ಬಸ್ ನೌಕರರ ಮುಷ್ಕರ 2ನೇ ದಿನಕ್ಕೆ | ಪ್ರಯಾಣಿಕರ ಪರದಾಟ, ಖಾಸಗಿ ಬಸ್-ಆಟೋಗಳದ್ದೇ ಕಾರುಬಾರು

Prasthutha|

ಬೆಂಗಳೂರು: ವೇತನ ಹೆಚ್ಚಳಕ್ಕೆ ಒತ್ತಾಯಿಸಿ, ಆರನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಬೇಕೆಂದು ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳ ನೌಕರರು ನಡೆಸುತ್ತಿರುವ ಮುಷ್ಕರ ಗುರುವಾರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

- Advertisement -

ಬೆಂಗಳೂರಿನಲ್ಲಿ ಪ್ರಯಾಣಿಕರು ಹೇಳಿದಲ್ಲಿಗೆ ಆಟೋದವರು ಬರುವುದಿಲ್ಲ, ಬಂದರೂ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಪ್ರಯಾಣಿಕರು ಅಳಲು ತೋಡಿಕೊಂಡಿದ್ದಾರೆ. ಸರ್ಕಾರ ಮತ್ತು ಸಾರಿಗೆ ಇಲಾಖೆ ನೌಕರರ ಕಿತ್ತಾಟದಲ್ಲಿ ಜನಸಾಮಾನ್ಯರು ನಲುಗಿ ಹೋಗುತ್ತಿದ್ದಾರೆ.

ತಮ್ಮ ದಿನನಿತ್ಯದ ಕೆಲಸಗಳಿಗೆ ಹೋಗಬೇಕಾದವರು ಬಸ್ ನಿಲ್ದಾಣಕ್ಕೆ ಬಂದು ಖಾಸಗಿ ಬಸ್ಸುಗಳಲ್ಲಿ ಪ್ರಯಾಣಿಸಬೇಕಾದ ಪರಿಸ್ಥಿತಿಯ ಲಾಭ ಪಡೆದುಕೊಂಡು ಹಲವು ಕಡೆಗಳಲ್ಲಿ ಖಾಸಗಿ ಬಸ್ ಮಾಲೀಕರು, ಆಟೋ, ಟ್ಯಾಕ್ಸಿ ಚಾಲಕರು ಜನಸಾಮಾನ್ಯರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆಂದು ತಿಳಿದುಬಂದಿದೆ.

- Advertisement -

ಸಾರಿಗೆ ಇಲಾಖೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಹಿನ್ನೆಲೆಯಲ್ಲಿ ಜಯನಗರ ಆರ್ ಟಿಒ ಕಚೇರಿಯಲ್ಲಿ ಇಂದು ಮಧ್ಯಾಹ್ನ 12.30ಕ್ಕೆ ಸಭೆ ನಡೆಯಲಿದ್ದು ಖಾಸಗಿ ಬಸ್ ಚಾಲಕರ ಒಕ್ಕೂಟದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಭೆಯಲ್ಲಿ ಖಾಸಗಿ ಬಸ್ಸುಗಳಲ್ಲಿ ಸಂಚರಿಸುವ ಮಕ್ಕಳು, ವಯಸ್ಕರು, ಇಳಿ ವಯಸ್ಸಿನವರಿಗೆ ಸೂಕ್ತ ದರ ನಿಗದಿಯಾಗಲಿದೆ.

ಸಾರಿಗೆ ನೌಕರರು ಬಸ್ ಸಂಚಾರ ಸ್ಥಗಿತಗೊಳಿಸಿ ನಡೆಸುತ್ತಿರುವ ಮುಷ್ಕರದಿಂದಾಗಿ ರಾಜ್ಯದಲ್ಲಿರುವ ನಾಲ್ಕು ಸಾರಿಗೆ ನಿಗಮಗಳಿಗೆ ನಿನ್ನೆ ಒಂದೇ ದಿನ ಸುಮಾರು 14 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ. ಬಿಎಂಟಿಸಿ ಪ್ರಸ್ತುತ ದಿನದ ಆದಾಯ ಸುಮಾರು ಎರಡೂವರೆಯಿಂದ 3 ಕೋಟಿ ರೂಪಾಯಿ, ಕೆಎಸ್‌ಆರ್‌ಟಿಸಿಯ ನಿತ್ಯದ ಆದಾಯ 7 ಕೋಟಿ ರೂಪಾಯಿ, ವಾಯವ್ಯ ಸಾರಿಗೆಯ ಆದಾಯ 2 ಕೋಟಿ ಮತ್ತು ಈಶಾನ್ಯ ಸಾರಿಗೆಯ ಆದಾಯ 2 ಕೋಟಿ ರೂಪಾಯಿಯಾಗಿದೆ.

Join Whatsapp