ವಿಧಾನಪರಿಷತ್ ಚುನಾವಣೆ ಫಲಿತಾಂಶ ಬಿಜೆಪಿಗೆ ಗರ್ವಭಂಗ, ಜೆಡಿಎಸ್ ಗೆ ಮುಖಭಂಗ: ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ

Prasthutha|

ಬೆಂಗಳೂರು: ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಪರಿಷತ್ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವುದಿಲ್ಲ ಎಂದು ಗರ್ವದಿಂದ ಮಾತನಾಡುತ್ತಿದ್ದ ಬಿಜೆಪಿಗೆ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಗರ್ವಭಂಗ ತಂದಿದೆ. ಇನ್ನು ಹಳೇ ಮೈಸೂರು ಭಾಗ ನಮ್ಮದು ಎಂದು ಬೀಗುತ್ತಿದ್ದ ಜೆಡಿಎಸ್ ಗೆ ಮುಖಭಂಗವಾಗಿದೆ’ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್ ಅಭಿಪ್ರಾಯಪಟ್ಟಿದ್ದಾರೆ.

- Advertisement -

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್ ಅವರು ಪತ್ರಿಕಾಗೋಷ್ಠಿ ನಡೆಸಿದರು. ಈ ಸಂದರ್ಭದಲ್ಲಿ ಮಾಜಿ ಸಂಸದರಾದ ಚಂದ್ರಪ್ಪ ಅವರು, ವಿಧಾನಪರಿಷತ್ ಮಾಜಿ ಸದಸ್ಯರಾದ ಆರ್ ವಿ ವೆಂಕಟೇಶ್, ಎಐಸಿಸಿ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವ ಸೂರಜ್ ಹೆಗಡೆ, ಕೆಪಿಸಿಸಿ ಮಾಧ್ಯಮ ವಿಭಾಗದ ಸಹ ಸಂಚಾಲಕರಾದ ರಾಮಚಂದ್ರಪ್ಪ ಅವರು ಉಪಸ್ಥಿತರಿದ್ದರು.

‘ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್, ಇತರೆ ಪಕ್ಷಗಳಿಗಿಂತ ಹೆಚ್ಚಿನ ಪ್ರಮಾಣದ ಮತಗಳನ್ನು ಪಡೆದಿದೆ. ಕಾಂಗ್ರೆಸ್ ಗೆ 44,225 ಮತಗಳನ್ನು ಪಡೆದರೆ, ಬಿಜೆಪಿ 37,283 ಹಾಗೂ ಜೆಡಿಎಸ್ 10,249 ಪಡೆದಿದೆ. ಹೀಗಾಗಿ ಎಲ್ಲ ಮತದಾರರಿಗೆ ಕೆಪಿಸಿಸಿ ವತಿಯಿಂದ ಕೃತಜ್ಞತೆ ಸಲ್ಲಿಸುತ್ತೇನೆ. ಗ್ರಾಮಪಂಚಾಯ್ತಿ ಚುನಾವಣೆ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಕಾಂಗ್ರೆಸ್ ಪಕ್ಷಕ್ಕಿಂತ ಬಿಜೆಪಿ 45 ಸಾವಿರ ಮತಗಳನ್ನು ಹೆಚ್ಚಾಗಿ ಪಡೆದಿದೆ ಎಂದು ಹೇಳಿದ್ದರು. ಆದರೆ ಈ ಚುನಾವಣೆ ಅವರ ಹೇಳಿಕೆ ಸುಳ್ಳು ಎಂದು ಸಾಬೀತಾಗಿದೆ ಎಂದರು.

- Advertisement -

ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ನೆಲೆಗಳಲ್ಲಿ ನಮಗೆ ಹೆಚ್ಚಿನ ಬೆಂಬಲ ಸಿಕ್ಕಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಬೆಳಗಾವಿಯಲ್ಲಿ ಇಬ್ಬರು ಬಿಜೆಪಿ ಸಂಸದರಿದ್ದರೂ, 11 ಶಾಸಕರಿದ್ದರೂ ಕಾಂಗ್ರೆಸ್ 1286 ಮತಗಳ ಅಂತರದಲ್ಲಿ ಗೆದ್ದಿದ್ದೇವೆ. ಹುಬ್ಬಳ್ಳಿ, ಧಾರವಾಡ, ಹಾವೇರಿ ಭಾಗ ಹಾಲಿ ಮುಖ್ಯಮಂತ್ರಿಗಳು, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಕ್ಷೇತ್ರವಾಗಿದೆ. ಈ ಭಾಗದಲ್ಲಿ ಕಾಂಗ್ರೆಸ್ ನ ಕೇವಲ 3 ಶಾಸಕರು ಮಾತ್ರ ಇದ್ದಾರೆ. ಆದರೂ ಕಾಂಗ್ರೆಸ್ ಅಲ್ಪಸಂಖ್ಯಾತ ಅಭ್ಯರ್ಥಿ ಸಲೀಂ ಅಹ್ಮದ್ ಅವರು 837 ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಇನ್ನು ಬಿಜಾಪುರದ ಎರಡು ಕ್ಷೇತ್ರಗಳ ಪೈಕಿ ನಮ್ಮ ಸುನೀಲ್ ಪಾಟೀಲ್ ಅವರು 1026 ಮತಗಳಿಂದ ಗೆದ್ದಿದ್ದಾರೆ. ಇನ್ನು ದಕ್ಷಿಣ ಕನ್ನಡದಲ್ಲಿ ಶ್ರೀನಿವಾಸ ಪೂಜಾರಿ ಅವರ ವೈಯಕ್ತಿಕ ವರ್ಚಸ್ಸಿನ ಆಧಾರದ ಮೇಲೆ ಅವರು ಗೆದ್ದಿದ್ದಾರೆ. ಉತ್ತರ ಕರ್ನಾಟಕದಲ್ಲಿ ವೀರಶೈವ ಸಮಾಜ ಹೆಚ್ಚಾಗಿದೆ. ಹೀಗಾಗಿ ಇದು ಬಿಜೆಪಿ ನೆಲೆ ಎಂಬ ಭಾವನೆ ಇತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಹಿಂದ ಜತೆಗೆ ಮುಂದುವರಿದ ಸಮಾಜಗಳ ಬೆಂಬಲವಿದೆ ಎಂಬುದು ಸಾಬೀತಾಗಿದೆ ಎಂದರು.

‘ಇನ್ನು ಹಳೇ ಮೈಸೂರು ಭಾಗ ನೋಡಿದರೆ, ಮಂಡ್ಯದಲ್ಲಿ 6 ಜೆಡಿಎಸ್ 1 ಬಿಜೆಪಿ ಶಾಸಕರಿದ್ದರೂ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ. ಇನ್ನು ತುಮಕೂರು ಕೂಡ ಜೆಡಿಎಸ್ ಶಾಸಕರಿದ್ದರೂ ನಮ್ಮ ಅಭ್ಯರ್ಥಿ ಗೆದ್ದಿದ್ದಾರೆ. ಮೈಸೂರಿನಲ್ಲಿ ಕಾಂಗ್ರೆಸ್ ನ ಎರಡನೇ ಆದ್ಯತೆ ಮತಗಳು ಬಿದ್ದಿರುವ ಕಾರಣ ಜೆಡಿಎಸ್ ಗೆದ್ದಿದೆ. ಕೋಲಾರದಲ್ಲೂ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ. ಒಕ್ಕಲಿಗರ ಪ್ರಾಬಲ್ಯವಿರುವ ಹಳೇ ಮೈಸೂರು ಭಾಗದಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. 1989ರಲ್ಲಿ ವಿರೇಂದ್ರ ಪಾಟೀಲ್ ಅವರು 1999ರಲ್ಲಿ ಕೃಷ್ಣ ಅವರು ಕಾಂಗ್ರೆಸ್ ಪರ ಅಲೆ ತಂದ ರೀತಿ, ಈಗ ಕಾಂಗ್ರೆಸ್ ಪರವಾಗಿ ಬದಲಾವಣೆ ಪರ್ವ ಆರಂಭವಾಗಿದೆ. ಚುನಾವಣೆಗೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಹೆಚ್ಚು ಸ್ಥಾನ ಗೆಲ್ಲುವುದಿಲ್ಲ ಎಂದೆಲ್ಲ ಹೇಳಿಕೆ ಕೊಟ್ಟರು. ಆದರೆ ಚುನಾವಣೆ ಫಲಿತಾಂಶ ಬಂದ ನಂತರ ಬಾಯಿ ಬಿಟ್ಟಿಲ್ಲ. ಬಹಳ ಗರ್ವದಿಂದ  ಮಾತನಾಡುತ್ತಿದ್ದ ಬಿಜೆಪಿಯವರಿಗೆ ಈ ಚುನಾವಣೆ ಫಲಿತಾಂಶ ಗರ್ವಭಂಗ ತಂದರೆ, ಜೆಡಿಎಸ್ ಗೆ ಮುಖಭಂಗವಾಗಿದೆ’ ಎಂದು ತಿಳಿಸಿದರು.

ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಿಸಬೇಕು ಎಂದು ಮುಖ್ಯಮಂತ್ರಿಗಳು ಹಾಗೂ ಮಂತ್ರಿಗಳಾದಿಯಾಗಿ ಪ್ರವಾಸ ಮಾಡಿದ್ದರು. ಆದರೂ ಕಾಂಗ್ರೆಸ್ ಗೆ ಹೆಚ್ಚಿನ ಮತ ಬಂದಿದೆ. ಇನ್ನು ಇದೊಂದು ಅವಲಂಬಿತ ಸರ್ಕಾರ. ಇದು ತನ್ನ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್ ಕಮಲ ಮಾಡಿಕೊಂಡು ಅಧಿಕಾರಕ್ಕೆ ಬಂದಿದೆ. ಹೀಗಾಗಿ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವೈಫಲ್ಯದಿಂದ ಚುನಾಯಿತ ಪ್ರತಿನಿಧಿಗಳು ನಮಗೆ ಹೆಚ್ಚಿನ ಮತ ನೀಡಿದ್ದಾರೆ. ನಮ್ಮ ಆದ್ಯತೆ ಅಭಿವೃದ್ಧಿ. ನಾವು ದೇವಸ್ಥಾನ ತೋರಿಸಿ ರಾಜಕಾರಣ ಮಾಡುವುದಿಲ್ಲ. ಕುವೆಂಪು ಅವರ ಕೃತಿಯನ್ನು ಹೇಳಬಯಸುತ್ತೇನೆ. ‘ಓ ಬನ್ನಿ ಸೋದರರೆ, ಬೇಗ ಬನ್ನಿ, ಗುಡಿ ಚರ್ಚ್ ಮಸೀದಿಗಳ ಬಿಟ್ಟು ಹೊರಬನ್ನಿ ಬಡತನ ಬುಡಮಟ್ಟವ ಕೀಳುಬನ್ನಿ, ಮತವೆಂಬ ಮೋಹದ ಜ್ಞಾನಕ್ಕೆ ಮತಿಯಿಂದ ದುಡಿಯಿರೈ ಲೋಕ ಹಿತಕ್ಕೆ. ಆ ಮತ, ಈಮತ, ಹಳೆ ಮತ, ಸಹವಾಸ ಸಾಕಿನ್ನು ಸೇರಿರೈ ಮನುಜ ಮತಕ್ಕೆ, ಓ ಬನ್ನಿ ಸೋದರರೆ, ವಿಶ್ವಪತಕ್ಕೆ’ ಎಂದು ಹೇಳಿದ್ದಾರೆ. ಅಂದರೆ ಬಡತನದ ಹಸಿವನ್ನು ನೀಗಿಸಿ ಅವರ ನಗುಮುಖದಲ್ಲಿ ನಾವು ದೇವರನ್ನು ಕಾಣಬಹುದು ಎಂಬ ನಂಬಿಕೆ ಇಟ್ಟುಕೊಂಡಿರುವುದು ಕಾಂಗ್ರೆಸ್ ಪಕ್ಷ’ ಎಂದರು.

ಪಕ್ಷದ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹಾಗೂ ಪಕ್ಷದ ಎಲ್ಲ ನಾಯಕರ ಸಂಘಟಿತ ಹೋರಾಟದ ಪ್ರತಿಫಲ ಈ ಚುನಾವಣೆಯಲ್ಲಿ ಹೆಚ್ಚು ಮತ ಪಡೆಯಲು ಸಾಧ್ಯ ಆಗಿದೆ’ ಎಂದರು.

Join Whatsapp