ನೋಟ್ ಬ್ಯಾನ್ ನಿಂದ ಅಸಂಘಟಿತ ಅರ್ಥಿಕತೆಯ ನಾಶ: ರಾಹುಲ್ ಗಾಂಧಿ

Prasthutha|

ಆರ್ಥಿಕತೆ ಕುರಿತ ರಾಹುಲ್ ಗಾಂಧಿಯವರ ಮತ್ತೊಂದು ವಿಡಿಯೋ

“ನೋಟ್ ಬ್ಯಾನ್ ಭಾರತದ ಬಡವರು, ರೈತರು, ಕಾರ್ಮಿಕರು ಮತ್ತು ಸಣ್ಣ ಮಳಿಗೆದಾರರ ಮೇಲಿನ ಆಕ್ರಮಣವಾಗಿತ್ತು. ನೋಟ್ ಬ್ಯಾನ್ ಭಾರತದ ಅಸಂಘಟಿತ ಆರ್ಥಿಕತೆಯ ಮೇಲಿನ ದಾಳಿಯಾಗಿತ್ತು ಮತ್ತು ಈ ದಾಳಿಯನ್ನು ನಾವು ಅರಿತುಕೊಳ್ಳಬೇಕಾಗಿದೆ ಹಾಗೂ ಇಡೀ ದೇಶ ಒಂದಾಗಿ ಇದರ ವಿರುದ್ಧ ಹೋರಾಡಬೇಕಾಗಿದೆ.”

ಅರ್ಥ ವ್ಯವಸ್ಥೆಯ ಕುರಿತಂತೆ ಮತ್ತೊಮ್ಮೆ ಪ್ರಧಾನಿ ಮೋದಿ ಮತ್ತು ಅವರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನ ನಿಕಟಪೂರ್ವ ಅಧ್ಯಕ್ಷ ರಾಹುಲ್ ಗಾಂಧಿ, ಈ ಕುರಿತಂತೆ ಮತ್ತೊಂದು ವಿಡಿಯೋ ಬಿಡುಗಡೆಗೊಳಿಸಿದ್ದಾರೆ.

- Advertisement -

“2016ರ ನವೆಂಬರ್ 8ರಂದು ರಾತ್ರಿ 8 ಗಂಟೆಯ ಹೊತ್ತಿಗೆ ಪ್ರಧಾನಿಯವರು ನೋಟ್ ಬ್ಯಾನ್ ನಿರ್ಧಾರ ಕೈಗೊಂಡರು. ರೂ.500, 1000ದ ಮುಖಬೆಲೆಯ ನೋಟುಗಳನ್ನು ನಿಷೇಧಿಸಿದರು. ಇಡೀ ಭಾರತವು ಬ್ಯಾಂಕುಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿತು. ಈ ಬಗ್ಗೆ ಮೊದಲ ಪ್ರಶ್ನೆ – ಕಪ್ಪು ಹಣ ತೊಲಗಿದೆಯೆ?, ಎರಡನೇ ಪ್ರಶ್ನೆ – ಭಾರತದ ಬಡ ಜನರಿಗೆ ನೋಟ್ ಬ್ಯಾನ್ ನ ಲಾಭ ದಕ್ಕಿದೆಯೇ? ಉತ್ತರ ಇಲ್ಲ. ಹಾಗಾದರೆ ಲಾಭವಾಗಿದ್ದು ಯಾರಿಗೆ?  ಲಾಭ ದೊರಕಿರುವುದು ದೇಶದ ಕೋಟ್ಯಾಧಿಪತಿಗಳಿಗೆ. ಸರಕಾರವು ನಿಮ್ಮಲ್ಲಿದ್ದ ಹಣವನ್ನು ಕಸಿದುಕೊಂಡು ಈ ಮಂದಿಯ ಸಾಲ ಮನ್ನಾಗೆ ಪ್ರಯೋಗಿಸಿತು. ಆದರೆ ಅದೊಂದೇ ಗುರಿಯಾಗಿರಲಿಲ್ಲ. ನಗದುರಹಿತವಾಗಿ ನಡೆಯುವ ನಮ್ಮ ಅನೌಪಚಾರಿಕ ಕ್ಷೇತ್ರ ಹಾಗೂ ಅಸಂಘಟಿತ ಆರ್ಥಿಕತೆಯ ಕ್ಷೇತ್ರವನ್ನು ತೊಡೆದು ಹಾಕುವ ಮತ್ತೊಂದು ಉದ್ದೇಶವೂ ಇದರ ಹಿಂದೆ ಅಡಗಿತ್ತು. ಸಣ್ಣ ಮಳಿಗೆದಾರನಾಗಿರಲಿ, ರೈತನಾಗಿರಲಿ, ಕಾರ್ಮಿಕನಾಗಿರಲಿ ಅವರೆಲ್ಲರೂ ನಗದು ಮೂಲಕವೇ ವ್ಯವಹಾರ ನಡೆಸುತ್ತಾರೆ.”

ತಾನು ಕ್ಯಾಶ್ ಲೆಸ್ ಇಂಡಿಯಾವನ್ನು ಬಯಸುತ್ತೇನೆ ಎಂದು ಪ್ರಧಾನಿ ಸ್ವತಃ ಹೇಳಿದ್ದಾರೆ. ಒಂದು ವೇಳೆ ಕ್ಯಾಶ್ ಲೆಸ್ ಇಂಡಿಯಾ ಆದರೆ, ಅಸಂಘಟಿತ ಅರ್ಥವ್ಯವಸ್ಥೆ ಅಂತ್ಯವಾಗಲಿದೆ. ಹೀಗಾದರೆ ನಷ್ಟವಾಗುವುದು ಯಾರಿಗೆ? ನಗದಿನ ಬಳಕೆ ಮಾಡುವವರು ಹಾಗೂ ನಗದು ಇಲ್ಲದೇ ಬದುಕಲು ಸಾಧ್ಯವಿಲ್ಲದ ರೈತರಿಗೆ, ಕಾರ್ಮಿಕರಿಗೆ, ಸಣ್ಣ ಮಳಿಗೆದಾರರಿಗೆ, ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಿಗಳಿಗೆ ಆಗಿದೆ.

“ನೋಟ್ ಬ್ಯಾನ್ ಭಾರತದ ಬಡವರು, ರೈತರು, ಕಾರ್ಮಿಕರು ಮತ್ತು ಸಣ್ಣ ಮಳಿಗೆದಾರರ ಮೇಲಿನ ಆಕ್ರಮಣವಾಗಿತ್ತು. ನೋಟ್ ಬ್ಯಾನ್ ಭಾರತದ ಅಸಂಘಟಿತ ಆರ್ಥಿಕತೆಯ ಮೇಲಿನ ದಾಳಿಯಾಗಿತ್ತು ಮತ್ತು ಈ ದಾಳಿಯನ್ನು ನಾವು ಅರಿತುಕೊಳ್ಳಬೇಕಾಗಿದೆ ಹಾಗೂ ಇಡೀ ದೇಶ ಒಂದಾಗಿ ಇದರ ವಿರುದ್ಧ ಹೋರಾಡಬೇಕಾಗಿದೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

- Advertisement -