ಮುಗಿಲು ಮುಟ್ಟಿದ ಬಿಜೆಪಿಯ ಬ್ರಹ್ಮಾಂಡ ಭ್ರಷ್ಟಾಚಾರ; ಜೆಡಿಎಸ್ ಟೀಕಾಪ್ರಹಾರ

Prasthutha|

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರ ಮುಗಿಲು ಮುಟ್ಟಿದೆ ಎಂದು ಜೆಡಿಎಸ್ ಪಕ್ಷ ವಾಗ್ದಾಳಿ ನಡೆಸಿದೆ.

- Advertisement -


ಈ ಬಗ್ಗೆ ಟ್ವೀಟ್ ಮಾಡಿರುವ ಜೆಡಿಎಸ್, ಮಾಡಿದವರ ಪಾಪ, ಆಡಿದವರ ಬಾಯಲ್ಲಿ ಎನ್ನುವ ಹಾಗೆ ರಾಜ್ಯ ಬಿಜೆಪಿ ಸರ್ಕಾರದ ಕುಕೃತ್ಯಗಳ ಪಟ್ಟಿ ಬೆಳೆಯುತ್ತಲೇ ಇದೆ. ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ಕಳೆದ ಮೂರು ವರ್ಷಗಳಲ್ಲಿ ಬಿಬಿಎಂಪಿಯು 7,121 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿರುವ ಸುದ್ದಿ ಹೊರಬಂದಿದೆ. ಬ್ರಹ್ಮಾಂಡ ಭ್ರಷ್ಟಾಚಾರ ಮುಗಿಲು ಮುಟ್ಟಿದೆ ಟೀಕಿಸಿದೆ.


ಈ ಮೂರು ವರ್ಷಗಳ ಅವಧಿಯಲ್ಲಿ 23 ರಿಂದ 25 ಸಾವಿರ ಗುಂಡಿಗಳನ್ನು ಮುಚ್ಚಿದ್ದೇವೆ ಎಂದು ಬಿಬಿಎಂಪಿ ಹೇಳಿದೆ. ಅಂದರೆ, ಒಂದು ಗುಂಡಿ ಮುಚ್ಚಲು 28 ರಿಂದ 30 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಲೆಕ್ಕ. ಬಹುಶಃ ಗುಂಡಿಗಳ ಬದಲಿಗೆ ರಸ್ತೆಗಳಲ್ಲಿ ಬಾವಿಗಳೇ ಇದ್ದವೇನೊ? ಅಂತೂ, ನಾ ಮುಂದು ತಾ ಮುಂದು ಎನ್ನುವ ಹಾಗೆ ಲೂಟಿ ಹೊಡೆದಾಗಿದೆ.

- Advertisement -


ಮುಖ್ಯಮಂತ್ರಿ ಬೊಮ್ಮಾಯಿ ಅವರೇ, ನಿಮ್ಮ ಸರ್ಕಾರದ ಲೂಟಿಯು ಇಷ್ಟು ದುಬಾರಿಯೆ? ಗುಂಡಿ ಮುಚ್ಚಲು ಇಷ್ಟು ದುಡ್ಡು ಖರ್ಚಾಗುತ್ತದೆಂದು ಜಗತ್ತಿಗೆ ತೋರಿಸಿಕೊಟ್ಟ ನಿಮ್ಮ ಸರ್ಕಾರದ ಭಂಡತನಕ್ಕೆ ಜರೂರಾಗಿ ಸನ್ಮಾನಿಸಲೇಬೇಕಿದೆ. ರಾಜ್ಯ ಬಿಜೆಪಿ ಸರ್ಕಾರದ ಯ ಆಡಳಿತ ಕಣ್ಣುಕುಕ್ಕುವ ಹಾಗೆ ಸುಳ್ಳು ಹೇಳುವ ಜಾಯಮಾನಕ್ಕೆ ಹೇಳಿ ಮಾಡಿಸಿದ ಹಾಗಿದೆ ಎಂದು ಲೇವಡಿ ಮಾಡಿದೆ.


ಒಂದೊಂದು ಇಲಾಖೆಯ ಅತ್ಯದ್ಬುತ ಕತೆಗಳು ಸರಣಿ ರೂಪದಲ್ಲಿ ಹೀಗೆ ಹೊರಬರುತ್ತಿದ್ದರೆ, ಸರ್ಕಾರದ ಸಚಿವರು, ಶಾಸಕರುಗಳಿಗೆ ಇನ್ನೂ ಎಷ್ಟು ಬಾಚಿಕೊಳ್ಳಬಹುದು ಎಂಬುದಷ್ಟೇ ಚಿಂತೆಯಾಗಿದೆ. ತಿಂದು ತೇಗಿದರೂ ಸಾಲದಷ್ಟು ಜನತೆಯ ತೆರಿಗೆ ಹಣ ಲೂಟಿ ಮಾಡಿದ್ದಾಗಿದೆ. ಇವರಿಗೆ ಅಜೀರ್ಣವಂತೂ ಆಗುವುದಿಲ್ಲ.


‘ಪುಟಕ್ಕಿಟ್ಟ ಚಿನ್ನದಂತ’ ಈ ಬಿಜೆಪಿ ಸರ್ಕಾರವು ಮೂರೂ ಬಿಟ್ಟಿದೆ.ಸಾರ್ವಜನಿಕ ಲಜ್ಜೆಯ ಲವ-ಲೇಶವೂ ಅದಕ್ಕಿಲ್ಲ.ಈಗ ಬರುವ ಚುನಾವಣೆಯಲ್ಲಿ ನಾಡಿನ ಜನತೆಯನ್ನು ಮೂರ್ಖರನ್ನಾಗಿಸಿ,ಮತ್ತೆ ತಮ್ಮ ದೋಚುವ ಕೆಲಸ ಮುಂದುವರಿಸಬಹುದು ಎಂಬ ಭ್ರಮೆಯಲ್ಲಿದ್ದಾರೆ. ಅದು ಅಸಾಧ್ಯದ ಮಾತು.ಇವರ ಘನಂದಾರಿ ಆಡಳಿತಕ್ಕೆ ಜನತೆ ತಕ್ಕ ಸನ್ಮಾನವನ್ನೇ ಮಾಡುತ್ತಾರೆ ಎಂದು ಹೇಳಿದೆ

Join Whatsapp