ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮತ್ತು ಭಾರತೀಯ ಜನತಾ ಪಕ್ಷದ ಬುದ್ಧಿವಂತರ ಎದುರುಗಡೆ ಕಾಣುವ ಧ್ಯೇಯ ಸಮಗ್ರತಾವಶ್ಯಕ ಮಾನವೀಯತೆ, ಇದನ್ನು ದೀನ ದಯಾಳ್ ಉಪಾಧ್ಯಾಯರು (1916- 1968) ಹೇಳಿರುವರು ಎಂದು ಪ್ರತಿಪಾದಿಸುತ್ತಾರೆ.ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್, ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ಕಾರ್ಯದರ್ಶಿ ರಾಮ ಮಾಧವ್ ಮತ್ತೆ ಮತ್ತೆ ಉಪಾಧ್ಯಾಯರ ಸಮಗ್ರತಾವಶ್ಯಕ ಮಾನವೀಯತೆಯ ಬಗ್ಗೆ ಹೇಳುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಅಧಿಕಾರಕ್ಕೆ ಇದು ಮಾರ್ಗದರ್ಶಿ ಸೂತ್ರ ಎನ್ನುವುದು ಅವರ ಎಣಿಕೆ.
ಪ್ರಧಾನ ಮಂತ್ರಿ ಮೋದಿಯವರು ಸಹ ಕೆಲವೊಮ್ಮೆ ಈ ತತ್ವವನ್ನು ತಮ್ಮ ಸರಕಾರದ ದಾರಿದೀಪ ಎನ್ನುತ್ತಾರೆ. ರಾಮ್ ಮಾಧವ್ ರ ‘ದಿ ಹಿಂದುತ್ವ ಪಾರಾಡಿಗ್ಮ್: ಇಂಟೆಗ್ರಲ್ ಹ್ಯೂಮನಿಸಂ ಆ್ಯಂಡ್ ಕ್ವೆಸ್ಟ್ ಫಾರ್ ಎ ನಾನ್ ವೆಸ್ಟರ್ನ್ ವರ್ಲ್ಡ್ ವ್ಯೂ’ ಬಿಡುಗಡೆಯ ವೇಳೆ ಹೊಸ ತತ್ವಕ್ಕೆ ಒತ್ತು ನೀಡಲಾಗಿದೆ. ‘ಹಿಂದುತ್ವ ಮಾದರಿ: ಸಮಗ್ರತಾವಶ್ಯಕ ಮಾನವೀಯತೆ ಮತ್ತು ಪಾಶ್ಚಾತ್ಯವಲ್ಲದ ಜಗತ್ತಿನ ನೋಟಕ್ಕೆ ಅನ್ವೇಷಣೆ’ ಎನ್ನುತ್ತದೆ ಈ ಪುಸ್ತಕ. ಹೊಸಬಾಳೆ ಅವರು, ಹಿಂದುತ್ವವು ಎಡ ವಾದವೂ ಅಲ್ಲ, ಬಲ ವಾದವೂ ಅಲ್ಲ, ಅದರ ಸಾರ ಸಮಗ್ರತಾವಶ್ಯಕ ಮಾನವೀಯತೆ ಎನ್ನುತ್ತಾರೆ. ಹಿಂದೆ ಸಾವರ್ಕರ್, ಹೆಡ್ಗೆವಾರ್, ಗೋಳ್ವಾಲ್ಕರ್ ಹಿಂಬಾಲಕರಾಗಿದ್ದ ಅರೆಸ್ಸೆಸ್ ನವರು ಸಮಗ್ರತಾವಶ್ಯಕ ಮಾನವೀಯತೆ ಹೇಳಿದರೆ ಏನು ವ್ಯತ್ಯಾಸ ಕಾಣುತ್ತದೆ. ಈ ತತ್ವ ಅವರಿಗೆ ಅಲ್ಪಸಂಖ್ಯಾಕರನ್ನು ಮುಟ್ಟಲಿಕ್ಕಲ್ಲ. ಶೂದ್ರರು, ದಲಿತರು, ಆದಿವಾಸಿಗಳನ್ನು ಮುಸ್ಲಿಮ್, ಕ್ರಿಶ್ಚಿಯನರ ವಿರುದ್ಧ ಹಿಂದೆ ತಮ್ಮ ದಾಳಿ ತೋಳುಗಳಾಗಿ ಬಳಸಿದ್ದನ್ನು ಇನ್ನಷ್ಟು ಬಲಗೊಳಿಸಲು ಈ ಹುನ್ನಾರ. ಏಕೆಂದರೆ ಬ್ರಾಹ್ಮಣ್ಯದ ಹಿಂದುತ್ವದಲ್ಲಿ ಪರಂಪರೆಯಲ್ಲೇ ಈ ಶೋಷಿತರಿಗೆ ಸರಿಯಾದ ಸ್ಥಾನಮಾನ ಕೊಡಲಾಗಿಲ್ಲ.
ದೀನದಯಾಳ್ ಉಪಾಧ್ಯಾಯ ಆರೆಸ್ಸೆಸ್ ಕಾರ್ಯಕರ್ತ ಆಗಿದ್ದು, ಮುಂದೆ ಅದರ ರಾಜಕೀಯ ವಿಭಾಗವಾದ ಬಿಜೆಪಿಯ ಎರಡನೆಯ ಅಧ್ಯಕ್ಷರಾದರು. ಅವರು ಉತ್ತರ ಪ್ರದೇಶದ ಬ್ರಾಹ್ಮಣರಾಗಿದ್ದು, ಭಾಗವತ್, ಹೊಸಬಾಳೆ, ರಾಮ್ ಮಾಧವ್ ಬೇರೆ ರಾಜ್ಯದವರಾದರೂ ಬ್ರಾಹ್ಮಣ್ಯ ಪರಿಸರದ ಮಾದರಿಯದರಲ್ಲೇ ಬೆಳೆದವರು. ಭಾರತದಲ್ಲಿ ಬಾಲ್ಯದಲ್ಲಿ ಬೆಳೆಸಿದ ವಾತಾವರಣದ ಜಾತೀಯತೆ ಅವರಲ್ಲಿ ಜೀವನದುದ್ದಕ್ಕೂ ಬೇರೂರಿರುತ್ತದೆ. ಬ್ರಾಹ್ಮಣ್ಯವು ಹಲವು ಗುಣಲಕ್ಷಣಗಳನ್ನು ಹೊಂದಿದ್ದು, ಮಾನವ ಸಮಾನತೆಯ ವಿರುದ್ಧ ವರ್ಣಾಶ್ರಮ ಧರ್ಮ, ಜಾತಿ ಪದ್ಧತಿ ಇತ್ಯಾದಿಯನ್ನು ಹಿಂದೂ ಒಳಗಡೆಯೇ ಪೋಷಿಸಿದೆ. ಗೋಳ್ವಾಲ್ಕರ್ ಮೊದಲಾದ ಆರೆಸ್ಸೆಸ್ಸಿಗರ ಬರಹಗಳು ಪೂರ್ಣವಾಗಿ ಹಿಂದುತ್ವ ಪರಂಪರೆಯನ್ನೇ ಹೇಳುತ್ತವೆ. ಗೋಳ್ವಾಲ್ಕರ್, ಹೆಡ್ಗೆವಾರ್ ಬ್ರಾಹ್ಮಣರಾಗಿದ್ದು, ಆರೆಸ್ಸೆಸ್ ಮೇಲುಸ್ತರದಲ್ಲಿ ಇಲ್ಲಿಯವರೆಗೆ ಯಾವೊಬ್ಬ ಶೂದ್ರ, ದಲಿತ, ಆದಿವಾಸಿ ಬರಲು ಸಾಧ್ಯವಾಗಿಲ್ಲ.
ಜಾತಿ ಪದ್ಧತಿ ಎಷ್ಟು ಕೆಟ್ಟದಾಗಿದೆಯೆಂದರೆ ಇತರ ಧರ್ಮದವರ, ಸಂಸ್ಕೃತಿಯವರ ಜೊತೆಗೆ ಒಡನಾಡಿದರೂ ಕೆಳಜಾತಿಯವರ ಜೊತೆ ಒಡನಾಡಬಾರದ ಮನೋಭಾವ ಸಾರ್ವತ್ರಿಕವಾಗಿದೆ. ಸಮಗ್ರತಾವಶ್ಯಕ ಮಾನವೀಯತೆ ಇದನ್ನೆಲ್ಲ ಸರಿ ಮಾಡಿ ವ್ಯಕ್ತಿ ಜಾತಿ ಸಮಾನತೆ ತಂದೀತೆ? ಒಟ್ಟಾರೆ ಹಿಂದೂ ಧರ್ಮವನ್ನು ಪ್ರಜಾಪ್ರಭುತ್ವಾತ್ಮಕ ಆಗಿಸಲು ಒಂದು ರಂಗ ಎದ್ದಿದೆ ಎನ್ನಬಹುದು
ಉಪಾಧ್ಯಾಯರು ಪಾಶ್ಚಾತ್ಯ ವ್ಯಕ್ತಿಗತ ಬಂಡವಾಳಶಾಹಿ ಮತ್ತು ಮಾರ್ಕ್ಸ್ ಸಮಾಜವಾದ ಎರಡನ್ನೂ ವಿರೋಧಿಸಿದರು. ಕೆಲವು ಮಟ್ಟಿಗೆ ಪಾಶ್ಚಾತ್ಯ ವಿಜ್ಞಾನದ ಕೆಲವನ್ನು ಅವರು ಒಪ್ಪಿದ್ದರು.
ಪಾಶ್ಚಾತ್ಯ ಪೌರಾತ್ಯ ಯಾವುದೇ ವಿಜ್ಞಾನವು ದುಡಿಮೆ ಮತ್ತು ಸರಕುಗಳ ಉತ್ಪಾದನೆಯ ಘನತೆಯದಾಗಿದ್ದು ಯಾವುದೇ ಪವಿತ್ರ ಇಲ್ಲವೇ ಮಾಲಿನ್ಯದ ನೀತಿಗಳನ್ನು ಮಾನವರು ಹೊಂದಿಲ್ಲ. ಬೇಸಾಯ, ಕೈಕೆಲಸಗಳು ಕೂಡ ಇದಕ್ಕೆ ಹೊರತಲ್ಲ.
ಬ್ರಾಹ್ಮಣ್ಯದಲ್ಲಿ ಬೇರು ಬಿಟ್ಟಿರುವ ಒಂದು ಸಂಸ್ಥೆಯಾದ ಆರೆಸ್ಸೆಸ್ ನದು ಬ್ರಾಹ್ಮಣ್ಯದ ಪಾವಿತ್ರ್ಯ, ಮಲಿನತೆ, ಜಾತಿ ಮತ್ತು ಲಿಂಗ ತಾರತಮ್ಯದ ಶ್ರೇಣೀಕೃತ ಅಸಮಾನತೆ, ಮನುಷ್ಯ ಮುಟ್ಟಿಕೊಳ್ಳದಿರುವಿಕೆ ಇವೆಲ್ಲವನ್ನೂ ಒಳಗೊಂಡಿರುವುದಾಗಿದೆ.
ಮಾರ್ಕ್ಸಿಸ್ಟರು ಮತ್ತು ಬ್ರಾಹ್ಮಣ ಮೂಲದ ಬುದ್ಧಿಜೀವಿಗಳು ಜಾತಿ ಸಮಸ್ಯೆಯನ್ನು ದೊಡ್ಡದಾಗಿ ನೋಡಿರದ ರೀತಿಯದೇ ಉಪಾಧ್ಯಾಯರ ದೃಷ್ಟಿಯಿದೆ. ಮಹಾತ್ಮಾ ಫುಲೆ ಮತ್ತು ಬಿ. ಆರ್. ಅಂಬೇಡ್ಕರ್ ಅವರು ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆಯನ್ನು ಹೋಗಲಾಡಿಸುವ ತೀವ್ರ ಕಾಳಜಿಯ ನೀತಿ ಹೊಂದಿದ್ದರು. ಉಪಾಧ್ಯಾಯರು ಮಹಾತ್ಮಾ ಗಾಂಧೀಜಿಯವರ ಸರ್ವೋದಯ ಮತ್ತು ಗ್ರಾಮ ಸ್ವರಾಜ್ ಒಗ್ಗೂಡಿಸಲು ಪ್ರಯತ್ನಿಸಿದ್ದರು. ಯಾಕೆ ಫುಲೆ, ಅಂಬೇಡ್ಕರ್ ನೆನಪಾಗಲಿಲ್ಲ? ಅಸ್ಪೃಶ್ಯತೆಯನ್ನು ವಿರೋಧಿಸಿದರೂ ಗಾಂಧೀಜಿ ಸಹ ವರ್ಣಾಶ್ರಮ ಧರ್ಮ ಬಿಟ್ಟವರಲ್ಲ.
ಒಬ್ಬ ವಿಮರ್ಶಕರ ಪ್ರಕಾರ, ಉಪಾಧ್ಯಾಯರ ಸಮಗ್ರತಾವಶ್ಯಕ ಮಾನವೀಯತೆ ತತ್ವವು ಆದಿ ಶಂಕರರ ಅದ್ವೈತ ಪರಂಪರೆಯದಾಗಿದೆ. ಅದ್ವೈತವು ದ್ವಿತ್ವ ಸಾರದ್ದು ಅಂದರೆ ಅದು ಕ್ಷತ್ರಿಯರಾದ ರಾಮ, ವಿಷ್ಣು, ಬ್ರಾಹ್ಮಣ ಪರಶುರಾಮ, ಪುರಾಣಗಳ ದೇವರನ್ನು ಆರಾಧಿಸುವುದಕ್ಕೆ ಭಿನ್ನಮತವನ್ನೇನೂ ತೋರುವುದಿಲ್ಲ. ರಾಮ ಮಂದಿರಕ್ಕಾಗಿ ಜೈ ಶ್ರೀರಾಂ ಘೋಷಣೆ ಮತ್ತು ಅಲ್ಪಸಂಖ್ಯಾಕರ ವಿರುದ್ಧ ಹಿಂಸಾಚಾರ ಇವೆಲ್ಲವನ್ನು ಆರೆಸ್ಸೆಸ್ ಸೃಷ್ಟಿಸಿದೆ ಇಲ್ಲವೇ ಒಪ್ಪಿಕೊಂಡಿದೆ. ರಾಮ ಕ್ಷತ್ರಿಯ ಎನ್ನುವುದು ಆರೆಸ್ಸೆಸ್ ನವರಿಗೆ ತಿಳಿದಿದೆ, ಅವರಿಗೆ ಈ ಮೂಲಕ ಜಾತಿ ನಿರ್ಮೂಲನೆ ಮಾಡಿದ್ದನ್ನು ತೋರಿಸುವ ಶಾಶ್ವತ ಇಚ್ಚೆಯೂ ಇದೆ!
ದೇವರುಗಳು ಅವರದೇ ಪಾವಿತ್ರ್ಯ ಹೇಳುವಾಗ, ಸಂಬಂಧಿತ ವ್ಯವಸ್ಥೆಗಳು ಜಾತಿ ಆಧ್ಯಾತ್ಮಿಕತೆಯಲ್ಲಿ ಮುಳುಗಿರುವಾಗ ಸಮಗ್ರತಾವಶ್ಯಕ ಮಾನವೀಯತೆ ಹೇಗೆ ತಾನೆ ಸಾಧ್ಯ? ದ್ವಿತ್ವ ವಿರೋಧಿಯಾಗಿ ಒಂದೇ ದೇವರು ತತ್ವವನ್ನು ನಂಬಿ ಒಪ್ಪಿ, ಒಬ್ಬ ದೇವರೇ ಹೆಣ್ಣು, ಗಂಡು ಎಲ್ಲರನ್ನು ಸಮಾನವಾಗಿ ಸೃಷ್ಟಿಸಿದ್ದಾನೆ ಎಂದು ತಿಳಿಯುವುದೊಳಿತು. ಶೂದ್ರ, ದಲಿತ, ಆದಿವಾಸಿ ಜನರಿಗಿರುವ ದೊಡ್ಡ ಸವಾಲು ಎಂದರೆ, ಹಿಂದುತ್ವದೊಳಗೆ ಹೋಗಲಿ, ಹೊಸ ಸಮಗ್ರತಾವಶ್ಯಕ ಮಾನವೀಯತೆಯಲ್ಲಿ ಅವರ ಸ್ಥಾನಮಾನವು ಆಧ್ಯಾತ್ಮಿಕ ಮತ್ತು ರಾಷ್ಟ್ರೀಯ ಸಂಸ್ಕೃತಿಯ ಹೆಸರಲ್ಲಿ ಬದಲಾಗದೆ ಉಳಿದಿರುವುದು.
ಆರೆಸ್ಸೆಸ್, ಬಿಜೆಪಿಯ ಬುದ್ಧಿವಂತರ ಸಮಗ್ರತಾವಶ್ಯಕ ಮಾನವೀಯತೆ ತತ್ವದಲ್ಲೂ ಜಾತೀಯತೆ ತೊಲಗಿಸುವ, ಲಿಂಗ ತಾರತಮ್ಯ ಮತ್ತು ಅಸ್ಪೃಶ್ಯತೆ ಹೋಗಲಾಡಿಸುವ ಗುರಿ ಇಲ್ಲ. ಹಿಂದುತ್ವದೊಳಗಡೆ ಅವರನ್ನು ಹಾಗೆಯೇ ಉಳಿಸಿಕೊಳ್ಳಲು ಇದೊಂದು ಆಕರ್ಷಕ ಶಬ್ದ ಅಷ್ಟೆ. ಶೂದ್ರ, ದಲಿತ, ಆದಿವಾಸಿ ಬುದ್ಧಿಜೀವಿಗಳು ಮೇಲೆದ್ದು ಅವರದೇ ಸ್ವಂತಿಕೆ ಬೆಳೆಸಿಕೊಳ್ಳಲು ಅವಕಾಶ ನೀಡದಿರುವ ಒಂದು ವ್ಯವಸ್ಥಿತ ಒಳಗುದಿ ಇದರೊಳಗೆ ಇರುವುದು ಕಾಕತಾಳೀಯ ಇರಲಾರದು. ಆರೆಸ್ಸೆಸ್ ಇಲ್ಲವೇ ಬಿಜೆಪಿ ಇಲ್ಲಿಯವರೆಗೆ ದುಡಿಮೆಯ ಘನತೆಯನ್ನು ಒಪ್ಪಿಕೊಂಡಿಲ್ಲ. ಅವರ ಆಧ್ಯಾತ್ಮಿಕತೆ, ತಾತ್ವಿಕ ಕಾರ್ಯಸೂಚಿಯಲ್ಲಿ ಅವೆಲ್ಲ ಇಲ್ಲ. ಜಾತಿ, ಭಾಷೆಯನ್ನು ಬದಿಗಿಟ್ಟು ನೋಡಿದರೂ ಹಿಂದೂ ಚಪ್ಪಲಿ ಹೊಲಿಯುವವ, ಮಡಕೆ ಮಾಡುವವ, ಕಸ ಗುಡಿಸುವವ, ಕಕ್ಕಸು ತೊಳೆಯುವವ, ಕುರಿಗಾಹಿ ಒಂದು ಹಿಂದೂ ಆಲಯದಲ್ಲಿ ಪೂಜಾ ಭಟ್ಟ ಆಗಲು ಅವಕಾಶ ಇಲ್ಲ. ಈ ಚಾರಿತ್ರಿಕ ಸಮಸ್ಯೆಯಿಂದ ಸಮಗ್ರತಾವಶ್ಯಕ ಮಾನವೀಯತೆ ಹೇಗೆ ಪಾರಾಗುತ್ತದೆ? ಮನುಷ್ಯ ಸಮಾನತೆಯೇ ಇಲ್ಲದ ಸಮಗ್ರತಾವಶ್ಯಕ ಮಾನವೀಯತೆ ಇದರಿಂದ ಏನುಪಯೋಗ?
ಉಪಾಧ್ಯಾಯರ ಸಮಗ್ರತಾವಶ್ಯಕ ಮಾನವೀಯತೆಯು ದೇಹ, ಮಿದುಳು, ಬುದ್ಧಿಮತ್ತೆ, ಆತ್ಮ ಇವುಗಳ ಗುಣ ಲಕ್ಷಣದ್ದಾಗಿದೆ. ಇದು ಶೂದ್ರ, ದಲಿತ, ಆದಿವಾಸಿಗಳ ಬುದ್ಧಿಮತ್ತೆ, ಆತ್ಮವನ್ನು ಒಳಗೊಂಡಿದೆಯೇ? ಹಿಂದುತ್ವ ಸಂಸ್ಥೆಗಳನ್ನು ಸಂಘಟಿಸುತ್ತಿರುವವರು ಯಾರು? ಈ ತತ್ವಗಳ ಸಂಘಟಕರಿಗೆ ಬ್ರಾಹ್ಮಣ್ಯದ ಹೊರತು ಇತರ ಭಾವನೆಗಳಿಗೆ ಸಮಾನಾವಕಾಶ ನೀಡುವ ಮನಸ್ಸು ಇಲ್ಲವೇ ಇಲ್ಲ.
ವಿಶ್ವಾತ್ಮಕ ಮಾನವತೆಯು ಒಪ್ಪಿರುವ ತತ್ವವೆಂದರೆ ಆಹಾರ ಸಂಸ್ಕೃತಿ, ಸಮಾಜ ವ್ಯವಸ್ಥೆ, ಆಧ್ಯಾತ್ಮಿಕ ಸಮುದಾಯದಲ್ಲಿ ತಾರತಮ್ಯವನ್ನು ಹೇಳುವುದಿಲ್ಲ. ಆರೆಸ್ಸೆಸ್ ನ ವಿಶ್ವಾತ್ಮಕ ಮಾನವತೆಯು ಈ 96 ವರುಷಗಳಲ್ಲಿ ತನ್ನ ಸಸ್ಯಾಹಾರದ ಪೂರ್ವಗ್ರಹವನ್ನು ಸಹ ಬಿಟ್ಟಿಲ್ಲ. ಉಪಾಧ್ಯಾಯರ ಸಮಗ್ರತಾವಶ್ಯಕ ಮಾನವೀಯತೆಯು ವ್ಯಕ್ತಿಗತ ಎಂಬುದನ್ನು ಒಪ್ಪದು, ಅದು ಪಾಶ್ಚಾತ್ಯರದೆಂಬುದು ಅದರ ವಾದ. ವ್ಯಕ್ತಿಗತ ಎಂಬುದನ್ನು ಅವರು ವಿರೋಧಿಸುವುದು ಜಾತಿ ಮತ್ತು ಕೋಮು ಆಧಾರದ ಮೇಲೆ. ಆದರೆ ಭಾರತೀಯ ಸಂವಿಧಾನವು ಪ್ರತಿಯೊಬ್ಬ ವ್ಯಕ್ತಿಗೂ ಹಕ್ಕುಗಳನ್ನು ನೀಡಿ, ಒಬ್ಬೊಬ್ಬ ನಾಗರಿಕನಾಗಿ ಗೌರವಿಸಿದೆ. ಅದರರ್ಥ ಆರೆಸ್ಸೆಸ್ ತತ್ವವು ನಮ್ಮ ಸಂವಿಧಾನಕ್ಕೆ ವಿರೋಧಿಯಾಗಿದೆ. ಇದರಲ್ಲಿ ಶೂದ್ರ, ದಲಿತ, ಆದಿವಾಸಿ, ಅಲ್ಪಸಂಖ್ಯಾತರಿಗೆ ಒಂದು ಬೆದರಿಕೆಯಷ್ಟೆ ಗೋಚರಿಸುತ್ತಿದೆ.
ಹಿಂದೂ ಸಮಾಜದ ವಿರೋಧಾಭಾಸವನ್ನು ನೋಡಿ. ದ್ವಿಜರಾದ ಬ್ರಾಹ್ಮಣರು ಇತರ ಶೂದ್ರ, ದಲಿತ, ಆದಿವಾಸಿಗಳನ್ನು ದೇಹವಾಗಿ ಪರಿಗಣಿಸುತ್ತಾರೆಯೇ ಹೊರತು ಮಿದುಳು, ಬುದ್ಧಿಮತ್ತೆ, ಆತ್ಮ ಇರುವವರಾಗಿ ಪರಿಗಣಿಸುವುದಿಲ್ಲ. ಋಗ್ವೇದದಂತೆ ಶೂದ್ರ, ವೈಶ್ಯ, ಕ್ಷತ್ರಿಯ, ಬ್ರಾಹ್ಮಣ ಈ ನಾಲ್ಕು ವರ್ಣದವರಲ್ಲಿ ಶೂದ್ರನು ಇತರ ಮೂರು ವರ್ಣದವರ ಸೇವೆಗಾಗಿಯೇ ಇದ್ದಾನೆ. ಅವರ ಆಧ್ಯಾತ್ಮಿಕ ಆತ್ಮವನ್ನು ನಿರಾಕರಿಸಲಾಗಿದೆ. ದೇಹಕ್ಕಿಂತ ಬೇರೆಯದೇ ಎನ್ನಲಾದ ಆತ್ಮವನ್ನು ಕೆಲವರ ಶ್ರೇಷ್ಟತೆ ಬಿಂಬಿಸಲು ಹೇರಲಾಗಿದೆ. ಹಿಂದುತ್ವ ಶಾಲೆಯು ಧರ್ಮಾಂಧತೆ ನಂಬಿದ್ದು, ತನ್ನ ರಾಜಕೀಯ ಬಲದ ಜೊತೆಗೆ ಈಗಲೂ ಶೂದ್ರ, ದಲಿತ, ಆದಿವಾಸಿಗಳನ್ನು ಹಿಂದೂ ಆಲಯಗಳ ಪೂಜಾರಿಯಾಗಿಸಲು ತಯಾರಿಲ್ಲ. ಅವರನ್ನು ಆತ್ಮರಹಿತರಾಗಿಯೇ ಪರಿಗಣಿಸಲಾಗುತ್ತದೆ.
ಇವರ ಸಮಗ್ರತಾವಶ್ಯಕ ಮಾನವೀಯತೆಯು ಆಹಾರ ಬೆಳೆಯುವ ದೇಶದ ಬಹುಸಂಖ್ಯಾತರನ್ನೂ ಆತ್ಮ ರಹಿತರಾಗಿ ಇಡಬಯಸಿದೆ. ಬ್ರಾಹ್ಮಣ್ಯದ ಆರೆಸ್ಸೆಸ್ ಕೂಟವು ಅವರಿಗೆ ಹೊಸ ದಾರಿ ಇಲ್ಲವೇ ಧಾರ್ಮಿಕ ಸ್ವಾತಂತ್ರ್ಯ ನೀಡಲು ತಯಾರಿಲ್ಲ.
ಕೌಟಿಲ್ಯನ ಅರ್ಥಶಾಸ್ತ್ರ, ಮನುವಿನ ಧರ್ಮಶಾಸ್ತ್ರ, ರಾಮಾಯಣ, ಮಹಾಭಾರತಗಳು ಎಲ್ಲವೂ ಜಾತಿ ವ್ಯವಸ್ಥೆಯನ್ನು ಎತ್ತಿ ಹಿಡಿದಿವೆ. ಈಗಿನ ಆಡಳಿತವು ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಈ ಪುಸ್ತಕಗಳನ್ನು ಪ್ರಾಯೋಜಿಸಲು, ಪ್ರಯೋಗ ಮಾಡಲು ಎಲ್ಲ ತಂತ್ರಗಳನ್ನು ನಡೆಸಿದೆ.
ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ದುಡಿಮೆಯ ಘನತೆ ತಿಳಿಸುವ, ಜಾತ್ಯತೀತತೆಯನ್ನು ಕಲಿಸುವ ಪಠ್ಯ ವಿಷಯ ಇಲ್ಲವಾದ್ದರಿಂದ ಯಾವ ಬಗೆಯ ಸಮಗ್ರತಾವಶ್ಯಕ ಮಾನವೀಯತೆಯನ್ನು ಇವು ಕಲಿಸಲು ಸಾಧ್ಯ? ಕ್ರಮಬದ್ಧವಾಗಿ ಜಾತಿ ವ್ಯವಸ್ಥೆ ಬಗ್ಗೆ ಮೌನ ವಹಿಸುವುದು, ಜಾತಿಯನ್ನು ಸಾಂಸ್ಥಿಕವಾಗಿಸಿರುವುದು, ದುಡಿಮೆಗೆ ಘನತೆ ನೀಡದಿರುವುದು, ಮಾನವ ಮಾನವನನ್ನು ಮುಟ್ಟದಿರುವುದು ಇವೆಲ್ಲ ಇಟ್ಟುಕೊಂಡು ಯಾವುದೇ ಬಗೆಯ ಬದಲಾವಣೆಯನ್ನು ಈ ದೇಶದಲ್ಲಿ ನೋಡಲು ಸಾಧ್ಯವಿಲ್ಲ.
ಆರೆಸ್ಸೆಸ್ ಮತ್ತು ಬಿಜೆಪಿಗಳು ಯಾವುದೇ ಸುಧಾರಣೆ, ಬದಲಾವಣೆಯನ್ನು ಬಯಸದ ಸಂರಚನೆಗಳಾಗಿವೆ. ಹಾಗಿರುವಾಗ ಈ ಸಮಗ್ರತಾವಶ್ಯಕ ಮಾನವೀಯತೆಯು ಯಾವ ಬದಲಾವಣೆ ತರುವುದು ಸಾಧ್ಯ? ಶೂದ್ರ, ದಲಿತ, ಆದಿವಾಸಿಗಳ ಈಗಿನ ಸ್ಥಾನಮಾನವನ್ನು ಇಟ್ಟಲ್ಲೇ ಇಟ್ಟು ಸಮಗ್ರತಾವಶ್ಯಕ ಮಾನವೀಯತೆ ಎನ್ನುವುದು ಬದಲಾವಣೆ ಆಗಲು ಬಿಡದಿರುವ ಹುನ್ನಾರವೇ ಆಗಿದೆ.
(ಕೃಪೆ: ದಿ ವೈರ್)