ತುಮಕೂರು: ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳಿಗೆ ಅನ್ವಯಗೊಂಡ ಬಿಎಡ್ ಮೂರನೇ ಸೆಮಿಸ್ಟರ್ ಮೌಲ್ಯಾಧಾರಿತ ಶಿಕ್ಷಣದ ಹೆಸರಿನಲ್ಲಿರುವ ಪಠ್ಯಪುಸ್ತಕದಲ್ಲಿ ಇಸ್ಲಾಂ ಧರ್ಮ, ಮುಸ್ಲಿಮರು ಮತ್ತು ಪ್ರವಾದಿ ಮುಹಮ್ಮದ್ (ಸ) ರವರ ಕುರಿತು ಪೂರ್ವಗ್ರಹಪೀಡಿತ, ಅವಹೇಳನಕಾರಿ ಅಂಶಗಳನ್ನು ಖಂಡಿಸಿ ಹಾಗು ಪ್ರೊಫೆಸರ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ಮಂಗಳವಾರ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷ ಅಥಾವುಲ್ಲಾ ಪುಂಜಾಲಕಟ್ಟೆ, ರಾಜ್ಯದಲ್ಲಿ ದಿನೇ ದಿನೇ ದ್ವೇಷ ಭಾಷಣ, ಹಲ್ಲೆ, ಮುಸ್ಲಿಮರನ್ನು ಗುರಿಪಡಿಸಿ ಅವಹೇಳನ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಪುಸ್ತಕದಲ್ಲಿ ಮುಸ್ಲಿಮರನ್ನು ಅವಹೇಳನ ಮಾಡಿರುವುದು ಕೂಡ ಇದರ ಮುಂದುವರಿದ ಭಾಗವಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿಯೇ ಇಲ್ಲಿ ಹಲ್ಲೆ ನಡೆಸಲು ಸುಪಾರಿ ನೀಡುತ್ತಿದ್ದೂ ರಾಜ್ಯವನ್ನು ಅರಾಜಕತೆ, ಕೋಮುದಳ್ಳುರಿಯತ್ತ ಕೊಂಡೊಯ್ಯುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಪ್ರವಾದಿ ಅವಹೇಳನವು ಗಂಭೀರ ವಿಷಯವಾಗಿದ್ದು ಶೀಘ್ರ ಆರೋಪಿಯ ವಿರುದ್ಧ ಕಾನೂನು ಕ್ರಮ ಜರುಗಿಸಿ ಶಾಂತಿಯನ್ನು ಕಾಪಾಡಬೇಕಾಗಿದೆ. ಇಲ್ಲದಿದ್ದಲ್ಲಿ ಕ್ಯಾಂಪಸ್ ಫ್ರಂಟ್ ಈ ವಿಚಾರದಲ್ಲಿ ಇನ್ನಷ್ಟು ತೀವ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
ರಾಜ್ಯ ಉಪಾಧ್ಯಕ್ಷ ಅಡ್ವೋಕೇಟ್ ರೋಷನ್ ನವಾಜ್ ಮಾತನಾಡಿ, ಎಲ್ಲಾ ಜಾತ್ಯತೀತ ಮನಸ್ಸುಗಳು ಹಾಗು ಸಮುದಾಯವು ಈ ವಿಚಾರದಲ್ಲಿ ಒಂದಾಗಿ ಹೋರಾಟ ನಡೆಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಅಝರ್, ಅರ್ಮಾನ್ ಹಾಗು ಮತ್ತಿತರು ಉಪಸ್ಥಿತರಿದ್ದರು.
ಉಪಕುಲಪತಿಯಿಂದ ಮನವಿ ಸ್ವೀಕಾರ
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತುಮಕೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳು ಹಾಗೂ ರಿಜಿಸ್ಟ್ರಾರ್ ಮನವಿಯನ್ನು ಸ್ವೀಕರಿಸಿ , ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.