ಅತ್ಯಾಚಾರಿಗಳೇ ತುಂಬಿರುವ ಬಿಜೆಪಿಯಿಂದ ಇನ್ನೆಂತಹ ಹೇಳಿಕೆ ನಿರೀಕ್ಷಿಸಲಾದೀತು!: ಗೃಹ ಸಚಿವರ ಹೇಳಿಕೆಗೆ ಕಾಂಗ್ರೆಸ್ ಕಿಡಿ

Prasthutha|

ಬೆಂಗಳೂರು: ರೇಪ್ ಮಾಡುವುದೇನಿದ್ದರೂ ಬಿಜೆಪಿಯ ಸಂಸ್ಕೃತಿಯೇ ಹೊರತು ಕಾಂಗ್ರೆಸ್ನದ್ದಲ್ಲ ಗೃಹಸಚಿವರೇ. ಕಳೆದ ಬಾರಿಯ ಅಧಿಕಾರಾವಧಿಯಲ್ಲಿ ನಿಮ್ಮ ಶಾಸಕರೊಬ್ಬರು ಅತ್ಯಾಚಾರವೆಸಗಿದ್ದರು. ಈ ಬಾರಿ ನಿಮ್ಮ ಮಾಜಿ ಸಚಿವರೊಬ್ಬರು ಉದ್ಯೋಗ ಕೇಳಿದ ಯುವತಿಯನ್ನು ಅತ್ಯಾಚಾರವೆಸಗಿದ್ದರು. ಅತ್ಯಾಚಾರಿಗಳೇ ತುಂಬಿರುವ ಬಿಜೆಪಿಯಿಂದ ಇನ್ನೆಂತಹ ಹೇಳಿಕೆ ನಿರೀಕ್ಷಿಸಲಾದೀತು ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.


ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಕಾಂಗ್ರೆಸ್ನವರು ನನ್ನನ್ನು ರೇಪ್ ಮಾಡುತ್ತಿದ್ದಾರೆ ಎಂಬ ಗೃಹ ಸಚಿವರ ಹೇಳಿಕೆಯಿಂದ ಅವರ ಅಸಹಾಯಕತೆ, ಅದಕ್ಷತೆ, ಅಯೋಗ್ಯತನ ಹಾಗೂ ವೈಫಲ್ಯವನ್ನು ಒಪ್ಪಿಕೊಂಡಂತಿದೆ. ಮಂತ್ರಿ ಸ್ಥಾನ ಪಡೆಯಲು ಲಾಭಿ ನಡೆಸುವುದಷ್ಟೇ ಅಲ್ಲ ಸ್ವಾಮಿ, ಪಡೆದ ಖಾತೆಯನ್ನು ಸಮರ್ಥವಾಗಿ ನಿಭಾಯಿಸುವ ಯೋಗ್ಯತೆಯೂ ಇರಬೇಕು. ಅನರ್ಹರು ಅಳಲು ಬಂದರೆ ಹೀಗೆಯೇ ನಡೆದುಕೊಳ್ಳುತ್ತಾರೆ ಎಂದು ಕುಟುಕಿದೆ.

- Advertisement -


ಹಾಡಹಗಲೇ ಬಂದೂಕು ತಂದು ಗುಂಡು ಹಾರಿಸುವುದು – ಸರಿ, ಸಂಜೆ 7.30ರ ಹೊತ್ತಿನಲ್ಲಿ ಪ್ರವಾಸಿ ತಾಣಕ್ಕೆ ಹೆಣ್ಣು ಮಕ್ಕಳು ಹೋಗುವುದು – ತಪ್ಪು, ಇದು ಬಿಜೆಪಿ ನಂಬಿರುವ ಹಾಗೂ ಅನುಸರಿಸುತ್ತಿರುವ ತಾಲಿಬಾನ್ ಸಂಸ್ಕೃತಿ. ಗೃಹಸಚಿವರು ಅತ್ಯಾಚಾರಿಗಳಿಗೆ, ಸಮಾಜಘಾತುಕರಿಗೆ ಧೈರ್ಯ ತುಂಬುವ ಮಾತಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಹರಿಹಾಯ್ದಿದೆ.
ರಾತ್ರಿ 7.30ರ ಸಮಯದಲ್ಲಿ ಅವರು ಅಲ್ಲಿಗೆ ಹೋಗಲೇಬಾರದಿತ್ತು! ರಾಜ್ಯದ ರಕ್ಷಣೆ ಹೊತ್ತ ಗೃಹಸಚಿವರೇ, ಇಂತಹ ಅಯೋಗ್ಯತನದ ಹೇಳಿಕೆ ಕೊಡಲು ನಾಚಿಕೆ ಆಗುವುದಿಲ್ಲವೇ?, ಬಿಜೆಪಿ ಆಡಳಿತದಲ್ಲಿ ರಾಜ್ಯದಲ್ಲಿ 7.30ರ ಸಂಜೆಯೂ ಅಪಾಯಕಾರಿ ಎಂದು ಸ್ವತಃ ಅವರೇ ಒಪ್ಪಿದ್ದಾರೆ. ಇಂತಹ ಅಸಮರ್ಥ ಬಿಜೆಪಿಯಿಂದ ರಾಜ್ಯದ ಜನತೆಯ ರಕ್ಷಣೆ ಸಾಧ್ಯವೇ ಇಲ್ಲ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.


ಆಂತರಿಕ ಕಚ್ಚಾಟದಲ್ಲಿರುವ ಸರ್ಕಾರದಿಂದಾದ ಕಾನೂನು ಸುವ್ಯವಸ್ಥೆಯ ವೈಫಲ್ಯವನ್ನು ಹೇಳುವುದು ರಾಜಕೀಯವೇ? ಅತ್ಯಾಚಾರ ಪ್ರಕರಣದಲ್ಲಿ ಕಾಂಗ್ರೆಸ್ ರಾಜಕೀಯ ಮಾಡಬಾರದು ಎನ್ನುವ ಗೃಹಸಚಿವರೇ, ನಂದಿತಾ ಪ್ರಕರಣದಲ್ಲಿ ನೀವು ಮಾಡಿದ ರಾಜಕೀಯದ ಬಗ್ಗೆ ಒಮ್ಮೆ ತಿರುಗಿ ನೋಡಿ, ಇಂಥಹ ಪ್ರಕರಣಗಳಲ್ಲಿ ರಾಜಕೀಯ ಮಾಡುವುದೇ ಈ ಹಿಂದೆ ನಿಮ್ಮ ಕಾಯಕವಾಗಿತ್ತಲ್ಲವೇ? ಎಂದು ತಿರುಗೇಟು ನೀಡಿದೆ.

- Advertisement -