ಪಶ್ಚಿಮ ಬಂಗಾಳ ಚುನಾವಣೆಗೆ ಬಿಜೆಪಿ ತಯಾರಿ ಶುರು । ಕಾಳಿ ವಿಗ್ರಹವನ್ನು ಮುಸ್ಲಿಮರು ಸುಟ್ಟು ಹಾಕಿದರೆಂದ ರಾಜ್ಯ ಬಿಜೆಪಿ ಸಂಸದನ ಟ್ವೀಟ್ !

Prasthutha|

► ವಾಸ್ತವ ಸಂಗತಿ ಬಹಿರಂಗಗೊಳಿಸಿದ ದೇವಾಲಯ ಸಮಿತಿ ಹಾಗೂ ಪೊಲೀಸರು

- Advertisement -

ನವದೆಹಲಿ : ಪಶ್ಚಿಮ ಬಂಗಾಳದ ರಾಜ್ಯ ಚುನಾವಣೆಗೆ ಬಿಜೆಪಿ ಎಂದಿನಂತೆ ಕೋಮುಪ್ರಚೋದಕ ಸುಳ್ಳು ಪ್ರಚಾರಗಳ ಮೂಲಕವೇ ಭರ್ಜರಿ ತಯಾರಿ ಆರಂಭಿಸಿದಂದಂತಿದೆ. ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ನಲ್ಲಿ ಮುಸ್ಲಿಮರು ಕಾಳಿ ದೇವಿಯ ವಿಗ್ರಹವೊಂದಕ್ಕೆ ಬೆಂಕಿ ಹಚ್ಚಿದ್ದಾರೆಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಸಂಸದ ಅರ್ಜುನ್ ಸಿಂಗ್ ಟ್ವೀಟ್ ಮಾಡಿದ್ದರು. ಫ್ಯಾಕ್ಟ್ ಚೆಕ್ ವೆಬ್ ತಾಣವಾಗಿರುವ ‘ಆಲ್ಟ್ ನ್ಯೂಸ್’,  ಇದೊಂದು ಸುಳ್ಳು ಸುದ್ದಿಯಾಗಿದೆ ಮತ್ತು ಅದರ ವಾಸ್ತವ ಸಂಗತಿಗಳನ್ನು ಬಹಿರಂಗಗೊಳಿಸಿದ್ದು, ಎಂದಿನಂತೆ ಬಿಜೆಪಿಯು ಕೋಮು ಸಂಘರ್ಷಗಳ ಮೂಲಕ ಲಾಭ ಪಡೆದು ಅಧಿಕಾರಕ್ಕೇರುವ ಹುನ್ನಾರವನ್ನು ಬಯಲಿಗೆಳೆದಿದೆ.

ಬಿಜೆಪಿ ಸಂಸದ ಕಾಳಿದೇವಿಯ ಸುಟ್ಟ ವಿಗ್ರಹದ ಚಿತ್ರವನ್ನು ಟ್ವಿಟ್ಟರಿನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಸಮಾಜದ್ರೋಹಿಗಳು ಬೆಂಕಿ ಹಚ್ಚಿದ ಕಾಳಿ ಪ್ರತಿಮೆ ಎಂದು ಪೋಸ್ಟ್ ಮಾಡಿದ್ದರು. ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ಅರ್ಜುನ್ ಸಿಂಗ್ ತಮ್ಮ ಟ್ವಿಟ್ಟರ್ ಖಾತೆಯಿಂದ ಸೆಪ್ಟೆಂಬರ್ 1ರಂದು ರಾತ್ರಿ 11.31ಕ್ಕೆ ಟ್ವೀಟ್ ಮಾಡಿದ್ದಾರೆ. ‘ದೀದಿಯವರ ಜಿಹಾದಿ ಶೈಲಿಯ ರಾಜಕೀಯ ಈಗ ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ನಾಶಪಡಿಸುತ್ತಿದೆ. ಒಂದು ವಿಭಾಗವು ದೇವಾಲಯದ ಮೇಲೆ ಹೇಗೆ ದಾಳಿ ಮಾಡಿ ತಾಯಿ ಕಾಳಿಯ ವಿಗ್ರಹವನ್ನು ಸುಟ್ಟುಹಾಕಿದೆ ಎಂಬುದನ್ನು ನೋಡಿ. ಇದು ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಎಂಬ ಜಿಲ್ಲೆಯಲ್ಲಿ ನಡೆದ ಘಟನೆಯಾಗಿದೆ’ ಎಂದು ಟ್ವೀಟ್ ಮಾಡಿದ್ದರು.

- Advertisement -

ಈ ಟ್ವೀಟ್ ಇನ್ನೂ ಸಂಸದರ ಖಾತೆಯಲ್ಲಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ವ್ಯಾಪಕ ಕೋಮುದ್ವೇಷದ ಕಮೆಂಟ್ ಗಳು ಬರುತ್ತಿವೆ. ಆದರೆ ಅರ್ಜುನ್ ಸಿಂಗ್ ರವರ ಟ್ವೀಟ್ ಗೆ ಮುರ್ಶಿದಾಬಾದ್ ಪೊಲೀಸರು ಪ್ರತಿಕ್ರಿಯಿಸಿದ್ದು, “ ಇದು ಯಾವುದೇ ರೀತಿಯ ದಾಳಿಯಲ್ಲ ಬದಲಾಗಿ ಇದೊಂದು ಬೆಂಕಿ ಅವಘಡವಾಗಿದೆ” ಎಂದು ತಿಳಿಸಿದ್ದಾರೆ. ಪೊಲೀಸರು ತನಿಖೆ ನಡೆಸಿ ಸ್ಪಷ್ಟನೆ ನೀಡಿದ್ದಾರೆ ಎಂದು ಟ್ವೀಟ್ ನಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿ ಬೇಕಿದ್ದರೆ ಸಂಸದರು ದೇವಾಲಯ ಸಮಿತಿಯನ್ನು ಸಂಪರ್ಕಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಅದರೊಂದಿಗೆ ದೇವಾಲಯ ಸಮಿತಿಯ ಬಂಗಾಳಿಯಲ್ಲಿ ಬರೆದಿರುವ ಲಿಖಿತ ಹೇಳಿಕೆಯನ್ನೂ ಪೋಲೀಸರು ಟ್ವೀಟ್ ನಲ್ಲಿ ಹಂಚಿದ್ದಾರೆ.

ಅಗಸ್ಟ್ 31ರ ರಾತ್ರಿ ಬೆಂಕಿ ಕಾಣಿಸಿಕೊಂಡಿದೆ ಎಂದು ದೇವಾಲಯ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ. ‘ಇಲ್ಲಿ ವಿವಿಧ ಧರ್ಮದ ಜನರು ಸೌಹಾರ್ದತೆಯಿಂದ ಜೀವಿಸುತ್ತಿದ್ದಾರೆ. ಇಂತಹಾ ಬೆಂಕಿ ಅಪಘಾತ ಸಂಭವಿಸಿದಾಗ ಕೋಮುದ್ವೇಷವನ್ನು ಪ್ರಚೋದಿಸಲು ಪ್ರಯತ್ನಿಸುವುದು ಸರಿಯಲ್ಲ ಎಂದು ದೇವಾಲಯ ಸಮಿತಿ ಹೇಳಿದೆ. ದೇವಾಲಯದಲ್ಲಿ ಏನಾದರೂ ನಾಶ ಮಾಡುವುದೋ ಅಥವಾ ಕಳವು ಮಾಡುವುದೋ ಏನೂ ಸಂಭವಿಸಲಿಲ್ಲ. ಆದರೆ ಇದಕ್ಕೆ ಕೆಲವರು ಕೋಮು ಬಣ್ಣ ಹಚ್ಚಲು ಶ್ರಮಿಸುತ್ತಿದ್ದಾರೆ. ಅದಕ್ಕಾಗಿ ಅಂತಹ ಜನರಲ್ಲಿ ಶಾಂತಿಗೆ ಭಂಗ ಮಾಡಬೇಡಿ ಎಂದು ನಾವು ವಿನಂತಿಸುತ್ತಿದ್ದೇವೆ. ಪೋಲೀಸರು ಮತ್ತು ಅಧಿಕಾರಿಗಳು ನಮ್ಮೊಂದಿಗೆ ಸಹಕರಿಸುತ್ತಿದ್ದಾರೆ’ ಎಂದು ದೇವಾಲಯದ ಸಮಿತಿ ವಿವರಿಸಿದೆ.

ಅರ್ಜುನ್ ಸಿಂಗ್ ರ ಕೋಮುದ್ವೇಷದ ಟ್ವೀಟ್ ನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ, ಇಂತಹಾ ಪ್ರಚೋದನಕಾರಿ ಮತ್ತು ದಾರಿತಪ್ಪಿಸುವಂತಹಾ ಪೋಸ್ಟ್ ಗಳಿಗೆ ನಾವು ಅವಕಾಶ ನೀಡುವುದಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.



Join Whatsapp