ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಯಾರು ?

Prasthutha|

- Advertisement -

ನವದೆಹಲಿ:  NDA ರಾಷ್ಟ್ರಪತಿ ಅಭ್ಯರ್ಥಿಯಾಗಿ ದ್ರೌಪದಿ ‌ಮುರ್ಮು ಹೆಸರನ್ನು ‌ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಘೋಷಿಸಿದ್ದಾರೆ. ಈ ಮಧ್ಯೆ ದ್ರೌಪದಿ ಮುರ್ಮು ಯಾರು ಎಂದು ಕುತೂಹಲ ಹೆಚ್ಚಾಗಿದೆ.

ಮುಂದಿನ ರಾಷ್ಟ್ರಪತಿ ಹುದ್ದೆಗೆ ಬಿಜೆಪಿ ನೇತೃತ್ವದ ಎನ್‌ ಡಿಎ, ಜಾರ್ಖಂಡ್‌ ನ ಮಾಜಿ ರಾಜ್ಯಪಾಲೆ, ಒಡಿಶಾ ಮೂಲದ ಆದಿವಾಸಿ ಮಹಿಳೆ ಮುರ್ಮು ಅವರನ್ನು ಆಯ್ಕೆ ಮಾಡಿದೆ.

- Advertisement -

ಬಿಜೆಪಿಯ ಸಿದ್ಧಾಂತಗಳಿಗೆ ಸರಿಯಾಗಿ ಒಗ್ಗುವ ಮಹಿಳೆ ಎನಿಸಿಕೊಂಡಿರುವ ದ್ರೌಪದಿ, ಪ್ರಸಿದ್ಧ ಬುಡಕಟ್ಟು ನಾಯಕಿ ಮಾತ್ರವಲ್ಲದೆ ಸಮರ್ಥ ಆಡಳಿತಗಾರರೂ ಆಗಿದ್ದಾರೆ, ಇದನ್ನು ಅವರು ಜಾರ್ಖಂಡ್‌ ನ ರಾಜ್ಯಪಾಲರಾಗಿ ಅಧಿಕಾರಾವಧಿಯಲ್ಲಿ ಸಾಬೀತುಪಡಿಸಿದ್ದಾರೆ. ಜಾರ್ಖಂಡ್ ರಾಜ್ಯದ ಮೊದಲ ಮಹಿಳಾ ರಾಜ್ಯಪಾಲೆ ಎನಿಸಿಕೊಂಡಿದ್ದರು.

ದ್ರೌಪದಿ ಮುರ್ಮುಗೆ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿಯ ಬೆಂಬಲವೂ ಇದೆ. ಒಡಿಶಾದಲ್ಲಿ ಬಿಜೆಡಿ ಹಾಗೂ ಬಿಜೆಪಿ ಸಹಯೋಗದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದ ಸಮಯದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದ ದ್ರೌಪದಿ ಮುರ್ಮು, ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರೊಂದಿಗೆ ಉತ್ತಮ ಸ್ನೇಹವನ್ನೂ ಹೊಂದಿದ್ದಾರೆ. ಇದರಿಂದಾಗಿ ಮುಂದಿನ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ದ್ರೌಪದಿ ಮುರ್ಮು ಜನಿಸಿದ್ದು 1958ರ ಜೂನ್ 20 ರಂದು. 64 ವರ್ಷದ ಮುರ್ಮು ಅವರು ಜಾರ್ಖಂಡ್ ರಾಜ್ಯದ 9ನೇ ರಾಜ್ಯಪಾಲೆಯಾಗಿ ಸೇವೆ ಸಲ್ಲಿಸಿದ್ದರು.

ಮುರ್ಮು ಬಿಜೆಪಿಯ ಪ್ರಮುಖ ನಾಯಕರಾಗಿ ಸಾಕಷ್ಟು ಜನಪ್ರಿಯರಾಗಿದ್ದಾರೆ. ದ್ರೌಪದಿ ಮುರ್ಮು ರಾಷ್ಟ್ರಪತಿಯಾಗಲು ಯಶಸ್ವಿಯಾದಲ್ಲಿ, ದೇಶದ ಉನ್ನತ ಸಾಂವಿಧಾನಿಕ ಹುದ್ದೆಗೇರಿದ 2ನೇ ಮಹಿಳೆ, ಮೊದಲ ಒಡಿಶಾ ಹಾಗೂ ಬುಡಕಟ್ಟು ಪ್ರಜೆ ಎನಿಸಲಿದ್ದಾರೆ.

Join Whatsapp