ಮಾನವೀಯ ಕಾರ್ಯದ ಮೂಲಕ ಮತ್ತೊಮ್ಮೆ ಮಾದರಿಯಾದ ಎಂ.ಎ. ಯೂಸುಫ್ ಅಲಿ

Prasthutha|

ಕೊಚ್ಚಿ: ಉದ್ಯಮದ ಜೊತೆ ಮಾನವೀಯ ಕಾರ್ಯಗಳಿಗೆ ಹೆಸರುವಾಸಿಯಾಗಿರುವ ಲುಲು ಇಂಟರ್’ನ್ಯಾಷನಲ್ ಸಂಸ್ಥಾಪಕ, ಖ್ಯಾತ ಉದ್ಯಮಿ ಎಂ.ಎ. ಯೂಸುಫ್ ಅಲಿ ಅವರ ಸರಳತೆಯ ಕಾರ್ಯ ಇದೀಗ ಮತ್ತೊಮ್ಮೆ ಭಾರಿ ಜನಮೆಚ್ಚುಗೆಗೆ ಪಾತ್ರವಾಗಿದೆ.

- Advertisement -

ಕಳೆದ ಎಪ್ರಿಲ್ 11ರಂದು ಯೂಸುಫ್ ಅಲಿ ಹಾಗೂ ಕುಟುಂಬ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌’ನಲ್ಲಿ ತಾಂತ್ರಿಕ ದೋಷ ಕಂಡು ಬಂದ ಕಾರಣ ಕೊಚ್ಚಿಯ ಪನಂಘಾಡ್ ಎಂಬಲ್ಲಿ ತುರ್ತು ಭೂ ಸ್ಪರ್ಷ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಭಾರಿ ಮಳೆಯ ನಡುವೆಯೂ ತನ್ನ ಕುಟುಂಬವನ್ನು ರಕ್ಷಿಸಿದ್ದ ರಾಜೇಶ್ ಹಾಗೂ ಬಿಜಿ ದಂಪತಿ ಮನೆಗೆ ಭಾನುವಾರ, ಸ್ವತಃ ತೆರಳಿ ಭೇಟಿ ಮಾಡಿದ ಯೂಸುಫ್ ಅಲಿ, ರಾಜೇಶ್ ಹಾಗೂ ಬಿಜಿ ದಂಪತಿಗೆ ಧನ್ಯವಾದ ಸಮರ್ಪಿಸಿದರು. ಜೊತೆಗೆ ನಗದು ಹಾಗೂ ಇನ್ನಿತರ ಉಡುಗೊರೆಗಳನ್ನು ನೀಡಿ ಗೌರವಿಸಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಯೂಸುಫ್ ಅಲಿ, ಹೆಲಿಕಾಪ್ಟರ್ ಅವಘಡ ನಡೆದ ವೇಳೆ ರಾಜೇಶ್ ಮೊದಲಿಗರಾಗಿ ನಮ್ಮ ಸಹಾಯಕ್ಕೆ ಬಂದಿದ್ದರು. ಅವರ ಪತ್ನಿ ಬಿಜಿ, ಸಮೀಪದ ಪೊಲೀಸ್ ಠಾಣೆಗೆ ಓಡಿಹೋಗಿ ಮಾಹಿತಿ ನೀಡಿ ನಮ್ಮನ್ನು ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಲು ನೆರವಾಗಿದ್ದರು. ಇದನ್ನು ಮರೆಯಲು ಸಾಧ್ಯವಿಲ್ಲ. ಹೀಗಾಗಿ ಅವರಿಗೆ ಧನ್ಯವಾದ ಸಮರ್ಪಿಸಲು ಇಲ್ಲಿಗೆ ಬಂದಿದ್ದೇನೆ ಎಂದರು.

- Advertisement -

ಬಡ ಮಹಿಳೆಯೆ ಕಣ್ಣೀರಿಗೆ ಸ್ಥಳದಲ್ಲೇ ಪರಿಹಾರ..!

ಮಾಧ್ಯಮಗಳ ಜೊತೆ ಮಾತನಾಡಿದ ಬಳಿಕ ಕಾರು ಹತ್ತುವ ವೇಳೆ ಬಡ ಮಹಿಳೆಯೊಬ್ಬರು, ತನ್ನ ಮನೆಯನ್ನು ಬ್ಯಾಂಕ್’ನವರು ಜಪ್ತಿ ಮಾಡುವುದಾಗಿ ನೋಟಿಸ್ ನೀಡಿದ್ದಾರೆ. ಆದರೆ ತನಗೆ ಸಹಾಯ ಮಾಡಲು ಬೇರೆ ಯಾರು ಇಲ್ಲ ಎಂದು ಕಣ್ಣೀರಿಟ್ಟರು. ಮಹಿಳೆಗೆ ಸಾಂತ್ವನ ಹೇಳಿದ ಯೂಸುಫ್ ಅಲಿ, ಬ್ಯಾಂಕ್’ಗೆ ಕಟ್ಟಬೇಕಾದ ಸಾಲ ಎಷ್ಟು ಬಾಕಿ ಇದೆ ಎಂದು ಕೇಳಿದಾಗ ಮಹಿಳೆ 5 ಲಕ್ಷ ಬಾಕಿ ಇದೆ ಎಂದು ಹೇಳಿದರು. ಕೂಡಲೇ ತನ್ನ ಸಹಾಯಕ ಸಿಬ್ಬಂದಿಯನ್ನ ಕರೆದ ಯೂಸುಫ್ ಅಲಿ, ಈ ಮಹಿಳೆಯ ಮನೆ ಯಾವುದೇ ಕಾರಣಕ್ಕೂ ಜಪ್ತಿ ಆಗಕೂಡದು, ಇವರ ಸಾಲ ಎಷ್ಟು ಬಾಕಿ ಇದೆ ಎಂಬುದನ್ನು ಪರಿಶೀಲಿಸಿ ಆ ಮೊತ್ತವನ್ನು ಪಾವತಿಸಿ ಕಾಗದ ಪತ್ರಗಳನ್ನು ಆ ಬಡ ಮಹಿಳೆಗೆ ಹಸ್ತಾಂತರಿಸುವಂತೆ ಸ್ಥಳದಲ್ಲೇ ಸೂಚನೆ ನೀಡಿದರು. ಕೊನೆಗೆ ಕಾರು ಹತ್ತುವ ವೇಳೆ ಮಹಿಳೆಗೆ ಧೈರ್ಯ ತುಂಬಿದ ಯೂಸುಫ್ ಅಲಿ, ಹೆದರಬೇಡಿ, ನಿಮ್ಮ ಮನೆಯನ್ನು ಯಾರು ಜಪ್ತಿ ಮಾಡುವುದಿಲ್ಲ ಎಂದು ಹೇಳಿ ಮುಗುಳ್ನಗೆ ಬೀರಿದರು.

ಪದ್ಮಶ್ರೀ ಪುರಸ್ಕೃತರೂ ಆಗಿರುವ ಕೇರಳ ಮೂಲದ ಯೂಸುಫ್‌ ಅಲಿ, ಯುಎಇಯಲ್ಲಿ ಉದ್ಯಮಿಯಾಗಿದ್ದು, ಲುಲು ಗ್ರೂಪ್‌ ಇಂಟರ್‌ನ್ಯಾಷನಲ್‌ ಇದರ ಸಂಸ್ಥಾಪಕರಾಗಿದ್ದಾರೆ. ಕೊಚ್ಚಿ, ಬೆಂಗಳೂರು ಹಾಗೂ ಅರಬ್‌, ಆಫ್ರಿಕಾ, ಈಜಿಪ್ಟ್, ಇಂಡೋನೇಷ್ಯಾ, ಮಲೇಷ್ಯಾ ದೇಶಗಳಲ್ಲಿ 200ಕ್ಕೂ ಅಧಿಕ ಸೂಪರ್, ಹೈಪರ್ ಮಾರ್ಕೆಟ್’ಗಳು, ಲುಲು ಹೈಪರ್‌ ಮಾರ್ಕೆಟ್‌ ಹೆಸರಿನಲ್ಲಿ ಕಾರ್ಯಾಚರಿಸುತ್ತಿದ್ದು 58 ಸಾವಿರಕ್ಕೂ ಅಧಿಕ ಮಂದಿ ವಿವಿಧ ದೇಶಗಳ ನೌಕರರಿದ್ದಾರೆ.



Join Whatsapp