ಬೆಡ್ ಬ್ಲಾಕಿಂಗ್ ದಂಧೆಗೆ ಕಡಿವಾಣ ಹಾಕಿದ್ದ ವಾರ್ ರೂಮ್ ನ IAS ಅಧಿಕಾರಿ ಮೇಲೆ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಬೆಂಬಲಿಗರಿಂದ ಹಲ್ಲೆ !

Prasthutha|

►ತಮ್ಮ ದಂಧೆ ಬಹಿರಂಗವಾಗದಂತೆ ತೇಜಸ್ವಿ ಸೂರ್ಯ ಜೊತೆ ದಾಳಿಯ ನಾಟಕವಾಡಿದ್ರಾ ಶಾಸಕರು ?

ಬೆಂಗಳೂರು : ಇತ್ತೀಚೆಗೆ ಸಂಸದ ತೇಜಸ್ವಿ ಸೂರ್ಯ ಅವರ ವಿವಾದಾತ್ಮಕ ಬೆಡ್ ಬ್ಲಾಕಿಂಗ್ ದಂಧೆಗೆ ಕಡಿವಾಣ ಹಾಕುವ ‘ಹಠಾತ್ ದಾಳಿ’ಯ ತಂಡದಲ್ಲಿದ್ದ ಶಾಸಕ ಸತೀಶ್ ರೆಡ್ಡಿ ಇದೀಗ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಶಾಸಕರ ಬೆಂಬಲಿಗರು ಕೆಲ ದಿನಗಳ ಹಿಂದೆ ಬೆಂಗಳೂರಿನ ಬೊಮ್ಮನಹಳ್ಳಿ ವಲಯದ ಕೋವಿಡ್ ವಾರ್ ರೂಮಿಗೆ ತೆರಳಿ ತಮ್ಮ ಬೆಡ್ ಬ್ಲಾಕಿಂಗ್ ದಂಧೆಗೆ ತಡೆ ಹಾಕಿದ್ದ ಐಎಎಸ್ ಅಧಿಕಾರಿಯೊಬ್ಬರ ಮೇಲೆ ಶಾಸಕರೆದುರಲ್ಲೇ ಹಲ್ಲೆ ನಡೆಸಿದ ಘಟನೆ ನಡೆದಿದೆ. ಇದರ ವೀಡೀಯೋ ಇದೀಗ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ಈ ಘಟನೆ ಎಪ್ರಿಲ್ 30 ರಂದು ನಡೆದಿದೆ ಎನ್ನಲಾಗಿದೆ.

- Advertisement -

ಬೊಮ್ಮನಹಳ್ಳಿಯ ವಲಯದ ಹೆಚ್ ಎಸ್ ಆರ್ ಕೋವಿಡ್ ವಾರ್ ರೂಮಿಗೆ IAS ಅಧಿಕಾರಿಯೊಬ್ಬರು ತೆರಳಿ ಪರಿಶೀಲನೆ ನಡೆಸಿದಾಗ ಶಾಸಕರ ಬೆಂಬಲಿಗರು ನಡೆಸುತ್ತಿದ್ದ ಬೆಡ್ ಬ್ಲಾಕಿಂಗ್ ದಂಧೆ ಬೆಳಕಿಗೆ ಬಂದಿತ್ತು ಎನ್ನಲಾಗಿದೆ. ಶಾಸಕರ ಬೆಂಬಲಿಗರು ವಾರ್ ರೂಮಿನಲ್ಲೇ ಬೀಡು ಬಿಟ್ಟು ಬೆಡ್ ಗಳು ಖಾಲಿಯಾಗುತ್ತಿದ್ದಂತೆಯೇ ಅಕ್ರಮವಾಗಿ ಬೆಡ್ ಬುಕಿಂಗ್ ಮಾಡುತ್ತಿದ್ದರು. IAS ಅಧಿಕಾರಿಗಳು ಪರಿಶೀಲನೆಗೆಂದು ತೆರಳಿದಾಗ ಅನಧಿಕೃತ ವ್ಯಕ್ತಿಯೊಬ್ಬ ವಾರ್ ರೂಮಿನಲ್ಲಿ ಮಾಸ್ಕ್ ಧರಿಸದೆ ಪಾಲಿಕೆಯ ಐಡಿ ಕಾರ್ಡ್ ಬಳಸಿ ಡೇಟಾ ಎಂಟ್ರಿ ಅಪರೇಟರ್ ಗಳ ಬಳಿ ಕುಳಿತು ಬೆಡ್ ಗಳನ್ನು ಅಕ್ರಮವಾಗಿ ಬುಕ್ ಮಾಡುತ್ತಿರುವುದು ಕಂಡು ಬಂದಿತ್ತು. ಆತ ಯಾರೆಂದು ಪ್ರಶ್ನಿಸಿದಾಗ ಮೊದಲು ಆಂಬ್ಯುಲನ್ಸ್ ಡ್ರೈವರ್ ಎಂದು ಸುಳ್ಳು ಹೇಳಿದ್ದು, ಆದರೆ ಆ ಬಳಿಕ ಆತ ಶಾಸಕ ಸತೀಶ್ ರೆಡ್ಡಿಯ ಬೆಂಬಲಿಗ ಬಾಬು ಎಂದು ತಿಳಿದು ಬಂದಿತ್ತು. ಘಟನೆ ನಡೆದ ಬಳಿಕ ಐಎಎಸ್ ಅಧಿಕಾರಿಗಳು ಈ ಅಕ್ರಮಗಳಿಗೆ ಕೂಡಲೇ ಕಡಿವಾಣ ಹಾಕುವ ಯೋಜನೆ ರೂಪಿಸಿದ್ದರು. ಇದು ಶಾಸಕರ ಕೆಂಗಣ್ಣಿಗೆ ಗುರಿಯಾಗಿತ್ತು ಎನ್ನಲಾಗಿದೆ.

ಈ ಘಟನೆಯ ಮರುದಿನ ಅಂದರೆ ಎಪ್ರಿಲ್ 30ರಂದು ಶಾಸಕ ಸತೀಶ್ ರೆಡ್ಡಿ ಮತ್ತು ಅವರ ಐವತ್ತಕ್ಕೂ ಮಿಕ್ಕ ಬೆಂಬಲಿಗರು ಹೆಚ್ ಎಸ್ ಆರ್ ಬಡಾವಣೆಯ ಬಿಡಿಎ ಕಾಂಪ್ಲೆಕ್ಸ್ ನಲ್ಲಿರುವ ವಾರ್ ರೂಮಿಗೆ ಬಂದು ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದ್ದಾರೆ. ಶಾಸಕರ PA ಆಗಿರುವ ಹರೀಶ್, ಮಹಿಳಾ ಮೋರ್ಚಾದ ಮಹೇಶ್ವರಿ, ರಮೇಶ್ , ಮಂಜುನಾಥ್ ಮತ್ತಿತರರು ಅಲ್ಲಿನ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದರು. ಇದರ ವೀಡಿಯೋ ದೃಶ್ಯಗಳು ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಶಾಸಕ ಸತೀಶ್ ರೆಡ್ಡಿ ಅಲ್ಲೇ ಇದ್ದರೂ ಇದನ್ನು ತಡೆದಿರಲಿಲ್ಲ. ಹಲ್ಲೆ ನಡೆಸುವವರ ಮೇಲೆ ಎಫ್ ಐ ಆರ್ ದಾಖಲಿಸಿ ಎಂದು ಐ ಎ ಎಸ್ ಅಧಿಕಾರಿ ಅಲ್ಲಿದ್ದ ಪೊಲೀಸ್ ಇನ್ಸ್ಪೆಕ್ಟರ್ ಅವರಲ್ಲಿ ಹೇಳಿದಾಗ, ಕೆರಳಿದ ಸತೀಶ್ ರೆಡ್ಡಿ, “ಯಾರ ಮೇಲೆ ಎಫ್ ಐ ಆರ್ ದಾಖಲಿಸುತ್ತೀರಾ? ನನ್ನ ಮೇಲೆಯೇ ಕೇಸ್ ಹಾಕಿ, ನೋಡಿಕೊಳ್ಳುತ್ತೇನೆ” ಎಂದು ಅವಾಜ್ ಹಾಕಿದ್ದರು.

ಬಿಜೆಪಿ ಶಾಸಕ ಸತೀಶ್ ರೆಡ್ಡಿ ತನ್ನ ಬೆಂಬಲಿಗರ ಅಕ್ರಮ ದಂಧೆಗೆ ಕಡಿವಾಣ ಬಿದ್ದ ಬಳಿಕ ಬೆಡ್ ಬ್ಲಾಕಿಂಗ್ ದಂಧೆಯನ್ನು ತಡೆಯುವವರಂತೆ ಬೆಂಗಳೂರು ದಕ್ಷಿಣದಲ್ಲಿರುವ ವಾರ್ ರೂಮಿಗೆ ಸಂಸದ ತೇಜಸ್ವಿ ಸೂರ್ಯರ ಅವರೊಂದಿಗೆ ತೆರಳಿದ್ದರು. ಅದು ವಿವಾದಕ್ಕೆ ಕಾರಣವಾಗಿತ್ತು. ಮಾತ್ರವಲ್ಲ ಈ ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಸತೀಶ್ ರೆಡ್ಡಿಯವರೇ ಭಾಗಿಯಾಗಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು. ತೇಜಸ್ವಿ ಸೂರ್ಯ ಘಟನೆ ಈಗ ಬಿಜೆಪಿಗೆ ಉರುಳಾಗಿ ಪರಿಣಮಿಸಿದೆ.

- Advertisement -