ಮಂಗಳೂರು: ಲಾಠಿ ಚಾರ್ಜ್ ಖಂಡಿಸಿ PFI ನಿಂದ ಎಸ್ಪಿ ಚಲೋ ಆರಂಭ: ಹರಿದು ಬಂದ ಜನಸ್ತೋಮ
Prasthutha: December 17, 2021

ಮಂಗಳೂರು: ಉಪ್ಪಿನಂಗಡಿಯಲ್ಲಿ ನಡೆದ ಹಿಂಸಾಚಾರ- ಲಾಠಿ ಚಾರ್ಜ್ ಖಂಡಿಸಿ ಪಿಎಫ್ ಐ ಕರೆ ನೀಡಿದ್ದ ಎಸ್ಪಿ ಚಲೋ ಮಂಗಳೂರಿನ ಕ್ಲಾಕ್ ಟವರ್ ಬಳಿಯಿಂದ ಆರಂಭಗೊಂಡು ಎಸ್.ಪಿ.ಕಚೇರಿಗೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ಪೊಲೀಸರು ಬ್ಯಾರಿ ಕೇಡ್ ಗಳನ್ನು ಇಟ್ಟು ತಡೆದರು. ಇದರಿಂದ ಪ್ರತಿಭಟನಕಾರರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ಆರಂಭಿಸಿ, ಘೋಷಣೆ ಕೂಗಿದರು.
ಜಿಲ್ಲೆಯ ಮೂಲೆಮೂಲೆಗಳಿಂದ ನೂರಾರು ಸಂಖ್ಯೆಯಲ್ಲಿ ಪ್ರತಿಭಟನಕಾರರು ಮಂಗಳೂರಿಗೆ ಆಗಮಿಸಿದ್ದು, ಪ್ರತಿಭಟನೆಯ ಕಾವು ಹೆಚ್ಚಾಗಿದೆ.
ಎಸ್.ಪಿ.ಕಚೇರಿ ಚಲೋ ಹಿನ್ನೆಲೆಯಲ್ಲಿ ಮಂಗಳೂರು ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು,ಡಿಸಿಪಿ ಹರಿರಾಂ ಶಂಕರ್ ನೇತೃತ್ವದಲ್ಲಿ ಮಂಗಳೂರು ನಗರದ ಹಂಪನಕಟ್ಟೆ, ಕ್ಲಾಕ್ ಟವರ್ , ಸ್ಟೇಟ್ ಬ್ಯಾಂಕ್ ಪ್ರದೇಶಗಳಲ್ಲಿ ಖಾಕಿ ಸರ್ಪಗಾವಲು ಹಾಕಲಾಗಿದೆ.
ಹಂಪನ ಕಟ್ಟೆ ಮತ್ತು ಸುತ್ತಮುತ್ತಲ ಪ್ರಮುಖ ರಸ್ತೆಗಳನ್ನು ಪೊಲೀಸರು ತಾತ್ಕಾಲಿಕವಾಗಿ ಮುಚ್ಚಿದ್ದಾರೆ. ಕೇವಲ ಸಭೆ ನಡೆಸಲು ಕ್ಲಾಕ್ ಟವರ್ ಬಳಿ ಅನುಮತಿ ನೀಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಎನ್ ಶಶಿ ಕುಮಾರ್ ಸ್ಪಷ್ಟಪಡಿಸಿದ್ದಾರೆ.
