ಬೆಳ್ತಂಗಡಿಯಲ್ಲಿ ಸಿನಿಮೀಯ ಮಾದರಿಯಲ್ಲಿ ಮಗುವಿನ ಅಪಹರಣ | 17 ಕೋಟಿ ರೂ.ಗೆ ಬೇಡಿಕೆ; ಪೊಲೀಸರಿಂದ ತೀವ್ರ ಶೋಧ

Prasthutha|

ಬೆಳ್ತಂಗಡಿ : ಆಟವಾಡುತ್ತಿದ್ದ 8 ವರ್ಷದ ಮಗುವೊಂದನ್ನು ಸಿನಿಮೀಯ ಮಾದರಿಯಲ್ಲಿ ಅಪಹರಣ ಮಾಡಿ, 17 ಕೋಟಿ ರೂ.ಗೆ ಬೇಡಿಕೆಯಿಟ್ಟ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಉಜಿರೆಯ ರಥಬೀದಿ ಅಶ್ವತ್ಥಕಟ್ಟೆ ಸಮೀಪದಿಂದ ಮಗುವನ್ನು ಅಪಹರಿಸಲಾಗಿದೆ.

- Advertisement -

ಉಜಿರೆ ಉದ್ಯಮಿ ರಥಬೀದಿ ನಿವಾಸಿ ಎ.ಕೆ. ಶಿವನ್ ಎಂಬವರ ಮೊಮ್ಮಗ ಅನುಭವ್ (8) ನನ್ನು ಮನೆ ಮುಂಭಾಗದಿಂದ ಆಟವಾಡುತ್ತಿದ್ದ ವೇಳೆ ಕಾರಿನಲ್ಲಿ ಬಂದ ಅಪರಿಚಿತರು ಅಪಹರಿಸಿದ್ದಾರೆ. ಮನೆ ಮಂದಿ ಕಾರಿನ ಬಳಿ ಬರುತ್ತಿದ್ದಂತೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಬಳಿಕ ಮಗುವಿನ ತಾಯಿಗೆ ಕರೆ ಮಾಡಿ 100 ಬಿಟ್ ಕಾಯಿನ್ ಅಂದರೆ 17 ಕೋಟಿ ರೂ. ನೀಡುವಂತೆ ಬೇಡಿಕೆಯಿಟ್ಟಿದ್ದಾರೆ.

- Advertisement -

ಬಿಳಿ ಇಂಡಿಕಾ ಕಾರಿನಲ್ಲಿ ನಾಲ್ವರು ವ್ಯಕ್ತಿಗಳು ಮನೆ ಮುಂದೆ ನಿಂತಿದ್ದನ್ನು ಮನೆ ಮಂದಿ ಗಮನಿಸಿದ್ದಾರೆ. ಆದರೆ, ಸಂಜೆ 6:30ರ ಸುಮಾರಿಗೆ ಮಗುವನ್ನು ಅಪಹರಿಸಿ ಚಾರ್ಮಾಡಿ ಅಥವಾ ಧರ್ಮಸ್ಥಳ ಮಾರ್ಗವಾಗಿ ಸಂಚರಿಸಿರುವ ಅನುಮಾನ ವ್ಯಕ್ತವಾಗಿದೆ.

ಅಪಹರಣಕಾರರು ಹಿಂದಿ ಭಾಷೆಯಲ್ಲಿ ವ್ಯವಹರಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ಅಪಹರಣಕಾರರು ರಥಬೀದಿ ಸಮೀಪ ಅನುಮಾನಾಸ್ಪದವಾಗಿ ಓಡಾಡುತ್ತಿದ್ದುದನ್ನು ಸ್ಥಳೀಯರು ಗಮನಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬಂಟ್ವಾಳ ಡಿವೈಎಸ್ ಪಿ ವೆಲೆಂಟೈನ್ ಡಿಸೋಜಾ ಅವರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ., ಉಪ ನಿರೀಕ್ಷಕ ನಂದ ಕುಮಾರ್, ಧರ್ಮಸ್ಥಳ ಠಾಣೆ ಉಪ ನಿರೀಕ್ಷಕ ಪವನ್ ಕುಮಾರ್ ತಂಡ ರಚಿಸಿ ತನಿಖೆ ಕೈಗೊಂಡಿದ್ದಾರೆ.  



Join Whatsapp