ಈ ವಿಷಯವನ್ನು ಕೈಗೆತ್ತಿಕೊಳ್ಳುತ್ತೇವೆ” ಎಂದು ಹೇಳಿದೆ.
ಖುದ್ದು ಹಾಜರಾದ ವಕೀಲ ಕಾರ್ತಿಕ್ ಸೇಠ್, ಕೋವಾಕ್ಸಿನ್ ಅನ್ನು WHO ಮಾನ್ಯತೆ ನೀಡದ ಕಾರಣ ಪ್ರತಿದಿನ ವಿದೇಶಕ್ಕೆ ಹೋಗಲು ಇಚ್ಛಿಸುವ ಹಲವಾರು ಜನರಿಗೆ ಇತರ ದೇಶಗಳಿಗೆ ಪ್ರವೇಶವನ್ನು ನಿರಾಕರಿಸಲಾಗುತ್ತಿದೆ ಎಂದು ವಾದಿಸಿದರು. ಪ್ರಸ್ತುತ ವ್ಯವಸ್ಥೆಯಡಿಯಲ್ಲಿ, ಈಗಾಗಲೇ ಕೋವಾಕ್ಸಿನ್ ಲಸಿಕೆಯನ್ನು ಪಡೆದಿರುವ ವ್ಯಕ್ತಿಯು ಕೋವಿಶೀಲ್ಡ್ ಲಸಿಕೆ ಪಡೆಯಲು ಕೋವಿನ್ ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳಲು ಸಾಧ್ಯವಿಲ್ಲ, ಈ ನಿಟ್ಟಿನಲ್ಲಿ ಒಕ್ಕೂಟ ಸರ್ಕಾರಕ್ಕೆ ನಿರ್ದೇಶನವನ್ನು ನೀಡಬಹುದು ಎಂದು ಅವರು ಸೂಚಿಸಿದ್ದಾರೆ.
“ಯಾವುದೇ ಡೇಟಾ ಇಲ್ಲದೆ ಮತ್ತೊಂದು ಲಸಿಕೆಯನ್ನು ನೀಡುವಂತೆ ನಾವು ನಿರ್ದೇಶನ ಮಾಡಲು ಸಾಧ್ಯವಿಲ್ಲ. ನಿಮ್ಮ ಕಾಳಜಿಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ ಆದರೆ WHO ಯ ಪ್ರತಿಕ್ರಿಯೆಗಾಗಿ ಕಾಯೋಣ” ಎಂದು ಸುಪ್ರೀಂಕೋರ್ಟ್ ಪೀಠ ಹೇಳಿದೆ.
ವಕೀಲ ಕಾರ್ತಿಕ್ ಸೇಠ್ ಅವರು ತಮ್ಮ PIL ಸಂಪೂರ್ಣವಾಗಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಾಗಿದೆ ಎಂದು ಉಲ್ಲೇಖಿಸಿದ್ದು, ಯಾಕೆಂದರೆ ವಿದೇಶದಲ್ಲಿ ಅಧ್ಯಯನ ಮಾಡಲು ಸಜ್ಜಾಗಿರುವ ಹಲವಾರು ವಿದ್ಯಾರ್ಥಿಗಳು ಹಲವು ದೇಶಗಳಿಗೆ ಪ್ರವೇಶಕ್ಕೆ ಅನುಮತಿ ಸಿಗುತ್ತಿಲ್ಲ ಎಂದು ಹೇಳಿದ್ದಾರೆ.
ಕೋವಾಕ್ಸಿನ್ ಲಸಿಕೆಯನ್ನು ಬಿಡುಗಡೆ ಮಾಡುವಾಗ WHO ಅದನ್ನು ಅನುಮೋದಿಸಿಲ್ಲ ಎಂದು ಸರ್ಕಾರವು ಜನರಿಗೆ ತಿಳಿಸಲಿಲ್ಲ ಎಂದು ಕಾರ್ತಿಕ್ ಸೇಠ್ ಅವರ ಅರ್ಜಿಯಲ್ಲಿ ಹೇಳಲಾಗಿದೆ.
ಲಸಿಕೆ ತಯಾರಕರಾದ ಭಾರತ್ ಬಯೋಟೆಕ್ ಅನುಮೋದನೆಗಾಗಿ ಅರ್ಜಿಯನ್ನು 2021 ಏಪ್ರಿಲ್ ನಲ್ಲಿ ಸಲ್ಲಿಸಿದೆ. ಡಬ್ಲ್ಯುಎಚ್ಒ ಪಟ್ಟಿ ಮಾಡಿದ ಲಸಿಕೆಗಳನ್ನು ಹೊರತುಪಡಿಸಿ ಇತರ ಲಸಿಕೆಗಳನ್ನು ಪಡೆದ ಜನರಿಗೆ ಅನೇಕ ದೇಶಗಳು ಪ್ರವೇಶಕ್ಕೆ ಅನುಮತಿ ನೀಡುವುದಿಲ್ಲ ಎಂದು ಮೇ ತಿಂಗಳಲ್ಲಿ ಜನರು ತಿಳಿದು ಬಂದಿದ್ದಾರೆ ಎಂದು ಅರ್ಜಿಯಲ್ಲಿ ಹೇಳಿದ್ದಾರೆ.
ಕೋವಾಕ್ಸಿನ್ ಕುರಿತು ಅಧಿಕೃತ ಮಾಹಿತಿಯ ಬಿಡುಗಡೆ ಮತ್ತು ಅನುಮೋದನೆ ವಿಳಂಬದ ಕಾರಣಗಳನ್ನು ಬಹಿರಂಗಪಡಿಸುವಂತೆ ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.