ಪೇಶ್ವೆಗಳ DNA ಇರುವ ವ್ಯಕ್ತಿಯನ್ನು ಸಿಎಂ ಮಾಡಲು ಬಿಜೆಪಿಯವರ ಹುನ್ನಾರ: ಮತ್ತೆ ಕುಟುಕಿದ HDK

Prasthutha|

ಶೃಂಗೇರಿ ಚಂದ್ರಮೌಳೇಶ್ವರ ದೇವಾಲಯ ಒಡೆದವರು ಯಾರು? ಗಾಂಧೀಜಿ ಅವರನ್ನು ಕೊಂದವರು ಯಾರು?

- Advertisement -


ಬೆಂಗಳೂರು: ಮರಾಠಿ ಪೇಶ್ವೆಗಳ ಡಿ.ಎನ್ ಎ ಇರುವ ವ್ಯಕ್ತಿಯನ್ನು ಕರ್ನಾಟಕಕ್ಕೆ ಮುಖ್ಯಮಂತ್ರಿ ಮಾಡಲು ಬಿಜೆಪಿ ಮತ್ತು ಆರ್ ಎಸ್ ಎಸ್ ಹೊರಟಿವೆ ಎಂದು ಹೇಳಿದ್ದೇನೆಯೇ ಹೊರತು, ರಾಜ್ಯದ ಬ್ರಾಹ್ಮಣ ಸಮುದಾಯವನ್ನು ನಾನೆಲ್ಲೂ ನಿಂದಿಸಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುನರುಚ್ಚರಿಸಿದರು.


ಯಶವಂತಪುರ ವಿಧಾನಸಭೆ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನನ್ನ ಹೇಳಿಕೆಯನ್ನು ತಿರುಚುವ ಪ್ರಯತ್ನವನ್ನು ವ್ಯವಸ್ಥಿತವಾಗಿ ನಡೆಸಲಾಗುತ್ತಿದೆಯೇ ಹೊರತು ನಾನು ಎತ್ತಿದ ವಿಷಯದ ಬಗ್ಗೆ ಚರ್ಚೆ ಮಾಡುತ್ತಿಲ್ಲ ಎಂದರು.

- Advertisement -


ಪೇಶ್ವೆಗಳ ಡಿಎನ್ ಎ ಇರುವ ವ್ಯಕ್ತಿಯನ್ನು ಸಿಎಂ ಮಾಡಲು ಬಿಜೆಪಿಯವರು ಹುನ್ನಾರ ಮಾಡಿದ್ದಾರೆ ಅಂತ ಹೇಳಿದ್ದೇನೆ. ಇದಕ್ಕೆ ಯಾಕೆ ಗಾಬರಿ ಯಾಕೆ? ಬ್ರಾಹ್ಮಣ ಸಮುದಾಯವೂ ಸೇರಿ ನಾನು ಯಾವುದೇ ಸಮಾಜಕ್ಕೆ ಅಗೌರವ ತೋರಿಲ್ಲ. ತೋರುವುದೂ ಇಲ್ಲ ಎಂದು ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದರು.


ನಾನು ಸಮಾಜದ ಬಗ್ಗೆ ಅಗೌರವ ತೋರಿದ್ದೇನೆ ಕೆಲವರು ನನ್ನ ಹೇಳಿಕೆಯನ್ನು ತಿರುಚಿ ಮಾತನಾಡುತ್ತಿದ್ದಾರೆ. ದೇಶದ ಇತಿಹಾಸದಲ್ಲಿ ನಡೆದ ಬೆಳವಣಿಗೆ ಬಗ್ಗೆ ಹೇಳಿದ್ದೇನೆ. ನಿನ್ನೆ ನಾನು ಕೊಟ್ಟ ಹೇಳಿಕೆ ಬ್ರಾಹ್ಮಣ ಸಮಾಜದ ಅವಹೇಳನ ಅಲ್ಲ. ಕರ್ನಾಟಕದಲ್ಲಿ ಇರುವ ಬ್ರಾಹ್ಮಣ ಸಮಾಜ ಸುಸಂಸ್ಕೃತ ಸಮಾಜ. ಆ ಬ್ರಾಹ್ಮಣ ಸಮಾಜದ ಬಗ್ಗೆ ನನಗೆ ಗೌರವ ಇದೆ. ನಮ್ಮ ಕುಟುಂಬ ಬ್ರಾಹ್ಮಣ ಸಮಾಜ ಮತ್ತು ಶೃಂಗೇರಿ ಮಠದ ಬಗ್ಗೆ ಗೌರವ ಇಟ್ಟುಕೊಂಡು ನಡೆದುಕೊಂಡು ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.


ಪ್ರಲ್ಹಾದ್ ಜೋಶಿ ಪಾರ್ಥೇಬಿಯಂ:
ಒಳ್ಳೆಯ ಬಿತ್ತನೆಯ ಬೆಲೆಯಲ್ಲಿ ಪಾರ್ಥೇನಿಯಂ ಬೆಳೆದಂತೆ ಆಗಿದೆ ಬಿಜೆಪಿಯ ಪರಿಸ್ಥಿತಿ. ಪ್ರಲ್ಹಾದ್ ಜೋಶಿ ಅಂತಹ ಪಾರ್ಥೇಬಿಯಂ. ಹಿಂದೆ ನಿತೀಶ್ ಕುಮಾರ್ ಅವರ ಡಿಎನ್ ಎ ಬಗ್ಗೆ ಪ್ರಧಾನಿ ಮೋದಿ ಸೇರಿ ಬಿಜೆಪಿಯವರು ಟೀಕೆ ಮಾಡಿಲ್ಲವೇ? ನಾನು ಮಾತನಾಡಿದರೆ ಮಾತ್ರ ಇವರು ಅದಕ್ಕೆ ವಿವಾದದ ಸ್ವರೂಪ ಕೊಡುತ್ತಿದ್ದಾರೆ. ಇವರ ಉದ್ದೇಶ ಎಂಥದ್ದು ಎಂಬುದನ್ನು ಇದರಿಂದ ಅರಿಯಬಹುದು ಎಂದು ಬಿಜೆಪಿ ಮತ್ತು ಪ್ರಲ್ಹಾದ್ ಜೋಶಿ ವಿರುದ್ಧ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.


ಬ್ರಾಹ್ಮಣ ಮಹಾಸಭಾಕ್ಕೆ ನಾನು ಹೇಳುವುದಿಷ್ಟೆ, ಬ್ರಾಹ್ಮಣ ಸಮುದಾಯದ ವಿರುದ್ಧ ನಾನು ಹೇಳಿಕೆ ಕೊಟ್ಟಿಲ್ಲ. ನಾನು ಸಿಎಂ ಆಗಿದ್ದಾಗಲೇ ಬ್ರಾಹ್ಮಣ ಮಹಾಸಭಾಗೆ ಬನಶಂಕರಿ ಬಳಿ ಜಾಗ ಕೊಟ್ಟಿರುವುದು. ಎರಡನೇ ಬಾರಿ ಸಿಎಂ ಆಗಿದ್ದಾಗ ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವುದು. ಸತ್ಯ ಹೀಗಿರುವಾಗ ಕೆಲವರು ನನ್ನ ಹೇಳಿಕೆ ತಿರುಚಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಅವರು ಕಿಡಿಕಾರಿದರು.

ಇನ್ನು ಸ್ಪಷ್ಟವಾಗಿ ಹೇಳುವುದಾದರೆ, ಈ ರಾಜ್ಯದಲ್ಲಿ ಬ್ರಾಹ್ಮಣ ಸಿಎಂ ಅಗಲಿ. ಬೇಡ ಎಂದವರು ಯಾರು? ನನ್ನ ಸಹಮತವೂ ಇದೆ. ನಾನು ಸಹ ಬೆಂಬಲ ಕೊಡುವೆ. ಆದರೆ ಕರ್ನಾಟಕದ ಮೇಲೆ ದಾಳಿ ನಡೆಸಿ ಕನ್ನಡ ಪರಂಪರೆ, ಸಂಸ್ಕೃತಿಯ ಮೇಲೆ ದಾಳಿ ನಡೆಸಿದ ಪೇಶ್ವೆಗಳ ಡಿ ಎನ್ ಎ ಹೊಂದಿರುವ ವ್ಯಕ್ತಿ ಸಿಎಂ ಆಗಬೇಕಾ ಎನ್ನುವ ಪ್ರಶ್ನೆ ನನ್ನದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಪಠ್ಯ ಪುಸ್ತಕ ತಿರುಚಿದರು. ಆಚಾರ ವಿಚಾರಕ್ಕೆ ಕೊಳ್ಳಿ ಇಟ್ಟರು. ಟಿಪ್ಪು ಬಗ್ಗೆ ಪ್ರಸ್ತಾಪ ಮಾಡಿ ಜನರ ಮನಸ್ಸು ಕೆಡಿಸಿದರು. ಸಮಾಜದಲ್ಲಿ ಕಲುಷಿತ ವಾತಾವರಣ ನಿರ್ಮಾಣ ಮಾಡಿದರು. ಆ ಕಾರಣಕ್ಕಾಗಿ ನಾನು ಕೆಲ ವ್ಯಕ್ತಿಗಳ ಬಗ್ಗೆ ಎಚ್ಚರಿಕೆಯಿಂದ ಇರಿ ಅಂತ ಹೇಳಿದೆ ಎಂದ ಅವರು; ಶೃಂಗೇರಿ ಚಂದ್ರಮೌಳೇಶ್ವರ ದೇವಾಲಯ ಒಡೆದವರು ಯಾರು ಗಾಂಧೀಜಿ ಅವರನ್ನು ಕೊಂದವರು ಯಾರು? ಅವರೆಲ್ಲ ಪೇಶ್ವೆ ವಂಶದವರು ಅಂತ ಹೇಳಿದ್ದೆ. ಇಂತಹವರನ್ನು ಸಿಎಂ ಮಾಡುವ ಹುನ್ನಾರ ನಡೆದಿದೆ ಅಂತ ಹೇಳಿದ್ದೆ ಎಂದರು.


ಪೇಶ್ವೆ ಬ್ರಾಹ್ಮಣರದು ಸರ್ವನಾಶೋ ಭವಂತು:
ನಮ್ಮ ಬ್ರಾಹ್ಮಣ ಸರ್ವೇ ಜನ ಸುಖಿನೋ ಭವಂತು ಎಂದು ಹರಸುತ್ತಾರೆ. ಆದರೆ ಪೇಶ್ವೆ ಬ್ರಾಹ್ಮಣರು ಸರ್ವನಾಶೋ ಭವಂತು ಎಂದು ಶಪಿಸುತ್ತಾರೆ. ನಮ್ಮದು ಕುವೆಂಪು ಹೇಳಿದಂತಹ ಸರ್ವ ಜನಾಂಗದ ತೋಟ ಎಂದು ಕುಮಾರಸ್ವಾಮಿ ಅವರು ಹೇಳಿದರು.