ಮಂಗಳೂರು: ವಿಟ್ಲದ ಸಲೆತ್ತೂರ್ ನಲ್ಲಿ ನಡೆದ ಕೊರಗನ ವೇಷ ಪ್ರಕರಣದ ಆರೋಪಿಗಳನ್ನು ಜಮಾತಿನಿಂದ ಬಹಿಷ್ಕಾರ ಮಾಡಿ ಫತ್ವಾ ಹೊರಡಿಸಿ ಎಂದು ವಿಎಚ್ ಪಿ ಮುಖಂಡ ಶರಣ್ ಪಂಪ್ವೆಲ್ ಮುಸ್ಲಿಂ ಮುಖಂಡರಿಗೆ ಸವಾಲು ಹಾಕಿದ್ದಾರೆ.
ಈ ಕುರಿತು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಕೃತ್ಯವು ಹಿಂದೂಗಳ ಧಾರ್ಮಿಕ ನಂಬಿಕೆಗೆ ಘಾಸಿಯನ್ನುಂಟುಮಾಡಿದೆ. ಸ್ವಾಮಿ ಕೊರಗಜ್ಜನ ಲಕ್ಷಾಂತರ ಭಕ್ತರ ಕಣ್ಣಲ್ಲಿ ನೀರು ಹರಿಸಿದೆ. ಒಂದು ಕಡೆ ಖಂಡಿಸುವ ನಾಟಕವಾಡಿ, ಮತ್ತೊಂದೆಡೆ ಈ ಕೃತ್ಯವನ್ನು ಸಮರ್ಥಿಸುವ ಕೆಲಸ ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ಮುಸ್ಲಿಂ ಮುಖಂಡರು ಈ ಕೃತ್ಯ ನಡೆಸಿದವರ ಮನೆಗೆ ತೆರಳಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ತಿಳಿಸಿದರು.
ಅಲ್ಲದೆ ಮುಸ್ಲಿಂ ಮುಖಂಡರು “ಇಂತಹ ಕೃತ್ಯ ಇಸ್ಲಾಮಿನಲ್ಲಿ ಇಲ್ಲ, ಇದನ್ನು ಖಂಡಿಸುತ್ತೇವೆ ಎಂದಿದ್ದೀರಿ” ನೀವು ನಿಜವಾಗಿ ಖಂಡಿಸುವುದೇ ಆದಲ್ಲಿ ಕೃತ್ಯದಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳನ್ನು ಜಮಾತಿಯಿಂದ ಹೊರಗೆ ಹಾಕಿ, ಅವರ ವಿರುದ್ಧ ಫತ್ವಾ ಜಾರಿ ಮಾಡಿ ಎಂದು ಹೇಳಿದರು.
ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರೂ, ಸಂಘಪರಿವಾರದ ನಾಯಕರು ಪದೇ ಪದೇ ಪ್ರಚೋದನಾಕಾರಿ ಹೇಳಿಕೆಯನ್ನು ನೀಡುತ್ತಿದ್ದಾರೆ.