ಭೋಪಾಲ್: ಬುಡಕಟ್ಟು ಜನಾಂಗದ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜಿಸಿ ವಿಕೃತಿ ಮೆರೆದಿದ್ದ ಬಿಜೆಪಿ ಕಾರ್ಯಕರ್ತನನ್ನು ಮಂಗಳವಾರ ತಡರಾತ್ರಿ ಬಂಧಿಸಲಾಗಿದೆ.
ಮಧ್ಯಪ್ರದೇಶದಲ್ಲಿ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ವೀಡಿಯೋವೊಂದು ವೈರಲ್ ಆಗಿದೆ. ಅದರಲ್ಲಿ ನೆಲೆದ ಮೇಲೆ ಕುಳಿತಿರುವ ವ್ಯಕ್ತಿಯೊಬ್ಬರ ಮೇಲೆ ಆರೋಪಿ ಸಿಗರೇಟ್ ಸೇದುತ್ತಾ ಅಮಲೇರಿದ ಸ್ಥಿತಿಯಲ್ಲಿ ಮೂತ್ರವಿಸರ್ಜಿಸಿರುವುದು ಕಂಡುಬಂದಿದೆ. ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ ಮಧ್ಯಪ್ರದೇಶದ ರಾಜಕೀಯದಲ್ಲಿ ಗದ್ದಲ ಉಂಟಾಗಿದೆ.
ಆರೋಪಿ ವ್ಯಕ್ತಿಯನ್ನು ಪ್ರವೇಶ್ ಶುಕ್ಲಾ ಎಂದು ಗುರುತಿಸಲಾಗಿದ್ದು, ಆತ ಬಿಜೆಪಿಯ ಸಕ್ರಿಯ ಕಾರ್ಯಕರ್ತ ಎಂದು ತಿಳಿದುಬಂದಿದೆ. ಮಾತ್ರವಲ್ಲದೇ ರೇವಾದ ಬಿಜೆಪಿ ಶಾಸಕ ರಾಜೇಂದ್ರ ಶುಕ್ಲಾ ಅವರೊಂದಿಗಿನ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ. ಹಲವು ಕಾಂಗ್ರೆಸ್ ನಾಯಕರು ವೈರಲ್ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ವೀಡಿಯೋ ವೈರಲ್ ಆಗುತ್ತಿದ್ದಂತೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಆತನ ವಿರುದ್ಧ ಕಟ್ಟುನಿಟ್ಟಿನ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಆದೇಶಿಸಿದ್ದರು.