ನವದೆಹಲಿ: ಕೋವಿಡ್ ಮುಂಜಾಗೃತಾ ಲಸಿಕೆ ವಿತರಣೆಯಾದ ಬಳಿಕ ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ-ಸಿಎಎಯನ್ನು ಜಾರಿಗೆ ತರಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಕಾರ್ಯನಿರ್ವಹಣೆ ಮತ್ತು ಸಾಂಸ್ಥಿಕ ವಿಷಯಗಳಿಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲು ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರನ್ನು ಮಂಗಳವಾರ ಸಂಸತ್ ಭವನದಲ್ಲಿ ಭೇಟಿಯಾದಾಗ ಅಮಿತ್ ಶಾ ಈ ಭರವಸೆಯನ್ನು ನೀಡಿದ್ದಾರೆ.
ಶಾ ಅವರೊಂದಿಗೆ ನಡೆದ ಸಭೆಯ ನಂತರ ಮಾತನಾಡಿದ ಸುವೇಂದು ಅಧಿಕಾರಿ, ದೀರ್ಘಕಾಲದಿಂದ ಅನುಷ್ಠಾನಕ್ಕೆ ಬಾಕಿ ಇರುವ ಸಿಎಎ ಕಾಯ್ದೆಯನ್ನು ಕೋವಿಡ್ ಲಸಿಕೆಯ ಮೂರನೇ ಡೋಸ್ ಪೂರ್ಣಗೊಂಡ ನಂತರ ಸರ್ಕಾರ ಜಾರಿಗೆ ತರಲಿದೆ ಎಂದು ಗೃಹ ಸಚಿವರು ತಮಗೆ ತಿಳಿಸಿದ್ದಾರೆ ಎಂದು ಹೇಳಿದರು.